ಹೊಸಪೇಟೆ: ತಾಲೂಕಿನ ಕಮಲಾಪುರದ ಎಚ್.ಪಿ.ಸಿ. ಗ್ರಾಮದ ಬಳಿ ಜನರ ನಿದ್ದೆ ಗೆಡಿಸಿದ್ದ ಚಿರತೆ ಗುರುವಾರ ರಾತ್ರಿ ಬೋನಿಗೆ ಬಿದ್ದಿದ್ದು, ಆತಂಕದಲ್ಲಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಎಚ್.ಪಿ.ಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡು ಪ್ರದೇಶ ಹೆಚ್ಚಿರುವುದರಿಂದ ಚಿರತೆಗಳು ಆಗಾಗ ಓಡಾಡುತ್ತಿರುತ್ತವೆ. ಈ ಹಿಂದೆ ಹಲವು ಬಾರಿ ಚಿರತೆಗಳನ್ನು ಸೆರೆ ಹಿಡಿದು ಬೇರೆ ಕಡೆ ಸಾಗಿಸಲಾಗಿದೆ. ಆದರೂ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದರಿಂದ ಜನರ ರಕ್ಷಣೆ ಹಾಗೂ ಸಾಕು ಪ್ರಾಣಿಗಳ ರಕ್ಷಣೆಗೆ ಗ್ರಾಮಸ್ಥರು ಕೆಲ ದಿನಗಳ ಹಿಂದೆ ತಂದಿಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಈ ಭಾಗದಲ್ಲಿ ಇನ್ನೂ ನಾಲ್ಕೈದು ಚಿರತೆಗಳು ಓಡಾಡುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.ಈ ಭಾಗದಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಬೋನಿಟ್ಟು ಹಿಡಿದು ಬೇರೆಡೆ ಸಾಗಿಸಬೇಕು. ಈ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸತತ ಗಸ್ತು ತಿರುಗಬೇಕು. ಇಲ್ಲದಿದ್ದರೆ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡಿದರೆ ಹೇಗೆ? ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಯುವಕನ ಮೇಲೆ ಕರಡಿ ದಾಳಿ:ಕಮಲಾಪುರದ ಎಚ್.ಪಿ.ಸಿ ಗ್ರಾಮದಲ್ಲಿ ಒಂದೆಡೆ ಬೋನಿಗೆ ಚಿರತೆ ಬಿದ್ದರೆ, ಮತ್ತೊಂದೆಡೆ ಅದೇ ಗ್ರಾನದ ಯುವಕ ನರೇಂದ್ರ ಎಂಬವರ ಮೇಲೆ ಕರಡಿ ದಾಳಿ ಮಾಡಿದೆ. ಗುರುವಾರ ಬೆಳಗ್ಗೆ ಬಹಿರ್ದೆಸೆಗೆ ಹೋಗುವ ವೇಳೆ ಕರಡಿ ದಾಳಿ ಮಾಡಿದೆ. ಅಲ್ಲಿಂದ ಯುವಕ ಗಾಬರಿಗೊಂಡು ತಪ್ಪಿಸಿಕೊಂಡು ಓಡಿ ಬಂದಿದ್ದಾನೆ. ಸ್ಥಳೀಯರು ಕರಡಿಯನ್ನು ಓಡಿಸಿದ್ದಾರೆ. ಚಿರತೆ ಬೋನಿಗೆ ಬಿತ್ತು ಅಂತ ಜನ ನಿರಾಳರಾದರೆ, ಇತ್ತ ಕರಡಿ ದಾಳಿಯಿಂದ ಜನರು ಭಯಬೀತರಾಗಿದ್ದಾರೆ.
ಕರಡಿ, ಚಿರತೆ ಹಾವಳಿ ಸೇರಿದಂತೆ ಇತರೆ ಕಾಡುಪ್ರಾಣಿಗಳ ಹಾವಳಿ ಎಚ್.ಪಿ.ಸಿಯಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ. ಜನರ ರಕ್ಷಣೆ ಅವಶ್ಯಕತೆವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.