ತಾಲೂಕುಗಳಲ್ಲೂ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಹೆಚ್ಚಿನ ಮಾನಸಿಕ ವೈದ್ಯರ ನೇಮಕದಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾನಸಿಕ ಆರೋಗ್ಯದ ಕುರಿತಾದ ಅರಿವಿನ ಕೊರತೆಯಿಂದ ಖಿನ್ನತೆ, ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಮಾನಸಿಕ ಆರೋಗ್ಯ ಕುರಿತಾದ ಅರಿವು ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ‘ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2017ರಡಿ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಮತ್ತು ನ್ಯಾಯಕ ದಂಡಾಧಿಕಾರಿ ಹಾಗೂ ಪೊಲೀಸ್ ಪಾತ್ರದ ಕುರಿತು ಶನಿವಾರ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೊಂದು ಮಾನಸಿಕ ಅಸಹಜತೆ ಎಂದು ಅವರ ಕುಟುಂಬ, ಸ್ನೇಹಿತರು, ಸುತ್ತಮುತ್ತಲಿನವರು, ಸತ್ತ ವ್ಯಕ್ತಿಗೂ ಗೊತ್ತಾಗುವುದಿಲ್ಲ. ಮಾನಸಿಕ ಆರೋಗ್ಯ ಕುರಿತು ಅರಿವು ಹೆಚ್ಚಬೇಕು ಎಂದರು. ಇತ್ತೀಚಿಗೆ ಮಾನಸಿಕ ಖಿನ್ನತೆ, ಒತ್ತಡದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಹಳ್ಳಿಗಳಲ್ಲಿ ಕೆಲವೊಂದು ಮೂಢ್ಯಾಚರಣೆಗಳಿದ್ದು, ಅರಿವು ಮೂಡಿಸುವ ಅಗತ್ಯವಿದೆ. ಸರ್ಕಾರ ಮಾನಸಿಕ ಆರೋಗ್ಯ ಕಾರ್ಯಕ್ರಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಶಾಖೆಗಳ ಸ್ಥಾಪನೆ ಆಗಬೇಕು. ಹೆಚ್ಚಿನ ಮಾನಸಿಕ ವೈದ್ಯರ ನೇಮಕದಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಮಾತನಾಡಿ, ಮುಂದುವರಿದ ದೇಶಗಳು ಮಾತ್ರ ಮಾನಸಿಕ ಕಾಯಿಲೆಗಳಿಗೆ ಒತ್ತನ್ನು ನೀಡುತ್ತಿದ್ದವು. ದೇಶದಲ್ಲಿ ಮಾನಸಿಕ ಅಸಹಜತೆಗಳನ್ನು ಹುಚ್ಚು ಎಂದು ಕರೆಯಲಾಗುತ್ತಿತ್ತು. ಆದರೆ, 2017ರ ಮಾನಸಿಕ ಆರೋಗ್ಯ ಕಾಯ್ದೆಯಿಂದಾಗಿ ಮಾನಸಿಕ ಕಾಯಿಲೆ, ಅಸಹಜತೆಗಳನ್ನು ಗುರುತಿಸಿ, ಸಹಾಯ ಮಾಡುವ ಒಂದು ವ್ಯವಸ್ಥೆ ನಿರ್ಮಾಣವಾಗಿದೆ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮನೋವೈದ್ಯರು, ಆಪ್ತ ಸಮಾಲೋಚಕರು, ಪೊಲೀಸರ ಪಾತ್ರ ಹೆಚ್ಚಿದೆ ಎಂದು ತಿಳಿಸಿದರು. ಪ್ರಸ್ತುತ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಒತ್ತಡದ ಪರಿಸ್ಥಿತಿಗಳನ್ನು ಅತಿ ಹೆಚ್ಚು ಎದುರಿಸುವ ಕ್ಷೇತ್ರಗಳಾದ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಆಗ ಮಾತ್ರ ಧನಾತ್ಮಕವಾಗಿ ಸ್ಪಂದಿಸಲು ಸಾಧ್ಯ. ಇಂದಿನ ಕಾರ್ಯಾಗಾರದಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಬಗ್ಗೆ ತಿಳಿದು ಅದನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಮಾತನಾಡಿ, ಮಾನಸಿಕ ಆರೋಗ್ಯ ಇಲ್ಲದ ಆರೋಗ್ಯ ಮತ್ತು ಸಂಪತ್ತು ಉಪಯೋಗವಿಲ್ಲದ್ದು. ದೈಹಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲೂ ಆಗಬೇಕಿದೆ. ಮಾನಸಿಕ ಅಸಹಜತೆ, ಅಸ್ವಸ್ಥತೆಯನ್ನು ಗುರುತಿಸಿ, ಚಿಕಿತ್ಸೆ ನೀಡುವುದು ತುಂಬಾ ಮುಖ್ಯ ಎಂದರು. ಮಾನಸಿಕ ಅಸ್ವಸ್ಥರಿಗೆ ಅವಮಾನ, ತಾರತಮ್ಯ ಸಲ್ಲದು. ಓರ್ವ ಗಸ್ತು ಪೊಲೀಸ್ ಕೂಡ ತಿರುಗಾಡುತ್ತಿರುವ ಮಾನಸಿಕ ಅಸ್ವಸ್ಥನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರೆ, ಅವರು ಉಚಿತ ಚಿಕಿತ್ಸೆಗೆ ಆದೇಶ ನೀಡುತ್ತಾರೆ. ಹೀಗೆ ಒಬ್ಬರ ಜೀವನ ಉತ್ತಮಪಡಿಸುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು. ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆಯಿಂದ ಮಾನಸಿಕ ಅನಾರೋಗ್ಯವನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ, ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಅಧ್ಯಕ್ಷ ನಿಯಾಜ ಅಹ್ಮದ ಎಸ್ ದಫೇದಾರ ‘ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2017 ಕುರಿತು ಮಾತನಾಡಿದರು. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್‌.ಅನಿತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಸಿಮ್ಸ್ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಎಸ್‌. ರಾಮ್‍ಪ್ರಸಾದ್ ಮತ್ತಿತರರು ಇದ್ದರು. ಜಿಲ್ಲಾ ಮಾನಸಿಕ ಮತ್ತು ಕುಷ್ಠರೋಗ ನಿವಾರಣಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಕಿರಣ್ ಸ್ವಾಗತಿಸಿದರು. - - - -14ಎಸ್‌ಎಂಜಿಕೆಪಿ01: ಕಾರ್ಯಾಗಾರ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಮಾತನಾಡಿದರು.

Share this article