ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಶಕುನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳ ಕಬ್ಬಿನ ಗದ್ದೆಯಲ್ಲಿ ಆನೆಗಳು ಪತ್ತೆಯಾಗಿದ್ದು, ಗ್ರಾಮಗಳಿಗೆ ನುಗ್ಗುವ ಸಂಭವ ಇರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.ತಾಲೂಕಿನ ಗಡಿಭಾಗದ ಶಕುನವಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೊಂದಿ, ಸಾಬಾರ ಗ್ರಾಮಗಳ ಆಜುಬಾಜಿನ ಹೊಲಗದ್ದೆಗಳಲ್ಲಿ ಕಳೆದ 3 ಮೂರು ದಿನಗಳಿಂದ ಸಲಗ, ಹೆಣ್ಣಾನೆ ಮತ್ತು ಮರಿಯಾನೆ ಜೊತೆಯಾಗಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿವೆ. ಭತ್ತದ ಗದ್ದೆಯನ್ನು ಹಾಳು ಮಾಡಿರುವುದಲ್ಲದೇ ಕೋಡಂಬಿ, ಸಾಬಾರ, ಗೊಂದಿ, ಶಕುನವಳ್ಳಿ ರೈತರ ಗದ್ದೆಗಳಿಗೆ ನುಗ್ಗಿ ಕಬ್ಬಿನ ಬೆಳೆ ಹಾಳು ಮಾಡುತ್ತಿವೆ. ಮೂರು ಆನೆಗಳು ಎಲ್ಲಿಯೂ ತೆರಳದೇ ಅಲ್ಲಿಯೇ ಬೀಡುಬಿಟ್ಟಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಭಯಾರಣ್ಯದ ಯಲ್ಲಾಪುರ ಮೂಲಕ ಈ ಆನೆಗಳು ತಾಲೂಕಿನ ಗಡಿಯನ್ನು ದಾಟಿ ಬಂದಿವೆ. ನೀರು, ಆಹಾರ ಹುಡುಕಿ ಆನೆಗಳು ಬಂದಿರಬಹುದು ಎಂದು ಊಹಿಸಲಾಗಿದೆ. ಕಳೆದ ವರ್ಷ ಸಹ ಇದೇ ಸಮಯದಲ್ಲಿ ಜಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆಗಳ ಹಿಂದು ಕಂಡುಬಂದಿತ್ತು. ಅರಣ್ಯ ಇಲಾಖೆ ಬೆದರಿಸುವ ಮೂಲಕ ಆನೆಗಳನ್ನು ಕಾಡಿಗೆ ಅಟ್ಟಲಾಗಿತ್ತು.ಗೊಂದಿ-ಸಾಬಾರ ಗ್ರಾಮಗಳ ಮಧ್ಯೆ ಕಬ್ಬಿನ ಗದ್ದೆಯಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಆನೆಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕಾರಣದಿಂದ ಹೊಲ-ಗದ್ದೆಗಳಿಗೆ ಗ್ರಾಮಸ್ಥರು ತೆರಳದಂತೆ ಮನವಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗದ್ದೆಯಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
- - --26ಕೆಪಿಸೊರಬ01:
ಸೊರಬ ತಾಲೂಕಿನ ಶಕುನವಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೊಂದಿ-ಸಾಬಾರ ಗ್ರಾಮಗಳ ಮಧ್ಯೆ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿರುವ ಆನೆಗಳು.