ಸೋಮರಡ್ಡಿ ಅಳವಂಡಿಕೊಪ್ಪಳ: ಗೊಂದಲ, ಗಲಾಟೆಗಳು ಇಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮದೊಂದಿಗೆ ಎರಡು ದಿನಗಳ ಕನಕಗಿರಿ ಉತ್ಸವಕ್ಕೆ ಭಾನುವಾರ ತಡರಾತ್ರಿ ವೈಭವದ ತೆರೆ ಬಿದ್ದಿತು.ಒಂಬತ್ತು ವರ್ಷಗಳ ಬಳಿಕ ಆಯೋಜನೆಗೊಂಡ ಕನಕಗಿರಿ ಉತ್ಸವಕ್ಕೆ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಕ್ಷೇತ್ರದವರು ಎನ್ನುವುದು ವಿಶೇಷ.ಕೊಪ್ಪಳ ಜಿಲ್ಲೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಒಲಿದಿರುವುದು ಇದೇ ಮೊದಲು. ಹೀಗಾಗಿ, ಕನಕಗಿರಿ ಉತ್ಸವದ ಕುರಿತು ಬಹಳಷ್ಟು ನಿರೀಕ್ಷೆ ಇದ್ದವು. ಅದನ್ನು ಮೀರಿ ಯಶಸ್ಸು ಕಂಡಿದೆ ಎನ್ನುವುದು ಜನರ ಅಭಿಪ್ರಾಯ.ಮೆರವಣಿಗೆಯಲ್ಲಿ ಭಾಗವಹಿಸಿದ ತಂಡಗಳು ಸುಮಾರು 37 ಎನ್ನುವುದು ದಾಖಲೆಯೇ ಸರಿ. ಹಿಂದೆಂದೂ ಇಷ್ಟೊಂದು ಕಲಾ ತಂಡಗಳಿಗೆ ಅವಕಾಶ ನೀಡಿದ ಉದಾಹರಣೆ ಉತ್ಸವದಲ್ಲಿ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.ಇನ್ನು ಕನಕಗಿರಿ ಉತ್ಸವ ನಿಮಿತ್ತ ಡಾ. ಪುಟ್ಟರಾಜ ಗವಾಯಿಗಳ ವೇದಿಕೆ ಮತ್ತು ರಾಜಾ ಉಡಚಪ್ಪ ನಾಯಕ ಎನ್ನುವ ಮತ್ತೊಂದು ವೇದಿಕೆ ಮಾಡಿ, ಎರಡು ವೇದಿಕೆಯಲ್ಲಿಯೂ ತಡರಾತ್ರಿ ವರೆಗೂ ಕಾರ್ಯಕ್ರಮಗಳು ನಡೆದಿರುವುದು ವಿಶೇಷ.ಎರಡು ವೇದಿಕೆಯಲ್ಲಿಯೂ ಎರಡು ದಿನಗಳ ಕಾಲ ಸೇರಿ 200ಕ್ಕೂ ಹೆಚ್ಚು ತಂಡಗಳಿಗೆ ಅವಕಾಶ ಮಾಡಿಕೊಡಲಾಗಿರುವುದು ಸಹ ವಿಶೇಷ ಎನ್ನಲಾಗಿದೆ.ಸ್ಧಳೀಯ ಕಲಾವಿದರು ಸೇರಿದಂತೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಗೂ ಅವಕಾಶ ನೀಡಲಾಗಿದೆ ಎನ್ನುವುದು ಪ್ರಸಂಶೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಕನಕಗಿರಿ ಉತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ನಿರ್ಲಕ್ಷ್ಯ ಮಾಡಿ, ಹೊರಗಿನಿಂದ ಬಂದಿರುವ ಸಿನಿಮಾ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಇಂಥ ಆರೋಪಕ್ಕೆ ಅವಕಾಶ ಇಲ್ಲದಂತೆ ಸ್ಥಳೀಯ ಕಲಾವಿದರನ್ನು ಗೌರವದಿಂದ ಕಾಣಲಾಗಿದೆ ಎನ್ನುವುದು ಕಲಾವಿದರ ವಲಯದಲ್ಲಿ ಕೇಳಿ ಬಂದ ಮಾತು.ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹರ್ಷಿಕಾ ಪೂಣಚ್ಚ ತಂಡ ವಿಶೇಷ ಗಮನ ಸೆಳೆದರೆ, ಅರ್ಜುನ್ ಇಟಗಿ ಯುಗಳ ಸಂಗೀತ ಕಾರ್ಯಕ್ರಮದಲ್ಲಿ ಕರಿಮಣಿ ಮಾಲೀಕ ನೀನಲ್ಲ ಎನ್ನುವ ಹಾಡಿಗೆ ಜನರು ಹುಚ್ಚೆದ್ದು ಕುಣಿದರು. ರಾಜೇಶ ಕೃಷ್ಣನ್ ತಂಡ ಮೋಡಿ ಮಾಡಿತು.
ಎರಡನೇ ದಿನವಾದ ಭಾನುವಾರ ಸ್ಥಳೀಯ ಕಲಾವಿದರಾದ ಜೀವನಸಾಬ್ ಬಿನ್ನಾಳ ತಂಡ ಹಾಗೂ ಬಾಷಾ ಹಿರೇಮನಿ ತಂಡದ ಹಾಡಿಗೆ ಜನರು ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದರು.ಎದೆತುಂಬಿ ಹಾಡುವೆನು ಖ್ಯಾತಿಯ ಸೂರ್ಯಕಾಂತ ಅವರ ಹಾಡಂತೂ ಮನಸೂರೆಗೊಂಡಿತು.ಬಿಗ್ ಬಾಸ್ ಖ್ಯಾತಿಯ ನಮೃತಾ ಡಾನ್ಸ್, ಅನನ್ಯ ಭಟ್ ಅವರ ತಂಡ ಮೋಡಿ ಮಾಡಿ, ತಾರಾ ಮೆರಗು ನೀಡಿತು.ವಿಚಾರ ಗೋಷ್ಠಿ:ಪ್ರತ್ಯೇಕ ವೇದಿಕೆಯಲ್ಲಿ ವಿಚಾರಗೋಷ್ಠಿ ನಡೆಸಲಾಯಿತು. ಡಾ. ಪುಟ್ಟರಾಜ ಗವಾಯಿ ವೇದಿಕೆಯಲ್ಲಿ ನಡೆದ ಕವಿಗೋಷ್ಠಿ, ವಿಚಾರಗೋಷ್ಠಿ, ಮಹಿಳಾಗೋಷ್ಠಿಯಲ್ಲಿ ಅಷ್ಟಾಗಿ ಜನರು ಪಾಲ್ಗೊಂಡಿರಲಿಲ್ಲ. ಕೇವಲ ಬೆರಳೆಣಿಕೆಯ ಕೇಳುಗರ ಮುಂದೆ ಉಪನ್ಯಾಸಕರು ಬೇಸರದಿಂದಲೇ ತಮ್ಮ ಉಪನ್ಯಾಸ ನೀಡಿದರು.ಎರಡು ದಿನಗಳ ಕಾಲವೂ ಈ ವೇದಿಕೆಯಲ್ಲಿ ಜನರು ಇಲ್ಲದೇ ಸಪ್ಪೆಯಾಗಿಯೇ ಇರುವುದು ಕಂಡು ಬಂದಿತು. ಹೀಗಾಗಿ, ಪ್ರತ್ಯೇಕ ವೇದಿಕೆಯ ಮೇಲೆ ವಿಚಾರಗೋಷ್ಠಿಗಳನ್ನು ನಡೆಸಿದರೆ ಮುಖ್ಯವೇದಿಕೆಯಲ್ಲಿಯೇ ವಿಚಾರಗೋಷ್ಠಿಗಳನ್ನು ನಡೆಸಬೇಕು ಎಂದು ಸಾಹಿತಿಗಳು ಗೊಣಗಿಕೊಂಡರು.ಮಂಥನವಾಗಲಿಲ್ಲ:ಮುಖ್ಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ವಿಷಯ ಮಂಡನೆಯಾಗಲಿಲ್ಲ. ಕೇವಲ ರಾಜಕೀಯ ನಾಯಕರ ಭಾಷಣಕ್ಕೆ ಸೀಮಿತವಾಯಿತು. ಸ್ಥಳೀಯ ಇತಿಹಾಸ ತಜ್ಞರ ಮೂಲಕ ಮುಖ್ಯಮಂತ್ರಿಗೆ ಕನಕಗಿರಿಯ ಐತಿಹಾಸಿಕ ಚರಿತ್ರೆ ತೆರೆದಿಡುವ ಪ್ರಯ್ನಕ್ಕಾಗಿ ಕನಿಷ್ಠ ಅರ್ಧ ಗಂಟೆಯಾದರೂ ಸಮಯಾವಕಾಶ ನೀಡಬೇಕಾಗಿತ್ತು ಎನ್ನುವ ಕೊರಗು ಕೇಳಿ ಬಂದಿತು.ಮಿಂಚಿದ ಸಚಿವ ತಂಗಡಗಿ: ಎರಡು ದಿನಗಳ ನಡೆದ ಕನಕಗಿರಿ ಉತ್ಸವದಲ್ಲಿ ಸಚಿವ ಶಿವರಾಜ ತಂಗಡಗಿ ಮಿಂಚಿದರು. ಅಷ್ಟೇ ಮುತುವರ್ಜಿ ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.ನನಗೆ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ ಎನ್ನುತ್ತಲೇ ಎಲ್ಲವನ್ನು ಸೂಕ್ಷ್ಮವಾಗಿ ಆಯೋಜನೆ ಮಾಡಿ, ಕಲಾವಿದರು ಮತ್ತು ಸಾಹಿತಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ಜತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಆಯೋಜಿಸಿ ಸಿಎಂ ಸಿದ್ದರಾಮಯ್ಯ ಕಡೆಯಿಂದಲೂ ಶಹಬ್ಬಾಸ್‌ಗಿರಿ ಪಡೆದರು.ಶ್ರಮಿಸಿದ ಅಧಿಕಾರಿಗಳು: ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಕಾರ್ಯಕ್ರಮ ಆಯೋಜನೆ ಸೇರಿದಂತೆ ಇಡೀ ಉತ್ಸವ ಅಚ್ಚುಕಟ್ಟಾಗಿ ನಡೆಯುವಲ್ಲಿ ಖುದ್ದು ಸ್ಥಳೀಯದಲ್ಲಿಯೇ ಇದ್ದು ಶ್ರಮಿಸಿದರು. ಯಾವುದೇ ಸಮಸ್ಯೆಯಾಗದಂತೆಯೂ ನಿಭಾಯಿಸಿದರು. ಇನ್ನು ಎಸ್ಪಿ ಯಶೋದಾ ವಂಟಿಗೋಡಿ ಬಂದೋಬಸ್ತ್ ಕಲ್ಪಿಸಿದ್ದರು.