ಬಹುದಿನದ ಅಯ್ಯನಹಳ್ಳಿಯಲ್ಲಿ ಸ್ಕೈವಾಕರ್ ನಿರ್ಮಾಣದ ಕನಸು ನನಸು

KannadaprabhaNewsNetwork |  
Published : Jul 07, 2024, 01:15 AM IST
ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿರ್ಮಾಣವಾಗುತ್ತಿರುವ ಫೂಟ್ ಓವರ್ ಬ್ರಿಡ್ಜ್.ಶಾಸಕರ ಪೋಟೋ ಅಗತ್ಯವಿದ್ದರೆ ಬಳಸಿಕೊಳ್ಳಲು ಮನವಿ  | Kannada Prabha

ಸಾರಾಂಶ

ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿ ಒಂದು ಬದಿಯಲ್ಲಿ ಗ್ರಾಮವಿದ್ದರೆ ಮತ್ತೊಂದು ಬದಿ ಪ್ರೌಢಶಾಲೆ ಸೇರಿ ವಸತಿನಿಲಯಗಳಿವೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಎಂ.ಬಿ.ಅಯ್ಯನಹಳ್ಳಿಯಲ್ಲಿ ರಾ.ಹೆ.50ರಲ್ಲಿ ಈ ಮೊದಲು ಅಸಂಖ್ಯಾತ ಅಪಘಾತಗಳು ಸಂಭವಿಸುತ್ತಿದ್ದವು. ರಸ್ತೆ ದಾಟಲು ಶಾಲಾ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಇತ್ತು. ಆದರೆ ಸದ್ಯ ಇಲ್ಲಿನ ಅಯ್ಯನಹಳ್ಳಿ ಬಳಿ ಸ್ಕೈ ವಾಕರ್ (ಫೂಟ್ ಓವರ್ ಬ್ರಿಡ್ಜ್) ನಿರ್ಮಾಣಗೊಳ್ಳುತ್ತಿದ್ದು, ಸತತ 6 ವರ್ಷಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.

ಚಿತ್ರದುರ್ಗದಿಂದ ಹೊಸಪೇಟೆ ವರೆಗಿನ 130 ಕಿ.ಮೀ. ಅಂತರದ ಹೆದ್ದಾರಿ 50ರಲ್ಲಿ ಎಂ.ಬಿ.ಅಯ್ಯನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಗೆ ಅಂದಾಜು ₹1.56 ಕೋಟಿ ತಗುಲಿದೆ. ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ.

ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿ ಒಂದು ಬದಿಯಲ್ಲಿ ಗ್ರಾಮವಿದ್ದರೆ ಮತ್ತೊಂದು ಬದಿ ಪ್ರೌಢಶಾಲೆ ಸೇರಿ ವಸತಿನಿಲಯಗಳಿವೆ. ರಸ್ತೆ ದಾಟಲು ಗ್ರಾಮದ ವಿದ್ಯಾರ್ಥಿಗಳು, ಹೊಲಗಳಿಗೆ ತೆರಳುವ ರೈತರು, ಕಾರ್ಮಿಕರು ಸೇರಿ ಎಲ್ಲರಿಗೂ ತೀವ್ರ ತೊಂದರೆಯಾಗುತ್ತಿತ್ತು. ರಸ್ತೆ ದಾಟುವ ಸಂದರ್ಭದಲ್ಲಿ ಸಾಕಷ್ಟು ಅಪಘಾತಗಳಾಗಿ ಜೀವಹಾನಿಯಾದ ಪ್ರಕರಣಗಳಿಗೆ ಲೆಕ್ಕಿವಿಲ್ಲ. ಹೆದ್ದಾರಿ ಬಂದ್‌ನಂಥ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಈಗ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಜಾಗದ ಸಮಸ್ಯೆ ಇತ್ತು: ಇಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಸ್ಕೈ ವಾಕರ್ ನಿರ್ಮಿಸಲು ಜಾಗದ ಸಮಸ್ಯೆ ಉದ್ಭವಿಸಿತ್ತು. ಗ್ರಾಮಸ್ಥರೊಂದಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತುಕತೆ ನಡೆಸುವ ಮೂಲಕ ಜಾಗದ ಸಮಸ್ಯೆ ಇತ್ಯರ್ಥಗೊಳಿಸಿದ್ದರಿಂದ ಕಾಮಗಾರಿ ನಡೆಸಲು ಸುಗಮವಾಗಿದೆ.

ಸಮಸ್ಯೆಗಳು ಹಲವು: ಇನ್ನು ಕೂಡ್ಲಿಗಿ ಬಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಸ್ಕೈವಾಕರ್, ಇಮಡಾಪುರ ಬಳಿ ಸರ್ವಿಸ್ ರಸ್ತೆ, ಕಾನಹೊಸಹಳ್ಳಿಯ ದಲಿತರ ಕಾಲನಿ ಬಳಿ ಚರಂಡಿ ಸೇರಿ ನಾನಾ ಕಾಮಗಾರಿಗಳಿಗೆ ಮುಕ್ತಿ ಸಿಗಬೇಕಿದೆ. ಈ ಬಗ್ಗೆ ಶಾಸಕರು ಕಾಳಜಿ ವಹಿಸಿ ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮಗಳ ಜನತೆಯ ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕಿದೆ.

ಕೂಡ್ಲಿಗಿ ತಾಲೂಕಿನಲ್ಲಿ ಹಾದುಹೋಗಿರುವ ರಾ.ಹೆ.೫೦ರಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಗಮನಕ್ಕೆ ಬರುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವರಿಕೆ ಜತೆ ಸತತ ಫಾಲೋಅಪ್ ಮಾಡಿದ್ದರಿಂದ ಎಂ.ಬಿ.ಅಯ್ಯನಹಳ್ಳಿ ಬಳಿ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿದೆ. ಆಲೂರು ಕ್ರಾಸ್ ಬಳಿ ಫ್ಲೈಓವರ್ ಬ್ರಿಡ್ಜ್ ಸಹ ಮಂಜೂರಾಗಿದೆ. ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ