ಯಾರಿಗೂ ಬೇಡವಾದ ಮಹಾನಗರ ಅಭಿವೃದ್ಧಿ!

KannadaprabhaNewsNetwork | Published : Jul 8, 2024 12:37 AM

ಸಾರಾಂಶ

ಮಹಾನಗರದ ಅಗತ್ಯತೆ ಮತ್ತು ಅವಕಾಶಗಳ ಬಗ್ಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಸಿದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ ಮನವಿಗೆ ಯಾರೊಬ್ಬ ನಾಯಕರೂ ಈ ವರೆಗೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ.

ಮಲ್ಲಿಕಾರ್ಜುನ ಸಿದ್ದಣ್ಣವರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯಕ್ಕೆ ಮೂರು ಜನ ಮುಖ್ಯಮಂತ್ರಿಗಳನ್ನು ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರದ ಅಭಿವೃದ್ಧಿ ಈಗ ಯಾರಿಗೂ ಬೇಡವಾಗಿದೆ!

ಉತ್ತರದ ಹೆಬ್ಬಾಗಿಲು, ಬೆಂಗಳೂರು ನಂತರದ ಬಹು ದೊಡ್ಡ ನಗರ, ರಾಜ್ಯದ ಪ್ರಮುಖ ವಾಣಿಜ್ಯ ನಗರ, ವಿದ್ಯಾಕಾಶಿ, ಛೋಟಾ ಮುಂಬೈ.... ಇನ್ನೂ ಏನೇನೋ ಅಭಿದಾನಗಳನ್ನು ತನ್ನ ಮುಕುಟಕ್ಕೆ ಅಂಟಿಸಿಕೊಂಡಿರುವ ಈ ಮಹಾನಗರದ ಅಗತ್ಯತೆ ಮತ್ತು ಅವಕಾಶಗಳ ಬಗ್ಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಸಿದ "ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ " ಮನವಿಗೆ ಯಾರೊಬ್ಬ ನಾಯಕರೂ ಈ ವರೆಗೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ.

ಮಾಜಿ ಸಂಸದ, ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅಧ್ಯಕ್ಷತೆಯಲ್ಲಿ 2020ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ವೇದಿಕೆಯಲ್ಲಿ ಕೆಎಲ್‌ಇ ವಿವಿಯ ಉಪಕುಲಪತಿ ಡಾ. ಅಶೋಕ ಶೆಟ್ಟರ್‌, ಹೆಸರಾಂತ ಉದ್ಯಮಿಗಳಾದ ಎಂ.ವಿ. ಕರಮರಿ, ಎಚ್‌.ಎನ್‌. ನಂದಕುಮಾರ, ಜಗದೀಶ ಹಿರೇಮಠ, ಸಂತೋಷ ಹುರಳಿಕೊಪ್ಪಿ, ಡಾ.ವಿಎಸ್‌ವಿ ಪ್ರಸಾದ್‌ ಇದ್ದಾರೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರುವ ಈ ಪ್ರಮುಖರು ಸುದೀರ್ಘ ಚಿಂತನೆ ನಡೆಸಿ ಈ ಮಹಾನಗರ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಮ್ಮದೇಯಾದ ಕಸನುಗಳನ್ನು ಹೆಣೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ಸಂಬಂಧಿಸಿದ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡುತ್ತ ಬಂದಿದ್ದಾರೆ.

ಮಹಾನಗರ ಒತ್ತಡ

ದೆಹಲಿ, ಕೋಲ್ಕೊತ್ತಾ, ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳು ಎದುರಿಸುತ್ತಿರುವ ಒತ್ತಡ, ವಲಸೆ, ಮೂಲ ಸೌಕರ್ಯಗಳ ಕೊರತೆ, ನೈಸರ್ಗಿಕ ವಿಕೋಪಗಳಲ್ಲಿ ತತ್ತರಿಸುತ್ತಿರುವ ಅವುಗಳ ಗಂಭೀರ ಸ್ಥಿತಿ ಈ ಮಹಾನಗರಕ್ಕೂ ಬಾರದಿರಲಿ ಎಂದು ಸುದೀರ್ಘ ಚಿಂತನೆ ನಡೆಸಿ ಸಲ್ಲಿಸಿದ ಪ್ರಸ್ತಾವನೆಗೆ ಅಧಿಕಾರಸ್ಥರಿಂದ ಉತ್ತಮ ಸ್ಪಂದನೆಯೇ ಸಿಕ್ಕಿಲ್ಲ.

ಹುಬ್ಬಳ್ಳಿ-ಧಾರವಾಡ ಕೇಂದ್ರವಾಗಿ ಇಟ್ಟುಕೊಂಡು ಪುಣೆ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಪಡಿಸುವ ಮೂಲಕ ಉದ್ಯೋಗ ಸೃಷ್ಟಿ ಮತ್ತು ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಇರುವ ಹೇರಳ ಅವಕಾಶಗಳ ಬಗ್ಗೆ ಮನವರಿಕೆ ಮಾಡಿದ ಮನವಿಯನ್ನು 2020ರ ಜೂನ್‌ ತಿಂಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಿಸಿದ್ದರೂ ಪ್ರಧಾನಿ ಕಚೇರಿಯಿಂದ ಈ ವರೆಗೆ ಪ್ರತಿಕ್ರಿಯೆ ಬಂದಿಲ್ಲ.

ಅದೇ ರೀತಿ ಇನ್ನಷ್ಟು ಸಲಹೆಗಳನ್ನು ಸೇರಿಸಿ 2021 ಏಪ್ರೀಲ್‌ ತಿಂಗಳಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದಾಗ, ಸಚಿವರು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈ ವರೆಗೆ ಅದರಲ್ಲಿ ಒಂದೇ ಒಂದು ಬೇಡಿಕೆ ಅನುಷ್ಠಾನಕ್ಕೆ ಬಂದಿಲ್ಲ.

ಈ ವೇದಿಕೆಯ ಮನವಿಗೆ ಸ್ಪಂದಿಸಿದ ಅಂದಿನ ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌, ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ಆಯೋಜಿಸಿ, ಹುಬ್ಬಳ್ಳಿಯಲ್ಲಿ ಸಾವಿರಾರು ಕೋಟಿ ಹೂಡಿಕೆಯಾಯಿತು ಎಂದು ಘೋಷಿಸಿದರು. ಆದರೆ, ಅದಿನ್ನೂ ಘೋಷಣೆಯಲ್ಲೇ ಇದೆ. ಸರ್ಕಾರವೂ ಬದಲಾಗಿದ್ದರಿಂದ ಈ ಮಹಾನಗರದ ಜನತೆಗೆ ಆ ಸಾವಿರಾರು ಕೋಟಿ ಕನ್ನಡಿಯಲ್ಲಿನ ಗಂಟೇ ಸರಿ.

ಕಾಟಾಚಾರದ ಸಭೆ

ಇದೇ ಮಹಾನಗರದ ನಾಯಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ವೇದಿಕೆಯ ಪ್ರಮುಖರು ಪ್ರಸ್ತಾವನೆ ಸಲ್ಲಿಸಿದರು. ಅದಕ್ಕೆ ಭಾರೀ ಉತ್ಸಾಹ ತೋರಿದ ಬೊಮ್ಮಾಯಿ, ಸಚಿವರು, ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು.

ಕೆಲವೇ ದಿನಗಳಲ್ಲಿ ಅಂದಿನ ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಹುಬ್ಬಳ್ಳಿಯಲ್ಲಿ ವೇದಿಕೆಯ ಪ್ರಮುಖರ ಜತೆ ಕೆಲವೇ ನಿಮಿಷಗಳ ಕಾಟಾಚಾರದ ಸಭೆ ನಡೆಸಿ, ತಮ್ಮ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎನ್ನುವ ಭರವಸೆ ನೀಡಿದರು. ಆದರೆ, ಆ ಯಾವುದೇ ಭರವಸೆಗಳ ಈಡೇರಲಿಲ್ಲ.

ಇಷ್ಟೆಲ್ಲ ನಿರಾಶಾದಾಯಕ ಬೆಳವಣಿಗೆಯಲ್ಲೂ ವೇದಿಕೆಯ ಪ್ರಮುಖರು ತಮ್ಮ ಉತ್ಸಾಹ ಕಳೆದುಕೊಂಡಿಲ್ಲ. ಈ ಹೊಸ ಸರ್ಕಾರಗಳ ಮುಂದೆಯೂ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಅವರಿಗೂ ತಮ್ಮ ಸಲಹೆ ರೂಪದ ಪ್ರಸ್ತಾವನೆ ಕಳಿಸಿ ಭೇಟಿಗೆ ಸಮಯ ಕೇಳಿದ್ದಾರೆ. ಆದರೆ, ಮೂರು ತಿಂಗಳಾದರೂ ಸಚಿವರಿಂದ ಉತ್ತರ ಬಂದಿಲ್ಲ. ಭೇಟಿಗೆ ಸಮಯವೂ ಸಿಕ್ಕಿಲ್ಲ. ಆದರೂ ವೇದಿಕೆಯ ಪ್ರಯತ್ನ ಮಾತ್ರ ನಿಂತಿಲ್ಲ.

ಮೂವರು ಮುಖ್ಯಮಂತ್ರಿಗಳು, ಮೂವರು ಕೇಂದ್ರ ಸಚಿವರು, ಇಬ್ಬರು ಸಭಾಪತಿಗಳು, ಹಲವು ಸಚಿವರನ್ನು ನೀಡಿದ ಈ ಮಹಾನಗರಕ್ಕೆ ಅಭಿವೃದ್ಧಿ ವಿಷಯದಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ. ಇದನ್ನು ಮನಗಂಡು ಅಭಿವೃದ್ಧಿ ವೇದಿಕೆ ಹೊಸ ಹೊಸ ಕನಸಿನೊಂದಿಗೆ ಟೊಂಕ ಕಟ್ಟಿ ನಿಂತಿದೆ.ಪ್ರಮುಖ ಬೇಡಿಕೆಗಳು

- ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಜತೆಗೆ ಸ್ವಾವಲಂಬಿ ಭಾರತ ಆಗಬೇಕು.

- ಚೀನಾ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಗೊಂಬೆ, ಪ್ಲಾಸ್ಟಿಕ್‌, ಇಲೆಕ್ಟ್ರಾನಿಕ್ಸ್, ಮೆಡಿಕಲ್‌ ಸಾಮಗ್ರಿಗಳನ್ನು ಸ್ಥಳೀಯವಾಗಿ ಉತ್ಪಾದಿಸಬೇಕು.

- ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶ ಉತ್ತಮವಾಗಿದೆ.

- ರಪ್ತು ಮತ್ತು ಆಮದು ವಿಷಯದಲ್ಲಿ ಸ್ವತಂತ್ರ ಇಲಾಖೆ ರಚಿಸುವ ಮೂಲಕ, ಸ್ಥಳೀಯವಾಗಿಯೇ ಉತ್ಪಾದನೆ ಮಾಡಲು ಸಾಧ್ಯವಾಗುವ ವಸ್ತುಗಳ ಆಮದು ನಿಷೇಧಿಸಬೇಕು.

- ವಿಶೇಷ ಹೂಡಿಕೆ ವಲಯ ಘೋಷಣೆ.

- ರಾಷ್ಟ್ರೀಯ ಹೆದ್ದಾರಿಗುಂಟ 1000 ಎಕರೆ ಹೊಸ ಕೈಗಾರಿಕಾ ಪ್ರದೇಶ ರಚನೆ.

- ಗ್ಲೋಬಲ್‌ ಡಿಸೈನ್‌ ಸೆಂಟರ್‌ ಸ್ಥಾಪನೆ.

- 100 ಎಕರೆ ಪ್ರದೇಶದಲ್ಲಿ ಲಂಚ್‌ ಪ್ಯಾಡ್‌ ಸ್ಥಾಪನೆ.

- ಎಫ್‌ಎಂಸಿಜಿ ಪಾರ್ಕ್‌ ಸ್ಥಾಪನೆ.ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದೇವೆ

ದೇಶದಲ್ಲಿ ಮಹಾನಗರಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಮನಗಂಡು ಈ ಮಹಾನಗರಕ್ಕೂ ಅಂಥ ಪರಿಸ್ಥಿತಿ ಬರಬಾರದು ಎನ್ನುವ ಕಳಕಳಿ, ಎಲ್ಲದಕ್ಕೂ ಹೆಚ್ಚಾಗಿ ಇಲ್ಲಿನ ಯುವ ಪ್ರತಿಭೆಗಳ ವಲಸೆ ತಪ್ಪಿಸಲು ಇರುವ ಅವಕಾಶ, ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಯಾರಿಂದಲೂ ಉತ್ತಮ ಸ್ಪಂದನೆ ಲಭಿಸಿಲ್ಲ. ಅದರೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ.

ಡಾ. ವಿಎಸ್‌ವಿ ಪ್ರಸಾದ ಖಜಾಂಚಿ ಹು-ಧಾ ಅಭಿವೃದ್ಧಿ ವೇದಿಕೆ

Share this article