ಎಂ.ಕೆ.ಹರಿಚರಣ ತಿಲಕ್
ಸಂಚಿ ಹೊನ್ನಮ್ಮ, ತ್ರಿವೇಣಿ ವೇದಿಕೆ, ಮಂಡ್ಯಕನ್ನಡ ಭಾಷಿಕ ನೆಲೆಯನ್ನು ಏಕೀಕೃತ ನೆಲೆಗಟ್ಟಿನಲ್ಲಿ ನೋಡುವ ಬದಲು ಬಹುರೂಪಿ ನೆಲೆಗಟ್ಟಿನಲ್ಲಿ ನೋಡಬೇಕು ಎಂದು ಪ್ರಾಧ್ಯಾಪಕ ಡಾ ಡಿ.ಡೊಮೆನಿಕ್ ಅಭಿಪ್ರಾಯಪಟ್ಟಿದ್ದಾರೆ
ಇಲ್ಲಿ ನಡೆಯುತ್ತಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ 2ರಲ್ಲಿ ಭಾನುವಾರ ನಡೆದ ಸಂಕೀರ್ಣ ನೆಲೆಗಳು ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬರವಣಿಗೆಯ ಭಾಷೆಯನ್ನೇ ಸಾಮಾನ್ಯ ಕನ್ನಡಿಗರ ಭಾಷೆಯೆಂಬಂತೆ ನೋಡಲಾಗುತ್ತಿದೆ. ಕನ್ನಡ ಏಕೀಕೃತ ನೆಲೆಗಟ್ಟಿನಲ್ಲಿ ಬೆಳೆದಿಲ್ಲ. ಕನ್ನಡ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯಿಂದ ಕೂಡಿದ್ದು, ಬಹುರೂಪಿ ನೆಲೆಗಟ್ಟಿನಲ್ಲಿ ಬೆಳೆದಿದೆ. ಬರವಣಿಗೆಯ ಕನ್ನಡದ ಜೊತೆ ಜೊತೆಯಲ್ಲೇ ಕಿವಿ, ಕಣ್ಣು, ಬಾಯಿ ಮತ್ತು ಮೂಗಿನ ಕನ್ನಡವೂ ಇದೆ. ಜನರ ಸೊಲ್ಲರಿಮೆಗೆ ಒಂದು ಭೂಗೋಳ ಇರುತ್ತದೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ನಾವು ಭಾಷೆಯ ಸ್ವರೂಪ ನಿರ್ಧರಿಸಲು ಸಾಧ್ಯವಿಲ್ಲ ಎಂದರು.
ಸಾಹಿತ್ಯಿಕ ಭಾಷಾ ಬಳಕೆಯನ್ನು ಸಾಮಾನ್ಯ ಕನ್ನಡ ಭಾಷಿಕರ ಮೇಲೆ ಪ್ರಭಾವಿಸುವುದು ಸಲ್ಲದು. ಕನ್ನಡವನ್ನು ಒಂದು ಸಂಕೀರ್ಣ ನೆಲೆಗಟ್ಟಿನಲ್ಲಿ ನೋಡಬೇಕು. ನಮ್ಮ ಮೂಲ ನಿವಾಸಿಗಳು ಮತ್ತು ಬುಡಕಟ್ಟು ಸಮುದಾಯಗಳನ್ನು ಏಕೀಕರಿಸಿ ನೋಡಲಾಗುತ್ತಿದ್ದು, ಇದು ಸರಿಯಲ್ಲ. ಪ್ರತಿಯೊಂದು ಬುಡಕಟ್ಟು ಸಮಾಜಕ್ಕೂ ತನ್ನದೇ ಆದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಇದೆ. ಕನ್ನಡವನ್ನು ಬಹುಸೃಷ್ಟಿಯ ನೆಲೆಗಳಲ್ಲಿ ನೋಡಬೇಕು. ಬಹುರೂಪಿಯಾದ ನೆಲೆಗಟ್ಟಿನಲ್ಲಿ ಕನ್ನಡ ಭಾಷಿಕ ಸಂಸ್ಕೃತಿ ಮತ್ತು ಕುಲವನ್ನು ನೋಡಬೇಕು ಎಂದು ಡಾ.ಡೊಮೆನಿಕ್ ಅಭಿಪ್ರಾಯ ಪಟ್ಟರು.ಬಂಜಾರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಡಾ ಎ.ಆರ್.ಗೋವಿಂದ ಸ್ವಾಮಿ ವಿಚಾರ ಮಂಡಿಸಿದರು. ದೇಶದಲ್ಲಿ ಸುಮಾರು 800ಕ್ಕೂ ಅಧಿಕ ಬುಡಕಟ್ಟು ಸಮುದಾಯಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಂಜಾರ ಕೂಡ ಒಂದು. ಇದು ಭೂಮಿ ಹೆಸರಿನ ಜನಾಂಗ. ಬಂಜಾರರಲ್ಲಿ ಮೌಖಿಕ ಸಾಹಿತ್ಯದ ಬಂಡಾರವೇ ಇದೆ. ಉತ್ತರ ಮತ್ತು ದಕ್ಷಿಣ ಭಾರತ ಎರಡೂ ಪ್ರದೇಶಗಳ ಪ್ರಭಾವಕ್ಕೆ ಒಳಗಾಗಿದ್ದರೂ ಬಂಜಾರ ಭಾಷೆ ತನ್ನತನ ಉಳಿಸಿಕೊಂಡಿದೆ. ಬಂಜಾರರದು ಹಿಂದೂ ಧರ್ಮ ಅಲ್ಲ. ಅವರದು ಪರಿಸರ ಧರ್ಮ. ಅಲೆಮಾರಿಗಳಾದ ಬಂಜಾರರು ತಮ್ಮದೇ ವಿಶಿಷ್ಟವಾದ ರಂಗೋಲಿ, ಅಚ್ಚೆ, ವಸ್ತ್ರ ಸಂಹಿತೆಗಳನ್ನು ಉಳಿಸಿಕೊಂಡಿದ್ದಾರೆ. ಬಂಜಾರರ ನ್ಯಾಯ ಪದ್ಧತಿಯನ್ನು ಬಿಂಬಿಸುವ ವಿಶಿಷ್ಟ ರಾಮಾಯಣವು ಜನಪದೀಯವಾಗಿದೆ. ಬಂಜಾರರು ಒಂದು ರೀತಿ ನಡೆದಾಡುವ ಕಲಾವಿದರು ಮತ್ತು ಕಲಾ ಪ್ರದರ್ಶಕರು. ಅಫ್ಘಾನಿಸ್ತಾನದ ಕುಚಿ ಬುಡಕಟ್ಟು ಜನರಿಗೂ ಬಂಜಾರರಿಗೂ ಸಾಮ್ಯತೆ ಇದೆ. ಬಂಜಾರ ಕಲೆ ಮತ್ತು ಸಾಹಿತ್ಯ ಉಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ದೃಶ್ಯ ಕಲೆಯ ಬೆಳವಣಿಗೆಯ ಅವಲೋಕನ ಕುರಿತು ವಿಚಾರ ಮಂಡಿಸಿದ ಶಿವಾನಂದ ಬಂಟನೂರು, ಕಣ್ಣಿನ ಮೂಲಕ ಮನಸ್ಸನ್ನು ಹೊಕ್ಕು ಆನಂದಾನುಭವ ನೀಡುವ ಶಕ್ತಿ ದೃಶ್ಯ ಕಲೆಗಿದೆ ಎಂದರು.ಚಿತ್ರಕಲೆ ಮತ್ತು ಶಿಲ್ಪಕಲೆಗಳನ್ನು ದೃಶ್ಯ ಕಲೆ ಎಂದು ಕರೆಯಲಾಗುತ್ತದೆ. ಇದು ಒಂದು ಆದಿಮಕಲೆ. ರಾಜಾಶ್ರಯದಲ್ಲಿ ದೃಶ್ಯ ಕಲೆಗಳು ಬೆಳೆದಿವೆ. ಅಜಂತ, ಎಲ್ಲೋರ ಮುಂತಾದ ಗುಹಾಂತರ ದೇವಾಲಯಗಳಲ್ಲಿಇದರ ವಿಸ್ತಾರಗಳನ್ನು ಕಾಣಬಹುದು. ಭಾರತದ ದೃಶ್ಯ ಕಲಾ ಬೆಳವಣಿಗೆಗೆ ಬ್ರಿಟಿಷರು ನೀಡಿದ ಕೊಡುಗೆ ದೊಡ್ಡದು. ದೇಶದ ಹಲವೆಡೆ ಬ್ರಿಟಿಷರು ದೃಶ್ಯ ಕಲಾ ಶಾಲೆ ಆರಂಭಿಸಿದರು. ರಾಜಾ ರವಿವರ್ಮರಂಥ ಚಿತ್ರ ಕಲಾವಿದರು ತಮ್ಮ ಚಿತ್ರಕಲೆಯ ಮೂಲಕ ಭಾರತದ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದರು ಎಂದು ಹೇಳಿ ದೇಶದ ಪ್ರಮುಖ ದೃಶ್ಯ ಕಲಾವಿದರ ಸ್ಮರಣೆ ಮಾಡಿದರು.
ರಾಜೇಶ್ ಹೊಂಗಲ್ ಮತ್ತು ಎಸ್. ಹರೀಶ್ ನಿರೂಪಿಸಿದರು. ಎಂ. ಶೈಲಕುಮಾರ್ ಸ್ವಾಗತಿಸಿದರು. ಶರಣೇಗೌಡ ಬಿ ಪಾಟೀಲ್ ಹೊಂದಿಸಿದರು.