ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ರಾಜ್ಯಾದ್ಯಂತ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕ್ರಾಂತಿಕಾರಿ ಪಾದಯಾತ್ರೆ ಹೋರಾಟದ ಮುಖಂಡ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.ಕಿಕ್ಕೇರಿ ಹಾಗೂ ಗಂಗೇನಹಳ್ಳಿಗೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಜನಜಾಗೃತಿ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತು. ಸದಾಶಿವ ಆಯೋಗದ ಕುಂಟು ನೆಪ ಹೇಳಿಕೊಂಡು ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲ ಪಕ್ಷಗಳು ತಮ್ಮ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಮೋಸ ಮಾಡಿವೆ ಎಂದರು.
ಸುಪ್ರೀಂ ಕೋರ್ಟ್ ಒಳಮೀಸಲಾತಿಗೆ ರಚನೆ ಆದೇಶವಿದ್ದರೂ ಮಹದೇವಸ್ವಾಮಿ, ಹಾವನೂರು, ಕಾಂತರಾಜು ಆಯೋಗಗಳ ವರದಿ ಗೊತ್ತಿದ್ದರೂ ನಾಗಮೋಹನ್‌ದಾಸ್ ಮಧ್ಯಂತರ ವರದಿಯ ಮೀಸಲಾತಿ ಜಾರಿ ಮಾಡದೆ ಮೌನವಾಗಿದೆ ಎಂದರು.ಸಮುದಾಯದವರು ಒಳಮೀಸಲಾತಿಗಾಗಿ ಜಾಗೃತರಾಗಲು ಈ ರಥಯಾತ್ರೆ, ಪಾದಯಾತ್ರೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಮಹದೇಶ್ವರ ಬೆಟ್ಟದಿಂದ ಆರಂಭಿಸಿದ್ದು, ಸುಮಾರು 18 ಸಾವಿರ ಕಿ.ಮೀ ಕ್ರಾಂತಿಕಾರಿ ರಥಯಾತ್ರೆ ಬೀದರ್ ಜಿಲ್ಲೆಯವರಿಗೆ 60 ತಿಂಗಳಲ್ಲಿ ಕ್ರಮಿಸಲಾಗುವುದು. ಸರ್ಕಾರ 35 ವರ್ಷಗಳಿಂದ ವಂಚನೆ ಮಾಡುತ್ತ ಬಂದಿದೆ. ಪ್ರತಿ ಜಿಲ್ಲೆಯಲ್ಲಿ ಒಳಮೀಸಲಾತಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜೂ.9ರಂದು ಸಮುದಾಯದ ಎಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ನೀಡಿ ಸಮುದಾಯದ ನೋವು ತಿಳಿಸೋಣ. ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ನೋವು ಸರಿ ಪಡಿಸಿಕೊಳ್ಳಲೇಬೇಕಿದೆ ಎಂದರು.ಸರ್ಕಾರ ಒಳಮೀಸಲಾತಿ ರಚನೆ ಮಾಡದೆ ಉನ್ನತ ಹುದ್ದೆಗಳ ಭರ್ತಿ ಹಾಗೂ ಬಡ್ತಿ ನೀಡಿದೆ. ನಮ್ಮ ನೋವು ಒಳಮೀಸಲಾತಿ ರಚನೆ. ಧಮನಿತರ ಧ್ವನಿಗೆ ಶಕ್ತಿ ತುಂಬಲು ಸಮುದಾಯದ ಸಂಘಟನೆ, ಒಕ್ಕೋರಲಿನ ಕೂಗು ಬೇಕಿದೆ ಎಂದು ವಿನಂತಿಸಿದರು.
ಈ ವೇಳೆ ಮುಖಂಡರಾದ ಕೃಷ್ಣಯ್ಯ, ಹನುಮಯ್ಯ, ರಮೇಶ, ನಂಜಯ್ಯ, ಕಿಟ್ಟಯ್ಯ, ಪರಮೇಶ್, ಕುಮಾರಸ್ವಾಮಿ, ಸುಂದರ, ಶರತ್, ನಂಜುಂಡ, ರಂಗಸ್ವಾಮಿ, ಜಯರಾಂ, ರಾಮುಇದ್ದರು.