5 ದಿನವಾದ್ರೂ ಬೋನಿಗೆ ಬೀಳದ ಚಿರತೆ, ಜನರಿಗೆ ಆತಂಕ

KannadaprabhaNewsNetwork | Published : Nov 22, 2024 1:18 AM

ಸಾರಾಂಶ

ಬುಧವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷ:ಚಿರತೆ ಬುಧವಾರ ಬೆಳಗ್ಗೆ ಶಿವಗಂಗೆ ತಪ್ಪಲಿನಲ್ಲಿ ಸ್ಥಳೀಯರ ಕಣ್ಣಿಗೆ ಪ್ರತ್ಯಕ್ಷವಾಗಿದ್ದು, ಅವರು ಅರಣ್ಯಾಧಿಕಾರಿಗಳಿಗೆ ತಿಳಿಸುವ ಹೊತ್ತಿಗೆ ಆ ಸ್ಥಳದಿಂದ ಬೇರೆಡೆಗೆ ಪರಾರಿಯಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಸೀಗೇಪಾಳ್ಯ ಗೊಲ್ಲರಹಟ್ಟಿಯಲ್ಲಿ ಕಳೆದ ಐದು ದಿನಗಳ ಹಿಂದೆಯಷ್ಟೇ ಕರಿಯಮ್ಮ ಎಂಬ ಮಹಿಳೆಯನ್ನು ಬಲಿ ಪಡೆದಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಚಿರತೆ ಬೋನಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿದೆ. ಮತ್ತೆ ಯಾರ ಮೇಲೆ ಯಾವಾಗ ದಾಳಿ ಮಾಡುತ್ತದೆಯೋ ಎಂಬ ಆತಂಕ ಗ್ರಾಮಸ್ಥರಿಗೆ ಕಾಡುತ್ತಿದೆ.

ನೆಲಮಂಗಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬೆಂಗಳೂರು, ನೆಲಮಂಗಲ, ಬನ್ನೇರುಘಟ್ಟ, ತುಮಕೂರು ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಅರಣ್ಯ ಕಾವಲುಗಾರರು ಬೆಟ್ಟದ ತಪ್ಪಲಿನಲ್ಲೇ ಮೊಕ್ಕಾಂ ಹೂಡಿ ಚಿರತೆಯ ಚಲನ ವಲನಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಚಿರತೆ ಮಾತ್ರ ಕಣ್ಣಿಗೆ ಕಂಡರೂ ಇಟ್ಟಿರುವ ಬೋನಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿದೆ.

ಬುಧವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷ:ಚಿರತೆ ಬುಧವಾರ ಬೆಳಗ್ಗೆ ಶಿವಗಂಗೆ ತಪ್ಪಲಿನಲ್ಲಿ ಸ್ಥಳೀಯರ ಕಣ್ಣಿಗೆ ಪ್ರತ್ಯಕ್ಷವಾಗಿದ್ದು, ಅವರು ಅರಣ್ಯಾಧಿಕಾರಿಗಳಿಗೆ ತಿಳಿಸುವ ಹೊತ್ತಿಗೆ ಆ ಸ್ಥಳದಿಂದ ಬೇರೆಡೆಗೆ ಪರಾರಿಯಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆ: ಅರಣ್ಯಾಧಿಕಾರಿಗಳು ಸುಮಾರು ೨೦ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಚಿರತೆ ಸಂಚರಿಸುವ ಸ್ಥಳಗಳಲ್ಲಿ ಅಳವಡಿಸಿದ್ದು, ಆ ಕ್ಯಾಮೆರಾಗಳಲ್ಲಿ ಚಿರತೆ ಸಂಚರಿಸುವುದು ಸೆರೆಯಾಗಿದೆ.

ಡ್ರೋನ್ ಮೂಲಕ ಪತ್ತೆ:

ಇನ್ನೂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಡ್ರೋನ್ ಮೂಲಕ ಚಿರತೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಚಿರತೆಗಳು ಕಾಣದೆ ಡ್ರೋನ್‌ನಲ್ಲಿ ಕರಡಿಗಳು ಕಂಡಿದ್ದು, ಈ ಕಾಡಿನಲ್ಲಿ ಚಿರತೆಯ ಜೊತೆಗೆ ಕರಡಿಗಳು ಸಹ ವಾಸಿಸುತ್ತಿವೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ತುಮಕೂರಿನಿಂದ ಬಂದ ದೊಡ್ಡ ಬೋನ್:

ಈ ಹಿಂದೆ ಹಲವು ಚಿರತೆಗಳನ್ನು ಹಿಡಿಯಲು ಸಹಕರಿಸಿದ್ದ ತುಮಕೂರು ಜಿಲ್ಲಾ ಅರಣ್ಯಾಧಿಕಾರಿಗಳ ಸಹಕಾರದಿಂದ ತುಮಕೂರಿನಿಂದ ದೊಡ್ಡ ಬೋನ್ ತಂದಿದ್ದು ಈ ಬೋನ್‌ನಲ್ಲಿ ಚಿರತೆ ಬೀಳಬಹುದು.

ಮತ್ತೆ ಮೂರು ಬೋನ್ ಅಳವಡಿಕೆ : ಈಗಾಗಲೇ ಎಂಟು ಬೋನ್‌ಗಳನ್ನು ಅಳವಡಿಸಿದ್ದು, ಇನ್ನೂ ಚಿರತೆ ಸಂಚರಿಸುವ ಪ್ರಮುಖ ಜಾಗಗಳಲ್ಲಿ ಮತ್ತೆ ಮೂರು ಬೋನ್‌ಗಳನ್ನು ಅಳವಡಿಸಲು ಅರಣ್ಯಾಧಿಕಾರಿಗಳು ಚಿಂತನೆಯಲ್ಲಿದ್ದಾರೆ.

---------

‘ಕಳೆದ ನಾಲ್ಕು ದಿನಗಳಿಂದ ಚಿರತೆ ಸೆರೆಗೆ ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ಚಿರತೆ ಬೋನಿಗೆ ಬಿದ್ದಿಲ್ಲ. ಕಾರ್ಯಾಚರಣೆ ಮುಂದುವರೆದಿದೆ. ತುಮಕೂರಿನಿಂದ ದೊಡ್ಡ ಬೋನು ತರಿಸಿದ್ದು, ಈ ಬೋನಿಗೆ ಬೀಳುವ ವಿಶ್ವಾಸವಿದ್ದು, ಕ್ಯಾಮೆರಾದಲ್ಲಿ ಚಿರತೆಯ ಚಲನ ವಲನ ಗಮನಿಸುತ್ತಿದ್ದೇವೆ. ಶೀಘ್ರವಾಗಿ ಚಿರತೆ ಪತ್ತೆ ಹಚ್ಚಿ ಸೆರೆ ಹಿಡಿಯುತ್ತೇವೆ. ’

ಸೆರಿನಾ ಸೆಕ್ಕಲಿಗರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ

Share this article