- ತಾಲೂಕು ಕಸಾಪ - ಆರೋಗ್ಯ ಇಲಾಖೆ ಆಶ್ರಯದಲ್ಲಿ ಮುತ್ತಿನಕೊಪ್ಪದಲ್ಲಿ ಉಪನ್ಯಾಸ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹೆಣ್ಣು ಸಮಾಜದ ಕಣ್ಣಾಗಿದ್ದು ಹೆಣ್ಣಿಗೆ ಗೌರವ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಮುತ್ತಿನಕೊಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಆಶಾ ವಿಶ್ವನಾಥ್ ತಿಳಿಸಿದರು.
ಮಂಗಳವಾರ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಮಹಿಳೆಯರಿಗೆ ಅಪಮಾನ ಮಾಡಿದರೆ, ದೌರ್ಜನ್ಯ ಮಾಡಿ ನಂತರ ಯಾಗ, ಯಜ್ಞಾಧಿಗಳನ್ನು ಮಾಡಿದರೂ ಅಲ್ಲಿ ದೇವತೆಗಳು ನೆಲೆಸಲ್ಲ. ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಸ್ತ್ರೀಯರು ಸಂತೋಷದಿಂದ ಬದುಕಿದರೆ ಅವಳ ಕುಟುಂಬ ಸಂತೋಷದಿಂದ ಇರುತ್ತದೆ. ಕುಟುಂಬದ ಜವಬ್ದಾರಿಯನ್ನು ಹೊರುವ ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ ತನ್ನ ಕರ್ತವ್ಯವನ್ನು ಅತ್ಯಂತ ಜವಬ್ದಾರಿ ಯಿಂದ ನಿರ್ವಹಿಸುತ್ತಾಳೆ ಎಂದರು.
ಕ.ಸಾ.ಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು ವಿನೂತನ ಕಾರ್ಯಕ್ರಮ ನಡೆಸಿ ಕನ್ನಡ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಪ್ರಸ್ತುತ ಆರೋಗ್ಯ ಇಲಾಖೆ ಯೊಂದಿಗೆ ಕಾರ್ಯಕ್ರಮ ನಡೆಸಿದೆ. ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ವಿಶೇಷ ಸ್ಪರ್ಧೆ ಏರ್ಪಡಿಸಲಾಗುವುದು. ತಾಲೂಕಿನಲ್ಲಿ ತೆರೆ ಮರೆಯಲ್ಲಿರುವ ಹಲವಾರು ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿದ್ದೇವೆ ಎಂದರು.ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಸುರೇಶ್ ಮಾತನಾಡಿ, ಪ್ರತಿಯೊಬ್ಬ ಯಶಸ್ಸಿನ ಪುರುಷನ ಹಿಂದೆ ಮಹಿಳೆ ಪಾತ್ರವಿದೆ. ಪ್ರತಿಯೊಂದು ಸಂಸಾರದಲ್ಲೂ ಹೆಣ್ಣೇ ಸರ್ವಸ್ವ. ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪ ವಾಗಿದ್ದು ಭ್ರೂಣ ಹತ್ಯೆ ಯನ್ನು ಎಲ್ಲರೂ ಖಂಡಿಸಬೇಕು. ಭ್ರೂಣ ಹತ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉದಯೋನ್ಮುಕ ಗಾಯಕಿ ಭಾನುಮತಿ, ಡಾ.ಸುರೇಶ್ ಕುಮಾರ್ ಹಾಗೂ ಉಪನ್ಯಾಸಕಿ ಆಶಾ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಜುಬೇದ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಕೆ.ಗಂಗಾಧರ್. ಕಸಾಪ ಖಜಾಂಚಿ ಕೆ.ಎಸ್.ರಾಜಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಇದ್ದರು.