ಕನ್ನಡಪ್ರಭ ವಾರ್ತೆ ಚಳ್ಳಕೆರೆ
ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಜ್ಞಾನಭಾಗ್ಯ ನೀಡುವ ಶಿಕ್ಷಕರ ಆರೋಗ್ಯ ಭಾಗ್ಯ ಕಲ್ಪಿಸುವ ದೃಷ್ಠಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲಿಟಲ್ ಪ್ಲವರ್ ಆಂಗ್ಲಮಾದ್ಯಮ ಶಾಲೆ ಆಡಳಿತಾಧಿಕಾರಿ ಎಂ.ಸಂತೋಷ ತಿಳಿಸಿದರು.ಶನಿವಾರ ಶಾಲಾ ಆವರಣದಲ್ಲಿ ಶಾಲೆ ಶಿಕ್ಷಕರು, ಪೋಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನ ವೈದೇಹಿ ಆಸ್ಪತ್ರೆ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಶಿಕ್ಷಕರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪ್ರತಿನಿತ್ಯ ಪಾಠಮಾಡುವುದರಿಂದ ಸಾಕಷ್ಟು ಸಣ್ಣ, ಪುಟ್ಟ ಸಮಸ್ಯೆಗಳು ಅವರ ಆರೋಗ್ಯ ಹದಗೆಡಿಸಬಹುದಾಗಿದೆ. ಆದ್ದರಿಂದ ಆಡಳಿತ ಮಂಡಳಿ ಉಚಿತ ಆರೋಗ್ಯ ತಪಾಸಣೆ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಬಾಳಬೇಕೆಂಬ ಅಭಿಲಾಷೆಯಿಂದ ಈ ಕಾರ್ಯಕ್ರಮ ಏರ್ಪಡಿಸಿದೆ ಎಂದರು.
ವೈದೇಹಿ ಆಸ್ಪತ್ರೆ ಕೋಆಡಿನೇಟರ್ ಹರೀಶ್‌ಕುಮಾರ್ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಶಾಲೆ ಆಡಳಿತ ಮಂಡಳಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೋಷಕರು, ಶಿಕ್ಷಣ ನೀಡುವ ಗುರುಗಳ ಆರೋಗ್ಯದ ಬಗ್ಗೆ ಗಮನಹರಿಸುವುದು ಸಹ ಒಂದು ಉತ್ತಮ ಕೆಲಸ. ಶಾಲೆ ಆಡಳಿತ ಮಂಡಳಿ ನಮಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಿದೆ. ಪ್ರತಿಯೊಬ್ಬರಲ್ಲೂ ಆರೋಗ್ಯ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿ ಎಂದರು.ಮುಖ್ಯ ಶಿಕ್ಷಕಿ ಪಿ.ಮಮತ ಮಾತನಾಡಿ, ಇಂದು ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಪಾಲ್ಗೊಂಡು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ವೈದ್ಯರ ತಂಡವೂ ಸಹ ಪ್ರತಿಯೊಬ್ಬರ ಆರೋಗ್ಯ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದೆ. ಶಾಲೆಯಲ್ಲೇ ಈ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ. ಪ್ರತಿನಿತ್ಯ ಶಾಲಾ ಚಟುವಟಿಕೆಗಳ ಬಗ್ಗೆ ಗಮನ ನೀಡುವ ನಾವೆಲ್ಲರೂ ಆರೋಗ್ಯದ ಬಗ್ಗೆಯೂ ಹೆಚ್ಚು ಒತ್ತು ನೀಡಬೇಕೆಂಬುವುದು ಸತ್ಯವೆಂದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ರೇಖಾ, ಮಂಜುನಾಥರೆಡ್ಡಿ, ನಟರಾಜ್, ಮುಖ್ಯ ಶಿಕ್ಷಕ ಎನ್.ಮಂಜುನಾಥ, ಶಿಕ್ಷಕರಾದ ತಿಪ್ಪೇಸ್ವಾಮಿ, ಅಭಿಲಾಶ್, ಜಯಪ್ರಕಾಶ್, ಮಹಂತೇಶ್, ಹನುಮಂತರಾಯ, ಮಹಾಲಕ್ಮೀ, ಲಕ್ಮೀ, ಭಾರತಿ, ಹೀನಾ, ಗೌತಮಿ, ಕಮಲಾ, ರಾಧಾ, ಶಾರದಾ ಇತರರು ಭಾಗವಹಿಸಿದ್ದರು.