ಸರ್ಕಾರದಿಂದ ಸಹಕಾರ ವ್ಯವಸ್ಥೆ ಹತ್ತಿಕ್ಕುವ ಕ್ರಮ: ಪ್ರಮೋದ ಹೆಗಡೆ

KannadaprabhaNewsNetwork | Published : Feb 18, 2024 1:32 AM

ಸಾರಾಂಶ

ಸ್ವಾಯತ್ತ ಸಹಕಾರಿ ವ್ಯವಸ್ಥೆಯನ್ನು ಹತ್ತಿಕ್ಕಲಾಗುತ್ತಿರುವ ಇತ್ತೀಚಿನ ಸರ್ಕಾರದ ಚಿಂತನೆ ತೀರಾ ಅಸಮಂಜಸವೂ, ಅವೈಜ್ಞಾನಿಕವೂ ಆಗಿದೆ ಎಂದು ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಯಲ್ಲಾಪುರ: ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಅಧಿಕ ಪ್ರಮಾಣದಲ್ಲಿ ಕ್ರಿಯಾಶೀಲವಾಗಿಯೂ, ಉಪಯುಕ್ತವಾಗಿಯೂ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಹಕಾರಿ ವ್ಯವಸ್ಥೆಯನ್ನು ಹತ್ತಿಕ್ಕಲಾಗುತ್ತಿರುವ ಇತ್ತೀಚಿನ ಸರ್ಕಾರದ ಚಿಂತನೆ ತೀರಾ ಅಸಮಂಜಸವೂ, ಅವೈಜ್ಞಾನಿಕವೂ ಆಗಿದೆ ಎಂದು ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಆವಾರದಲ್ಲಿ ಸಂಘದ ದ್ವಿದಶಮಾನೋತ್ಸವ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಜನರ ಜೀವನೋತ್ಸಾಹ, ಕರ್ತವ್ಯಪ್ರಜ್ಞೆ ಮುಂತಾದ ವಿವಿಧ ಸಂಗತಿಗಳ ಅವಲೋಕನಕ್ಕಾಗಿ ಆಯೋಜಿಸಲಾಗಿರುವ ದ್ವಿದಶಮಾನೋತ್ಸವ ಕಾರ್ಯಕ್ರಮದಲ್ಲಿ ಕಾಣಿಸುತ್ತಿರುವ ಸಾಂಸ್ಕೃತಿಕ ಛಾಯೆ ಅಪೂರ್ವವಾಗಿದೆ. ಸಮಾಜದ ಮಧ್ಯಮ ಮತ್ತು ಬಡ ವರ್ಗದ ಜನರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶ್ರೀಮಾತಾ ಸಹಕಾರಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ನೀಡುತ್ತಿರುವ ನೆರವು ನಿಜಕ್ಕೂ ಉಪಯುಕ್ತವೆನಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಮ್ಮಚಗಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಸುದೀರ್ಘ ಪ್ರಮಾಣದ ಸಾಧನೆ ಮಾಡಿರುವ ಶ್ರೀಮಾತಾ ಸಹಕಾರಿಯ ಬೆಳವಣಿಗೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಅಧ್ಯಕ್ಷರ ಪ್ರಾಮಾಣಿಕತೆ, ಶ್ರದ್ಧೆ, ಆತ್ಮವಿಶ್ವಾಸ ಮತ್ತು ನಂಬಿಕೆಗಳೇ ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಜ್ಯೋತಿರ್ವಿದ್ವಾನ್ ಡಾ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಮತ್ತು ಉಮ್ಮಚಗಿಯ ವೈದ್ಯ ಎಂ.ಎಸ್. ಭಟ್ಟ ಮಾರಿಗೋಳಿ ಅವರನ್ನು ಸನ್ಮಾನಿಸಲಾಯಿತಲ್ಲದೇ, ಸಂಘದ ಎಲ್ಲ ಶಾಖೆಗಳ ವ್ಯಾಪ್ತಿಯ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಾಗೇಂದ್ರ ಭಟ್ಟ ಮಾತನಾಡಿ, ಸಂಸ್ಥೆಯ ೨೦ ವರ್ಷಗಳ ಪ್ರಗತಿ ಅನೂಹ್ಯ ಸಾಧನೆಯಾಗಿದೆ. ಉತ್ತಮ ಕ್ರಿಯಾಶೀಲತೆ ಸಮಾಜದ ಜನಕ್ಕೆ ಉಪಕಾರಿಯಾಗಿದೆ ಎಂದರು.

ಸನ್ಮಾನಿತ ಡಾ. ಎಂ.ಎಸ್. ಭಟ್ಟ ಮಾತನಾಡಿ, ಶ್ರೀಮಾತಾ ಸಂಸ್ಥೆಯ ೨೦ ವರ್ಷಗಳ ಸಾರ್ಥಕ ಸೇವೆ ಅತ್ಯಂತ ಶ್ಲಾಘನೀಯವಾಗಿದ್ದು, ಇದು ನಿರಂತರ ಸಮಾಜಕ್ಕೆ ಒಳಿತು ಮಾಡುವಂತಾಗಲಿ ಎಂದರು.

ಬೆಂಗಳೂರಿನ ವಿ. ವೆಂಕಟೇಶಮೂರ್ತಿ, ಕಳಚೆಯ ಸಹ್ಯಾದ್ರಿ ಸೇ.ಸ. ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಯಲ್ಲಾಪುರದ ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಕುಂದರಗಿ ಸೇ.ಸ. ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ವಕೀಲ ಶಶಾಂಕ ಹೆಗಡೆ ಶೀಗೇಹಳ್ಳಿ ಸಾಂದರ್ಭಿಕ ಮಾತನಾಡಿದರು.

ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಉಪಸ್ಥಿತರಿದ್ದರು. ಸುನೀತಾ ಭಟ್ಟ ಪ್ರಾರ್ಥಿಸಿದರು. ಸಹಕಾರಿಯ ಉಪಾಧ್ಯಕ್ಷ ಎಸ್.ಎಸ್. ಭಟ್ಟ ಸ್ವಾಗತಿಸಿದರು. ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಪ್ರಾಸ್ತಾವಿಕ ಮಾತನಾಡಿ, ಸಂಘವು ನಡೆದು ಬಂದ ದಾರಿ ಮತ್ತು ಭವಿಷ್ಯದ ಯೋಜನೆಗಳ ಮಾಹಿತಿ ನೀಡಿದರು. ಎಂ.ಕೆ. ಭಟ್ಟ ಯಡಳ್ಳಿ ನಿರ್ವಹಿಸಿದರು. ಸಹಾಯಕ ಅಧಿಕಾರಿ ಸಿ.ಎಸ್. ಪತ್ರೇಕರ್ ವಂದಿಸಿದರು.

Share this article