ಟಿಕೆಟ್ ವಂಚಿತ ಡಾ.ಪರಮೇಶ್ ರಿಂದ ಬೆಂಬಲಿಗರ ಸಭೆ

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ತಳಮಟ್ಟದಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ನನ್ನಂತವರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ನಿಜ. ಆದರೆ ಈಗ ವ್ಯಕ್ತಿಗಿಂತ ದೇಶ ಮೊದಲು, ದೇಶಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಆಯ್ಕೆ ಮಾಡಲೇಬೇಕಿದೆ. ಹಾಗಾಗಿ ಇಲ್ಲಿ ನಮ್ಮ ಅಸಮಾಧಾನಗಳೆಲ್ಲವನ್ನು ಬದಿಗೊತ್ತಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ಜಿಲ್ಲಾ ಖಜಾಂಚಿ, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ನಗರದ ಮುರುಘ ರಾಜೇಂದ್ರ ಸಮುದಾಯ ಭವನದಲ್ಲಿ ಹಿತೈಷಿಗಳ ಸಭೆ ಹಾಗೂ ಬೆಂಬಲಿಗರ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಿದ್ಧಗಂಗಾ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಟಿಕೆಟ್ ವಂಚಿತರಾದ ಪರಮೇಶ್ ಅವರು ಭರವಸೆ ಕಳೆದುಕೊಳ್ಳದೆ ತಮ್ಮ ಸೇವಾ ಜೀವನವನ್ನು ಮುಂದುವರೆಸಬೇಕು ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಕೋರೆ ಮಂಜಣ್ಣ ಮಾತನಾಡಿ, ಡಾ.ಎಸ್.ಪರಮೇಶ್ ಜನರನ್ನು ಬಹಳ ಹತ್ತಿರದಿಂದ ಕಂಡವರು, ಪ್ರತಿನಿತ್ಯ ಮೆಡಿಕಲ್ ಕಾಲೇಜಿನಲ್ಲಿ ನೂರಾರು ರೋಗಿಗಳನ್ನು ಸಂದರ್ಶಿಸುವವರು, ತಮ್ಮ ಹಿತೈಷಿಗಳ ಬಳಗದ ಮೂಲಕ ಜಿಲ್ಲೆಯ ಪ್ರತಿ ಗ್ರಾಪಂಗಳಲ್ಲೂ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದವರು. ಅಂತವರಿಗೆ ಟಿಕೆಟ್ ಕೈ ತಪ್ಪಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಅವರಿಗೆ ಬಿಜೆಪಿ ಪಕ್ಷ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದರು.

ಅಂತಿಮವಾಗಿ ಮಾತನಾಡಿದ ಡಾ.ಎಸ್.ಪರಮೇಶ್, ವೈದ್ಯಕೀಯ ಸೇವೆಯೂ ಸಮಾಜ ಸೇವೆಯಂದೇ ನಂಬಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿತನಾಗಿ ಟಿಕೆಟ್ಗಾಗಿ ಪ್ರಯತ್ನ ನಡೆಸಿದೆ. ಪಕ್ಷದ ವರಿಷ್ಠರು, ರಾಜ್ಯದ ಪ್ರಮುಖರೆಲ್ಲರೂ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವ ವಿ.ಸೋಮಣ್ಣನವರಿಗೆ ಟಿಕೆಟ್ ಘೋಷಿಸಿದ್ದಾರೆ. ಸ್ಥಳೀಯರು ಹಾಗೂ ಹೊರಗಿನವರು ಎನ್ನುವ ವಿಚಾರ ಬಂದಾಗ ತಳಮಟ್ಟದಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ನನ್ನಂತವರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ನಿಜ. ಆದರೆ ಈಗ ವ್ಯಕ್ತಿಗಿಂತ ದೇಶ ಮೊದಲು, ದೇಶಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಆಯ್ಕೆ ಮಾಡಲೇಬೇಕಿದೆ. ಹಾಗಾಗಿ ಇಲ್ಲಿ ನಮ್ಮ ಅಸಮಾಧಾನಗಳೆಲ್ಲವನ್ನು ಬದಿಗೊತ್ತಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹಿತೈಷಿಗಳಲ್ಲಿ ಮನವಿ ಮಾಡಿದರು.

ಮುಖಂಡರಾದ ಆಡಿಟರ್ ವಿಶ್ವನಾಥ್, ಉದ್ಯಮಿ ಚಂದ್ರಮೌಳಿ, ಗುಬ್ಬಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಆರ್.ಶಿವಕುಮಾರ್, ವಕೀಲ ನಿರಂಜನ್, ಹಿತೈಷಿ ಬಳಗದ ಸಂಚಾಲಕ ಎಸ್.ಕಾಂತರಾಜು ಜಿಲ್ಲೆಯ ವಿವಿಧ ತಾಲೂಕಿನ ೫೦೦ ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Share this article