ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆಯಡಿ ಗೂಡು ಮಾಡಿಕೊಂಡು ಬಾಳು ನಡೆಸುತ್ತಿದ್ದ ವಯೋವೃದ್ಧೆಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ, ರಾಜ್ಯ ಮಹಿಳಾ ನಿಲಯದ ಸುಪರ್ದಿಗೆ ಒಪ್ಪಿಸುವ ಮೂಲಕ ಪ್ರಧಾನ ಜಿಲ್ಲಾ ನ್ಯಾ.ರಾಜೇಶ್ವರಿ ಹೆಗಡೆ ಮಾನವೀಯತೆ ಮೆರೆದು, ಇತರರಿಗೂ ಮಾದರಿಯಾಗಿದ್ದಾರೆ.
ನಗರದ ಹೊರವಲಯದ ಶಾಬನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕೆಳ ಸೇತುವೆಯ ಒಂದು ಭಾಗದಲ್ಲಿ ವಯೋವೃದ್ಧೆ ಸಣ್ಣಗೂಡು ಮಾಡಿಕೊಂಡು, ಅಲ್ಲಿ ನಾಯಿ ಮರಿಯೊಂದನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು. ನಿತ್ಯವೂ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾ.ರಾಜೇಶ್ವರಿ ಹೆಗಡೆ ಅದನ್ನು ಗಮನಿಸುತ್ತಲೇ ಇದ್ದರು.ನಿತ್ಯವೂ ನ್ಯಾಯಾಲಯಕ್ಕೆ, ಮನೆಗೆ ಹೋಗುವಾಗ ನ್ಯಾಯಾಧೀಶರು ಅಜ್ಜಿ ಸ್ಥಿತಿಗತಿ ಕಂಡು, ಮರುಗುತ್ತಿದ್ದರು. ಸೇತುವೆ ಬಳಿ ಹೋಗುವಾಗ ವಾಹನ ನಿಲ್ಲಿಸಲು ಚಾಲಕರಿಗೆ ಸೂಚಿಸಿ, ಅಜ್ಜಿ ಇದ್ದ ಸ್ಥಳಕ್ಕೆ ಹೋಗಿ ಮಾತನಾಡಿಸಿದ್ದಾರೆ. ಅಲ್ಲದೇ, ಮತ್ತೋರ್ವ ನ್ಯಾ.ಮಹಾವೀರ ಕರೆಣ್ಣನವರಿಗೆ ಸ್ಥಳಕ್ಕೆ ಕರೆಸಿಕೊಂಡು, ಅಜ್ಜಿಗೆ ಪುನರ್ವಸತಿ ಕಲ್ಪಿಸಲು ಚರ್ಚೆ ಮಾಡಿದ್ದಾರೆ. ಆದರೆ, ವಯೋಸಹಜ, ಭಯದಿಂದ ವೃದ್ಧೆಯು ಆರಂಭದಲ್ಲಿ ತೀವ್ರ ಅಸಮಾಧಾನ ಹೊರ ಹಾಕುತ್ತಾ, ಸಿಟ್ಟು ಮಾಡುತ್ತಾ, ಪ್ರತಿರೋಧ ತೋರುತ್ತಾ, ಕೋಪತಾಪ ಪ್ರದರ್ಶಿಸಿದ್ದಾರೆ. ಅಜ್ಜಿಯ ಅಸಹಾಯಕ ಸ್ಥಿತಿಯನ್ನು ಅರಿತ ನ್ಯಾ.ರಾಜೇಶ್ವರಿ ಹೆಗಡೆ ಅಜ್ಜಿಗೆ ಸಮಾಧಾನಪಡಿಸಲು ಯತ್ನಿಸಿ, ಕಡೆಗೆ ಅಜ್ಜಿ ಹೇಳುತ್ತಿದ್ದ ಅಸ್ಪಷ್ಟ ಮಾಹಿತಿಯನ್ನು ಸರಿಯಾಗಿ ಗ್ರಹಿಸಿದ್ದಾರೆ. ವಯೋವೃದ್ಧೆಯು ತಾನು ಅನುಭವಿಸಿದ ಸಂಕಷ್ಟ, ಉಂಡ ಸಂಕಷ್ಟಗಳ ಕಾರಣಕ್ಕೆ ನ್ಯಾಯಾಧೀಶರ ಮುಂದೆ ಸಹಜವಾಗಿಯೇ ಆಕೆ ಅನುಭವಿಸಿದ ನೋವು, ಸಂಕಟಗಳು ಹೀಗೆ ಆಕೆಯ ನೆರವಿಗೆ ಧಾವಿಸಿದ ತಮ್ಮ ಮುಂದೆ ವ್ಯಕ್ತವಾಗುತ್ತಿವೆಯೆಂಬುದನ್ನು ಹಿರಿಯ ಅನುಭವಿ ನ್ಯಾಯಾಧೀಶರಿಬ್ಬರೂ ಗ್ರಹಿಸಿದರು.
ನಂತರ ಅಜ್ಜಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ, ಅಜ್ಜಿಗೆ ಘನತೆಯ ಬದುಕು ಕಟ್ಟಿಕೊಡಲು ಚರ್ಚಿಸಿದ್ದಾರೆ. ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು. ಮನುಷ್ಯರನ್ನು ಮನುಷ್ಯರಾಗಿ ಕಂಡರೆ ಸಾಲದು, ಅಂತರಂಗವೂ ಮಿಡಿಯುವಂತಿರಬೇಕು. ಅದಕ್ಕೆ ಸಾಕ್ಷಿ ಎಂಬಂತೆ ನ್ಯಾ.ರಾಜೇಶ್ವರಿ ಎನ್.ಹೆಗಡೆ, ಮಹಾವೀರ ಕರೆಣ್ಣನವರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಅಜ್ಜಿಗೆ ಆಸ್ಪತ್ರೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆ, ಉಪಚಾರಕ್ಕೆ ವ್ಯವಸ್ಥೆಗೆ ಸೂಚಿಸಿದರು. ಅಲ್ಲದೇ, ಅಜ್ಜಿಗೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸುವಂತೆ ಸೂಚನೆ ನೀಡಿದರು. ಉಭಯ ನ್ಯಾಯಾಧೀಶರ ಮಾನವೀಯ ಕಾರ್ಯಕ್ಕೆ ಪ್ರತ್ಯಕ್ಷದರ್ಶಿಗಳು, ಶಾಬನೂರು ಗ್ರಾಮಸ್ಥರು ತಲೆದೂಗಿದರು. ನ್ಯಾಯಾಧೀಶರ ಕಾರ್ಯಕ್ಕೆ ಸಂಘ-ಸಂಸ್ಥೆಗಳು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಸಹ ನ್ಯಾಯಾಧೀಶರ ಮಾನವೀಯ ಕಾರ್ಯ ಇತರರಿಗೂ ಪ್ರೇರಣೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.