ಯದುವೀರ್ ಅವಿರೋಧ ಆಯ್ಕೆಯಾಗಲಿ: ಎಚ್. ವಿಶ್ವನಾಥ್

KannadaprabhaNewsNetwork | Published : Apr 6, 2024 12:50 AM

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿಪರ ಕಾರ್ಯಗಳನ್ನು ಮರೆಯಲುಂಟೇ? ಅಂದಿನ ಕಾಲದಲ್ಲೇ ಶೋಷಿತ ಸಮಾಜಕ್ಕಾಗಿ ಶೇ. 80 ರಷ್ಟು ಮೀಸಲಾತಿ ನೀಡಿದ ರಾಜಪ್ರಭುತ್ವ ಅದಾಗಿತ್ತು. ನೀರಾವರಿ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಕೆ.ಆರ್.ಎಸ್. ಡ್ಯಾಂ ನಿರ್ಮಾಣ, ಪ್ರಜಾಪ್ರತಿನಿಧಿ ಸಭೆ ಹೀಗೆ ಈ ಭಾಗದ ಜನರಿಗೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

- ವಿಧಾನ ಪರಿಷತ್‌ ಸದಸ್ಯಕನ್ನಡಪ್ರಭ ವಾರ್ತೆ ಹುಣಸೂರು

ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಯದುವಂಶದ ಕುಡಿ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರ ತನ್ನ ಗೌರವ ಮತ್ತು ಸಮ್ಮಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಲಹೆ ನೀಡಿದರು.

ಪಟ್ಣಣದ ಅರಸು ಪುತ್ಥಳಿಯ ಬಳಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ವಿವಿಧ ಪದಾಧಿಕಾರಿಗಳು ಮತ್ತು ಎಚ್. ವಿಶ್ವನಾಥ್ ಅಭಿಮಾನಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿಪರ ಕಾರ್ಯಗಳನ್ನು ಮರೆಯಲುಂಟೇ? ಅಂದಿನ ಕಾಲದಲ್ಲೇ ಶೋಷಿತ ಸಮಾಜಕ್ಕಾಗಿ ಶೇ. 80 ರಷ್ಟು ಮೀಸಲಾತಿ ನೀಡಿದ ರಾಜಪ್ರಭುತ್ವ ಅದಾಗಿತ್ತು. ನೀರಾವರಿ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಕೆ.ಆರ್.ಎಸ್. ಡ್ಯಾಂ ನಿರ್ಮಾಣ, ಪ್ರಜಾಪ್ರತಿನಿಧಿ ಸಭೆ ಹೀಗೆ ಈ ಭಾಗದ ಜನರಿಗೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಯದುವಂಶದ ಕುಡಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ರಾಜಪ್ರಭುತ್ವದೊಂದಿಗೆ ಈ ಭಾಗದ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಸಾವಿರಾರು ಎಕರೆ ಭೂಮಿಯನ್ನು ಬಡವರಿಗಾಗಿ ನೀಡಿದ್ದಾರೆ. ರಾಜ್ಯ ಸರ್ಕಾರ ಇಂತಹ ರಾಜಮನೆತನವನ್ನು ಗೌರವಿಸುವ ನಿಟ್ಟಿನಲ್ಲಿ ಯಾವುದೇ ಸ್ಪರ್ಧೆ ಇಲ್ಲದೇ ಯದುವೀರರನ್ನು ಅವಿರೋಧವಾಗಿ ಆಯ್ಕೆ ಮಾಡುವತ್ತ ಮುಂದಡಿಯಿಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳಲಿ. ಇನ್ನೂ ಕಾಲ ಮಿಂಚಿಲ್ಲ. ನಾಮಪತ್ರ ವಾಪಸ್ ಪಡೆಯಲು ಒಂದು ದಿನ ಬಾಕಿಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಕ್ರಮವಹಿಸಲು ಎಂದು ಆಶಿಸಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್ ಗೌಡೆ, ಬಿಜೆಪಿ ಮುಖಂಡ ನಾಗರಾಜ ಮಲ್ಲಾಡಿ ಮಾತನಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ್, ವೆಂಕಟಮ್ಮ, ಪುಟ್ಟಶೆಟ್ಟಿ, ನಗರಸಭಾ ಸದಸ್ಯ ಗಣೇಶ್ ಕುಮಾರಸ್ವಾಮಿ, ಮುಖಂಡರಾದ ಜಯರಾಂ, ಶಿವಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ನಾಗಣ್ಣಗೌಡ, ಎಚ್.ವೈ. ಮಹದೇವ್, ಶಿವಶೇಖರ್, ಫಜಲ್, ಎ.ಪಿ.ಸ್ವಾಮಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಅರಸು ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Share this article