ಸಾಗರ: ಅಚ್ಚುಕಟ್ಟು ವ್ಯವಸ್ಥೆ, ಅಪಾರ ಜನಸಾಗರ, ಸುಗಮ ಸಂಚಾರಕ್ಕೆ ತೊಂದರೆಯಾಗದ ವ್ಯವಸ್ಥೆ, ಶುಚಿ-ರುಚಿಯಾದ ಊಟ.. ಹೀಗೆ ಹತ್ತು ಹಲವು ಕಾರಣಗಳಿಂದ ಪಟ್ಟಣದಲ್ಲಿ ಮಂಗಳವಾರ ನಡೆದ ಶಕ್ತಿ ಸಾಗರ ಸಂಗಮ ಹೆಸರಿನ ಈಡಿಗ, ಬಿಲ್ಲವ, ನಾಮಧಾರಿ ದೀವರು ಸೇರಿದಂತೆ ೨೬ ಪಂಗಡಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ಯಶಸ್ವಿಯಾಯಿತು.
ಸಮಾವೇಶಕ್ಕೆ ಉಡುಪಿ, ದಕ್ಷಿಣ ಕನ್ನಡ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಶಿವಮೊಗ್ಗದ ಎಲ್ಲ ತಾಲೂಕಿನಿಂದಲೂ ಈಡಿಗ, ಬಿಲ್ಲವ, ನಾಮಧಾರಿ, ದೀವರು ಹಾಗೂ ೨೬ ಸಮುದಾಯಗಳ ಜನರು ತಂಡೋಪತಂಡವಾಗಿ ಬಂದಿದ್ದರು. ಆಯೋಜಕರ ನಿರೀಕ್ಷೆ ಹುಸಿ ಆಗದಂತೆ ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನ ಖಾಸಗಿ ಬಸ್‌ಗಳು, ಸ್ವಂತ ವಾಹನ, ಟೆಂಫೋ, ಮಿನಿ ಬಸ್‌ಗಳು ಸೇರಿದಂತೆ ಸಾವಿರಾರು ವಾಹನಗಳಲ್ಲಿ ಆಗಮಿಸಿ, ಸಮಾವೇಶಕ್ಕೆ ಸಾಕ್ಷಿಯಾದರು.
ಸುಗಮ ಸಂಚಾರಕ್ಕೆ ಆದ್ಯತೆ:ರಾಜಕೀಯ ಕಾರ್ಯಕ್ರಮವೆಂದರೆ ಜನಸಾಮಾನ್ಯರಿಗೆ ದಿನವಿಡೀ ಕಿರಿಕಿರಿ ತಪ್ಪದು. ಆದರೆ, ಇಲ್ಲಿನ ಸಮಾವೇಶದಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನ, ಸಾವಿರಾರು ವಾಹನಗಳಲ್ಲಿ ಬಂದಿದ್ದರೂ, ಸ್ಥಳೀಯರಿಗೆ ಸಂಚಾರ ದಟ್ಟಣೆಯ ತೊಂದರೆ ಆಗಿರಲಿಲ್ಲ. ಬಸ್, ಮಿನಿ ಬಸ್‌ಗಳಿಗೆ ಒಂದು ಜಾಗ, ಕಾರ್ ಪಾರ್ಕಿಂಗ್‌ಗೆ ಮತ್ತೊಂದೆಡೆ, ಬೈಕ್‌ಗಳಿಗೆ ಬೇರೆ ಹೀಗೆ ಪ್ರತ್ಯಕೇವಾಗಿ ಸಮಾರಂಭ ನಡೆಯುವ ಸ್ಥಳದ ಸಮೀಪದಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸಲಾಗಿತ್ತು. ಜೊತೆಗೆ ಗಣ್ಯರ ಕಾರುಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿದ್ದೂ ವಿಶೇಷವಾಗಿತ್ತು.
ಸಮಾವೇಶಕ್ಕೆ ಬಂದವರಿಗೆ ಬಿಸಿಲ ಬೇಗೆ ತಪ್ಪಿಸುವ ಉದ್ದೇಶದಿಂದ ಮಜ್ಜಿಗೆ, ನೀರಿನ ಪ್ಯಾಕೇಟ್‌ಗಳನ್ನು ಯತೇಚ್ಛವಾಗಿ ಸರಬರಾಜು ಮಾಡಲಾಗಿತ್ತು. ಜೊತೆಗೆ ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟೋಪಚಾರಕ್ಕೂ ಆದ್ಯತೆ ನೀಡಿ, ಯಾವುದೇ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಸಮಾರಂಭಕ್ಕೆ ಬಂದ ಎಲ್ಲರಿಗೂ ಗುಣಮಟ್ಟದ ತಿಂಡಿ, ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.