ಆಹಾರ, ನೀರು ಅರಸಿ ಬರುವ ಹಕ್ಕಿಗಳಿಗೆ ಬೇಟೆಗಾರರ ಬಲೆ

KannadaprabhaNewsNetwork |  
Published : Mar 19, 2024, 12:46 AM IST
18ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕಂಡು ಬಂದ ಗ್ರೆಟರ್‌ ಫ್ಲೆಮಿಂಗೋ (ರಾಜಹಂಸ) ಹಕ್ಕಿಗಳು. (ಚಿತ್ರ- ಸಮದ್‌ ಕೊಟ್ಟೂರು) | Kannada Prabha

ಸಾರಾಂಶ

ಜಲಾಶಯದಲ್ಲಿ ನೀರು ಕಡಿಮೆಯಾಗಿರುವುದರಿಂದ ಹಿನ್ನೀರು ಪ್ರದೇಶದಲ್ಲಿ ಕೆಸರಿನಲ್ಲಿ ದೊರೆಯುವ ಹುಳು, ಹುಪ್ಪಡಿ ಸೇರಿದಂತೆ ಮೃದುಂಗಿ, ಇನ್ನು ಹಿನ್ನೀರು ಪ್ರದೇಶದಲ್ಲಿ ಸಿಗುವ ಸಣ್ಣ ಮೀನು, ಏಡಿ, ಸೀಗಡಿ ತಿನ್ನಲು ಪಕ್ಷಿಗಳು ಬರುತ್ತಿವೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ಮತ್ತು ಕಮಲಾಪುರ ಕೆರೆ ಮತ್ತು ಅಳ್ಳಿಕೆರೆ ಭಾಗದಲ್ಲಿ ಆಹಾರ ಮತ್ತು ನೀರು ಅರಸಿ ಬರುವ ಪಕ್ಷಿಗಳನ್ನು ಬೇಟೆಯಾಡಲಾಗುತ್ತಿದೆ. ಬಲೆ ಹಾಕಿ ಪಕ್ಷಿಗಳನ್ನು ಬೇಟೆಯಾಡುತ್ತಿರುವ ಹಿನ್ನೆಲೆಯಲ್ಲಿ ಈ ಅಪರೂಪದ ಪಕ್ಷಿಗಳನ್ನು ರಕ್ಷಣೆ ಮಾಡಲಿ ಎಂಬ ಕೂಗು ಈಗ ವನ್ಯಜೀವಿ ಪ್ರೇಮಿಗಳ ವಲಯದಿಂದ ಕೇಳಿ ಬರುತ್ತಿದೆ.

ಜಲಾಶಯದಲ್ಲಿ ನೀರು ಕಡಿಮೆಯಾಗಿರುವುದರಿಂದ ಹಿನ್ನೀರು ಪ್ರದೇಶದಲ್ಲಿ ಕೆಸರಿನಲ್ಲಿ ದೊರೆಯುವ ಹುಳು, ಹುಪ್ಪಡಿ ಸೇರಿದಂತೆ ಮೃದುಂಗಿ, ಇನ್ನು ಹಿನ್ನೀರು ಪ್ರದೇಶದಲ್ಲಿ ಸಿಗುವ ಸಣ್ಣ ಮೀನು, ಏಡಿ, ಸೀಗಡಿ ತಿನ್ನಲು ಪಕ್ಷಿಗಳು ಬರುತ್ತಿವೆ. ಕಮಲಾಪುರ ಕೆರೆ, ಅಳ್ಳಿಕೆರೆ ಭಾಗದಲ್ಲೂ ಆಹಾರ ಮತ್ತು ನೀರಿಗಾಗಿ ವಿವಿಧ ಜಾತಿಯ ಪಕ್ಷಿಗಳು ಬರಲಾರಂಭಿಸಿವೆ. ಆದರೆ, ಈಗ ಬಿಸಿಲಿನಲ್ಲಿ ನೀರು ಹಾಗೂ ಆಹಾರ ಅರಸಿ ಸ್ಥಳೀಯ ಹಕ್ಕಿಗಳೇ ವಲಸೆ ಬರಲಾರಂಭಿಸಿವೆ. ಇದರ ಜಾಡು ಹಿಡಿದ ಬೇಟೆಗಾರರು ಬಲೆ ಹಾಕಿ ಹಕ್ಕಿಗಳನ್ನು ಹಿಡಿಯುತ್ತಿದ್ದಾರೆ.

ಪಕ್ಷಿಗಳ ವಲಸೆ: ಜಲಾಶಯದ ಹಿನ್ನೀರು ಪ್ರದೇಶ, ಕಮಲಾಪುರ ಕೆರೆ, ಅಳ್ಳಿಕೆರೆ ಪ್ರದೇಶದಲ್ಲಿ ಬೇಸಿಗೆಕಾಲದಲ್ಲಿ ವಿದೇಶಿ ಹಕ್ಕಿಗಳು ಕಾಣಸಿಗುವುದಿಲ್ಲ. ಆದರೆ, ಸ್ಥಳೀಯ ಹಕ್ಕಿಗಳೇ ವಲಸೆ ಬರುತ್ತವೆ. ಅದರಲ್ಲೂ ನೀರು, ಆಹಾರ ಅರಸಿ ಈ ಪಕ್ಷಿಗಳು ನೀರು ದೊರೆಯುವ ಸ್ಥಳಕ್ಕೆ ಬರಲಾರಂಭಿಸಿವೆ. ಪಕ್ಷಿಗಳು ರಾತ್ರಿ ಹೊತ್ತಿನಲ್ಲೂ ಹಾರಾಟ ನಡೆಸುತ್ತವೆ. ಅದರಲ್ಲೂ ನಕ್ಷತ್ರ ಬಳಸಿ ಹಕ್ಕಿಗಳು ದಿಕ್ಕು ತಿಳಿಯಲಿವೆ ಎನ್ನುತ್ತಾರೆ ಪಕ್ಷಿತಜ್ಞರು.ಪಕ್ಷಿಗಳು ಗಡಿ, ದೇಶವನ್ನು ಮೀರಿ ಆಹಾರ, ನೀರು ಅರಸಿ ವಲಸೆ ಬರುತ್ತವೆ. ಈಗ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಅಂತರ್‌ ಜಿಲ್ಲೆಗಳಿಂದ ಪಕ್ಷಿಗಳು ಬರುತ್ತಿವೆ. ಅದರಲ್ಲೂ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಗದಗ, ರಾಯಚೂರು, ವಿಜಯಪುರ, ಬಾಗಲಕೋಟ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಬರಲಾರಂಭಿಸಿವೆ.ಯಾವ್ಯಾವ ಹಕ್ಕಿಗಳು: ಈ ಪ್ರದೇಶದಲ್ಲಿ ಈಗ ಹೆಜ್ಜಾರ್ಲೆ, ಗ್ರೆಟರ್‌ ಫ್ಲೆಮಿಂಗೋ (ರಾಜಹಂಸ), ದಾಸ ಕೊಕ್ಕರೆ, ಬಾಯಿ ಕಾಳಕ, ಬಿಳಿ ಕೊಕ್ಕರೆ, ಬಿಳಿ ಕತ್ತಿನ ಕೊಕ್ಕರೆ, ಕೆಂಬರಳು ಹಕ್ಕಿ, ಕಪ್ಪು ಕೊಕ್ಕರೆ, ಪಾರಿವಾಳ, ಗುಬ್ಬಚ್ಚಿ, ಗಿಜುಗ ಸೇರಿದಂತೆ ವಿವಿಧ ಬಗೆಯ ಪಕ್ಷಿಗಳು ನೀರು ಹಾಗೂ ಆಹಾರ ಅರಸಿ ಬರುತ್ತಿವೆ. ಪಕ್ಷಿಗಳ ವಲಸೆಯನ್ನೇ ದಾಳವನ್ನಾಗಿಸಿಕೊಂಡು, ಬೇಟೆಗಾರರು ಬಲೆಹಾಕಿ ಹಕ್ಕಿಗಳನ್ನು ಹಿಡಿಯುತ್ತಿದ್ದಾರೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬುದು ವನ್ಯಜೀವಿ ಪ್ರೇಮಿಗಳ ಆರೋಪ.

ಜಾಗೃತಿ ಮೂಡಿಸಲಿ: ಪಕ್ಷಿಗಳು ಆಹಾರ, ನೀರಿಗಾಗಿ ಬರುತ್ತಿವೆ. ಅವುಗಳ ಜೀವ ತೆಗೆಯಲಾಗುತ್ತಿದೆ. ಪಕ್ಷಿ ಸಂಕುಲ ಉಳಿವಿಗೆ ಅರಣ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಬೇಟೆಗಾರರ ವಿರುದ್ಧ ಎಫ್‌ಐಆರ್‌ ಹಾಕಿ ಕ್ರಮ ಜರುಗಿಸಲಿ ಎಂಬುದು ವನ್ಯಜೀವಿ ಪ್ರೇಮಿಗಳ ಆಗ್ರಹ.ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಿನ್ನೀರು ಪ್ರದೇಶ, ಕೆರೆಗಳ ಬಳಿ ವೀಕ್ಷಣೆ ಮಾಡಬೇಕು. ಬೇಟೆಗಾರರು ಬಲೆ ಹಾಕಿದ್ದರೆ, ಅವುಗಳನ್ನು ವಶಪಡಿಸಿಕೊಳ್ಳಬೇಕು. ಬೇಟೆಗಾರರ ವಿರುದ್ಧ ಕ್ರಮ ಜರುಗಿಸಬೇಕು. ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ಪಕ್ಷಿಗಳ ರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ವನ್ಯಜೀವಿ ಪ್ರೇಮಿ ಸಮದ್ ಕೊಟ್ಟೂರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...