ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಯಿಯ ಮಡಿಲು ಸ್ವರ್ಗಕ್ಕೂ ಮಿಗಿಲಾಗಿದ್ದು, ಆಕೆಯ ವಾತ್ಸಲ್ಯ ಯಾವುದೇ ದೇವರ ಒಲುಮೆಗಿಂತ ಶ್ರೇಷ್ಠ ಎಂದು ಕುಲರತ್ನಭೂಷಣ ಮುನಿ ಮಹಾರಾಜರು ನುಡಿದರು.ವಿಶ್ವ ತಾಯಂದಿರ ದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ಭೂಮಿಯ ಮೇಲೆ ತಾಯಿಗಿಂತ ದೇವರಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ತಾಯಿಗೆ ವಿಶೇಷ ಸ್ಥಾನವಿದೆ. ಯಾವುದೇ ವ್ಯಕ್ತಿ ಎಷ್ಟೇ ದೊಡ್ಡ ಸ್ಥಾನಕ್ಕೇರಿದ್ದರೂ, ಇಡೀ ಜಗತ್ತೇ ಮೆಚ್ಚುವಂತ ಸಾಧನೆ ಮಾಡಿದ್ದರೂ ಅದಕ್ಕೆಲ್ಲಾ ಮೊದಲ ಕಾರಣ ತಾಯಿಯೇ ಆಗಿರುತ್ತಾಳೆ ಎಂದರು.
ತಾಯಿಯ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು. ನಿತ್ಯವೂ ತಾಯಿಯ ದಿನವೇ ಆಗಿರುತ್ತದೆ. ಆದರೆ ವಿಶೇಷವಾದ ದಿನ ನಿಮಗಾಗಿ ಬಂದಿದೆ. ತಾಯಂದಿರ ದಿನ ಆಚರಿಸಿ ಸಂಭ್ರಮಿಸಿದ್ದು ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ತಾಯಂದಿರ ದಿನದ ಇತಿಹಾಸವು ಪ್ರಾಚೀನ ಕಾಲದಷ್ಟು ಹಿಂದಿನದು. ಆದರೆ ರಜಾದಿನದ ಆಧುನಿಕ ಆಚರಣೆ ೨೦ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾಗಿದೆ. ಪ್ರಾಚೀನ ಬೇರುಗಳ ಪ್ರಕಾರ, ಪ್ರಾಚೀನ ಗ್ರೀಕರು ಮತ್ತು ರೋಮನ್ನರು ರಿಯಾ ಮತ್ತು ಸೈಬೆಲ್‌ನಂತಹ ಮಾತೃ ದೇವತೆಗಳನ್ನು ಗೌರವಿಸುವ ಹಬ್ಬಗಳನ್ನು ಆಚರಿಸುತ್ತಿದ್ದರು. ಈ ಆಚರಣೆಗಳನ್ನು ವಸಂತಕಾಲದಲ್ಲಿ ನಡೆಸಲು ಪ್ರಾರಂಭಿಸಿದರು ಎಂದು ಇತಿಹಾಸ ನೆನಪಿಸಿದರು.ಸಫರ್ಜೆಟ್ ಜೂಲಿಯಾ ವಾರ್ಡ್ ಹೋವೆ ತಾಯಂದಿರ ದಿನದ ಆಚರಣೆಗೆ ಪ್ರಯತ್ನಗಳನ್ನು ನಡೆಸಿದ್ದರು ಎಂದು ಇತಿಹಾಸದ ಮುಖಾಂತರ ನಾವು ಕೇಳುತ್ತೇವೆ. 1970ರಲ್ಲಿ ವಾರ್ಡ್ ಹೋವೆ ಅವರು ತಾಯಂದಿರ ದಿನ ಘೋಷಣೆ ದೃಢಪಡಿಸಿದರು. ಶಾಂತಿ ಮತ್ತು ನಿಶ್ಯಸ್ತ್ರೀಕರಣಕ್ಕಾಗಿ ಮಹಿಳೆಯರು ಒಗ್ಗೂಡಬೇಕೆಂದು ಕರೆ ನೀಡಿದ್ದರು. ಆಧುನಿಕ ತಾಯಂದಿರ ದಿನವನ್ನು ಅಮೆರಿಕದ ಸಾಮಾಜಿಕ ಕಾರ್ಯಕರ್ತೆ ಅನ್ನಾ ಜಾರ್ವಿಸ್ ಮುನ್ನಡೆಸಿದರು. ೧೯೦೫ ರಲ್ಲಿ ತನ್ನ ಸ್ವಂತ ತಾಯಿಯ ಮರಣದ ನಂತರ, ಜಾರ್ವಿಸ್ ತಾಯಂದಿರನ್ನು ಗೌರವಿಸಲು ರಾಷ್ಟ್ರೀಯ ರಜಾ ದಿನವನ್ನು ಸ್ಥಾಪಿಸಲು ಪ್ರಚಾರ ಮಾಡಿದರು ಎಂದು ವಿವರಿಸಿದರು.
1914 ರಲ್ಲಿ ಅಧ್ಯಕ್ಷ ವುಡ್ರೊ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಮೆರಿಕದಲ್ಲಿ ತಾಯಂದಿರ ದಿನವೆಂದು ಗೊತ್ತುಪಡಿಸುವ ಘೋಷಣೆಗೆ ಸಹಿ ಹಾಕಿದರು. ಈ ಅಧಿಕೃತ ಮಾನ್ಯತೆಯು ದೇಶ ವಿದೇಶಗಳಲ್ಲಿ ತಾಯಂದಿರ ದಿನವಾಗಿ ಆಚರಿಸಲು ಕಾರಣವಾಯಿತು. ಅಂದಿನಿಂದ, ತಾಯಂದಿರ ದಿನವನ್ನು ಪ್ರಪಂಚದಾದ್ಯಂತ ವಿವಿಧ ದೇಶಗಳು ಅಳವಡಿಸಿಕೊಂಡಿವೆ. ಆದರೆ ಅನ್ನಾ ಜಾರ್ವಿಸ್ ಅವರನ್ನು ಹೆಚ್ಚಾಗಿ ತಾಯಂದಿರ ದಿನದ ಸ್ಥಾಪಕ ಎಂದು ಕರೆಯಲಾಗುತ್ತದೆ. ನಂತರ ಅವರು ಅದರ ವಾಣಿಜ್ಯೀಕರಣದಿಂದಾಗಿ ರಜಾದಿನದ ಕಟು ಟೀಕಾಕಾರರಾದರು ಎಂದು ಹೇಳಲಾಗುತ್ತದೆ ಎಂದು ತಿಳಿಸಿಕೊಟ್ಟರು.