ಪುರುಷ ಪ್ರಧಾನ ಶ್ರೀ ಮಹೇಶ್ವರ ಜಾತ್ರೆಗೆ ಅದ್ಧೂರಿ ಚಾಲನೆ

KannadaprabhaNewsNetwork | Published : Dec 25, 2024 12:46 AM

ಸಾರಾಂಶ

ಮಹಿಳೆಯರ ನೆರಳೂ ಬೀಳದ, ಪುರುಷರೇ ಪ್ರಧಾನವಾದ, ಗುಡಿಯೇ ಇಲ್ಲದ ಅದ್ಧೂರಿ ಜಾತ್ರೆಯೊಂದು ಕಳೆದ ಎರಡು ಶತಮಾನಗಳಿಂದಲೂ ನಗರದ ಹೊರವಲಯದ ಬಸಾಪುರ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದುಕೊಂಡು ಬಂದಿದೆ. ಇಂಥ ವಿಶಿಷ್ಟ ಮಹೇಶ್ವರ ಸ್ವಾಮಿ ಜಾತ್ರೆ ಮಂಗಳವಾರ ನಗರದ ವಿವಿಧೆಡೆ ಸೇರಿದಂತೆ ಜಿಲ್ಲೆಯ ಕೆಲವು ಕಡೆ ಶ್ರದ್ಧಾಭಕ್ತಿದಿಂದ ನೆರವೇರಿತು.

- ಗುಡಿಯೇ ಇಲ್ಲದ ದೊಡ್ಡ ಜಾತ್ರೆ, ಮಹಿಳೆಯರಿಗೆ ಅವಕಾಶವಿಲ್ಲದ ಸಂಪ್ರದಾಯ । ಮೊದಲ ದಿನ ಅನ್ನ, ಬಾಳೆ, ಬೋರಾ ಸಕ್ಕರೆ ಪ್ರಸಾದ ಸೇವೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳೆಯರ ನೆರಳೂ ಬೀಳದ, ಪುರುಷರೇ ಪ್ರಧಾನವಾದ, ಗುಡಿಯೇ ಇಲ್ಲದ ಅದ್ಧೂರಿ ಜಾತ್ರೆಯೊಂದು ಕಳೆದ ಎರಡು ಶತಮಾನಗಳಿಂದಲೂ ನಗರದ ಹೊರವಲಯದ ಬಸಾಪುರ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದುಕೊಂಡು ಬಂದಿದೆ. ಇಂಥ ವಿಶಿಷ್ಟ ಮಹೇಶ್ವರ ಸ್ವಾಮಿ ಜಾತ್ರೆ ಮಂಗಳವಾರ ನಗರದ ವಿವಿಧೆಡೆ ಸೇರಿದಂತೆ ಜಿಲ್ಲೆಯ ಕೆಲವು ಕಡೆ ಶ್ರದ್ಧಾಭಕ್ತಿದಿಂದ ನೆರವೇರಿತು.

ಮಹೇಶ್ವರ ಸ್ವಾಮಿ ತೋಟದಲ್ಲಿ ತೆಂಗಿನ ಗರಿಗಳಲ್ಲಿ ತಾತ್ಕಾಲಿಕವಾಗಿ ಕಟ್ಟಿದ ಶ್ರೀ ವೀರ ಮಹೇಶ್ವರ ದೇವಸ್ಥಾನಕ್ಕೆ ತೀವ್ರ ಬರಗಾಲದಲ್ಲೂ ಬತ್ತದ, ಖಾಲಿಯಾಗದ ಮಹೇಶ್ವರ ಸ್ವಾಮಿ ತೋಟದ ಕೊಳ (ಪುಷ್ಕರಣಿ)ದಿಂದ ಮಂಗಳವಾರ ಮಡಿನೀರನ್ನು ತಂದು ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಆಚರಣೆ ಆರಂಭಗೊಂಡಿತು.

ಜಾತ್ರೆ ಅಂಗವಾಗಿ ಮೊದಲ ದಿನ ಮಂಗಳವಾರ ತೆಂಗಿನ ಗರಿಯಿಂದ ಕಟ್ಟುವ ತಾತ್ಕಾಲಿಕ ಚಪ್ಪರದಲ್ಲೇ ಸ್ವಾಮಿಗೆ ಪೂಜಿಸಲಾಯಿತು. ಬಾಳೆಹಣ್ಣು, ಬೋರಾ ಸಕ್ಕರೆಯೇ ಇಲ್ಲಿ ಪ್ರಸಾದ. ಅನ್ನ, ಸಾರು ಎಡೆ ಹಿಡಿಯುವ ಮೂಲಕ ಭಕ್ತಾದಿಗಳಿಗೆ ಮಹಾ ಪ್ರಸಾದವಾಗಿ ನೀಡಲಾಯಿತು. ಪ್ರತಿವರ್ಷ ಡಿಸೆಂಬರ್‌ನಲ್ಲಿ ಮಧ್ಯದಲ್ಲಿ ಸೋಮವಾರದಿಂದ 3 ದಿನಗಳ ಕಾಲ ಜಾತ್ರೋತ್ಸವ ನಡೆಯುತ್ತದೆ.

ಚನ್ನಗಿರಿ ತಾಲೂಕಿನ ಚಿಕ್ಕಲಿಕೆರೆ ಗ್ರಾಮದಲ್ಲೂ ಇಂತಹ ಜಾತ್ರೆ ನಡೆಯುತ್ತದೆ. ವಿರಕ್ತರಾದ ಶ್ರೀ ಮಹೇಶ್ವರರು ಬಸಾಪುರದ ಅಂಗಡಿ ಕೆಂಚಬಸಪ್ಪ, ಅಂಗಡಿ ಬಸವಲಿಂಗಪ್ಪನವರ ತೋಟದಲ್ಲಿ 2 ಶತಮಾನಗಳ ಹಿಂದೆ ಜೀವಂತ ಸಮಾಧಿಯಾಗಿದ್ದರು. ಆಗಿನಿಂದಲೂ ಪ್ರತಿ ಡಿಸೆಂಬರ್ ಮಧ್ಯ ಭಾಗದಲ್ಲಿ ಸೋಮವಾರ, ಮಂಗಳವಾರ, ಬುಧವಾರದಂದು 3 ದಿನ ಜಾತ್ರೋತ್ಸವ ನಡೆಯುತ್ತದೆ. ಶ್ರೀ ಮಹೇಶ್ವರರು ಜೀವಂತ ಸಮಾಧಿಯಾದ ಪುಣ್ಯ ಸ್ಥಳವೂ ಸೇರಿದಂತೆ ಒಟ್ಟು 1 ಎಕರೆ ಭೂಮಿಯನ್ನು ಇಂದಿಗೂ ಶ್ರೀ ಮಹೇಶ್ವರ ಸ್ವಾಮಿಯ ತೋಟವೆಂದೇ ಗುರುತಿಸಲಾಗಿದೆ. ಶ್ರೀ ಮಹೇಶ್ವರರು ಜೀವಂತ ಸಮಾಧಿಯಾದ ಸ್ಥಳ, ತೋಟವನ್ನು ಶ್ರೀ ಮಹೇಶ್ವರ ಸ್ವಾಮಿ ಸೇವಾ ಟ್ರಸ್ಟ್ ನೋಡಿಕೊಳ್ಳುತ್ತದೆ.

ಅಂಗಡಿ ವಂಶಸ್ಥರು ಜಾಗವನ್ನು ಟ್ರಸ್ಟ್‌ಗೆ ಬಿಟ್ಟುಕೊಟ್ಟಿದ್ದಾರೆ. ಬಯಲಲ್ಲಿ ಬಯಲಾಗಿ, ಜೀವಂತ ಸಮಾಧಿಯಾದ ಮಹೇಶ್ವರರಿಗೆ ಗುಡಿ ಕಟ್ಟುವಂತಿಲ್ಲವೆಂಬ ಪ್ರತೀತಿ ಇದೆ. ಯಾರೊಬ್ಬರೂ ಗುಡಿ ಕಟ್ಟುವ ಪ್ರಯತ್ನವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ಹೆಣ್ಣುಮಕ್ಕಳು ಈ ಜಾತ್ರೆಗೆ ಬರುವಂತಿಲ್ಲ. ಇಂದಿಗೂ ಗ್ರಾಮದ ಮಹಿಳೆಯರು ಇದನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಪೂರ್ವಿಕರು ಹಾಕಿಕೊಟ್ಟ ನಿಯಮ, ಪದ್ಧತಿ, ಆಚರಣೆಯನ್ನು ಬಪಾಪುರ ವಾಸಿಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಜಾತ್ರೆ ವೇಳೆ ಯಾವೊಬ್ಬ ಹೆಣ್ಣು ಮಕ್ಕಳೂ ಅತ್ತ ಕಡೆ ಹೋಗುವುದಿಲ್ಲ, ಜಾತ್ರೆ ಮುಗಿದ ಮಾರನೆಯ ದಿನ ಹೆಣ್ಣುಮಕ್ಕಳಷ್ಟೇ ಅಲ್ಲಿಗೆ ಹೋಗಿ, ಊಟ ಮಾಡಿ ಬರುತ್ತಿದ್ದ ಸಂಪ್ರದಾಯವೂ ಈಚೆಗೆ ಕಾಣುತ್ತಿಲ್ಲ. ಜಾತ್ರೆ ವೇಳೆ ಬಸಾಪುರ, ಆನೆಕೊಂಡ, ಬೇತೂರು, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಮಡಿ ಉಡಿಯಿಂದ ಜಾತ್ರೆಗೆ ಬರುತ್ತಾರೆ. ಜಾತ್ರೆಯ ಮೊದಲ 2 ದಿನದ ಅನ್ನ, ಹಾಲು, ಬೋರಾ ಸಕ್ಕರೆ ಪ್ರಸಾದವಿರುತ್ತದೆ.

- - -

ಬಾಕ್ಸ್‌-1* ಇಂದು, ಅನ್ನ, ಮಜ್ಜಿಗೆ ಸಾರು ಪ್ರಸಾದ

ಮೂರನೇ ದಿನವಾದ ಬುಧವಾರ ಅನ್ನ, ಮಜ್ಜಿಗೆ ಸಾರು ಪ್ರಸಾದವಿರುತ್ತದೆ. ಆನೆಕೊಂಡ, ಬಸಾಪುರ ಶ್ರೀ ಬಸವೇಶ್ವರ ಸ್ವಾಮಿಗಳು, ಶ್ರೀ ಗುರು ಸಿದ್ದೇಶ್ವರ ಸ್ವಾಮಿ, ಶ್ರೀ ಹಾಲಸಿದ್ದೇಶ್ವರ ಸ್ವಾಮಿ ಶ್ರೀ ಮಹೇಶ್ವರ ಸ್ವಾಮಿ ತೋಟಕ್ಕೆ ಬಿಜಂಗೈಯ್ಯುತಾರೆ. ಮಧ್ಯ ಕರ್ನಾಟಕದಲ್ಲಿ ಬಸಾಪುರ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಯೆಂದರೆ ಭಕ್ತರ ಮನದಲ್ಲಿ ಬಾಳೆಹಣ್ಣು, ಬೋರಾ ಸಕ್ಕರೆ, ಹಾಲು, ಮೊಸರು, ಮಜ್ಜಿಗೆ ಸಾರಿನ ಪ್ರಸಾದ ಬಂದು ಹೋಗುತ್ತದೆ. ಬಯಲಲ್ಲಿ ಬಯಲಾದ ಶ್ರೀ ವೀರ ಮಹೇಶ್ವರರು ಸ್ಮೃತಿ ಪಟಲದಲ್ಲಿ ಮೂಡುತ್ತಾರೆ.

- - -

ಬಾಕ್ಸ್‌-2 * ಧಾನ್ಯಗಳ ಮೆರವಣಿಗೆ

ಜಾತ್ರೆ ಅಂಗವಾಗಿ ಅಕ್ಕಿ, ಬೇಳೆ, ಬೋರಾ ಸಕ್ಕರೆ, ಬಾಳೆಹಣ್ಣು, ಕಟ್ಟಿಗೆ ಇತರೆ ಪದಾರ್ಥಗಳನ್ನು ದಾವಣಗೆರೆಯಿಂದ ಬಸಾಪುರ, ಶ್ರೀ ಮಹೇಶ್ವರ ಸ್ವಾಮಿ ತೋಟದವರೆಗೂ ಜಾನಪದ ಮೇಳ, ಮಂಗಳವಾದ್ಯಗಳ ಸಮೇತ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ತರುವುದು ಮತ್ತೊಂದು ಆಚರಣೆಯ ಮತ್ತೊಂದು ವಿಶೇಷ.

- - -

* ರಾಷ್ಟ್ರಕವಿ ಜಿಎಸ್‌ಎಸ್‌ ನೆಚ್ಚಿನ ಜಾತ್ರೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ದಾವಣಗೆರೆಯಲ್ಲೇ ಓದಿ, ಬೆಳೆದಂತಹವರು. ತಮ್ಮ ಕವಿತೆಯೊಂದರಲ್ಲಿ ಜಿಎಸ್‌ಎಸ್ ಬಸಾಪುರ ಗ್ರಾಮದ ಶ್ರೀ ವೀರ ಮಹೇಶ್ವರ ಸ್ವಾಮಿ ಜಾತ್ರೆಯ ಬಗ್ಗೆ ಪ್ರಸ್ತಾಪಿಸಿ, ಜಾತ್ರೆ ಮಹತ್ವವನ್ನು ಹಾಡಿ, ಹೊಗಳಿದ್ದಾರೆ. ರಾಷ್ಟ್ರಕವಿಯ ನೆಚ್ಚಿನ, ಮೆಚ್ಚಿನ ಜಾತ್ರೆಯೂ ಇದಾಗಿತ್ತೆಂಬುದು ಗಮನಾರ್ಹ ಅಂಶವಾಗಿದೆ.

- - - -24ಕೆಡಿವಿಜಿ11, 12:

ದಾವಣಗೆರೆಯ ಬಸಾಪುರದಲ್ಲಿ ಶ್ರೀ ವೀರ ಮಹೇಶ್ವರ ತೋಟದ ಪುಷ್ಕರಿಣಿಗೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು.

-24ಕೆಡಿವಿಜಿ13:

ದಾವಣಗೆರೆಯ ಬಸಾಪುರದ ಶ್ರೀ ವೀರ ಮಹೇಶ್ವರ ಜಾತ್ರೆಯಲ್ಲಿ ತೆಂಗಿನ ಗರಿಯ ಗುಡಿ ಎದುರು ಬಡವ, ಬಲ್ಲಿದ ಎನ್ನದೇ ಎಲ್ಲರೂ ಸಮಾನವಾಗಿ ನೆಲದ ಮೇಲೆ ಕುಳಿತೇ ಪ್ರಸಾದ ಸ್ವೀಕರಿಸುತ್ತಿರುವುದು.

Share this article