ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಣ್ಣೆತ್ತಿನ ಅಮವಾಸ್ಯೆಯನ್ನು ರೈತ ಬಾಂಧವರು, ಜನರು ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು.ಅಮವಾಸ್ಯೆ ಹಿನ್ನೆಲೆಯಲ್ಲಿ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನಕ್ಕೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಮಕ್ಕಳೊಂದಿಗೆ ಮಾರುಕಟ್ಟೆಗೆ ತೆರಳಿದ ಜನರು ವಿವಿಧೆಡೆ ಮಣ್ಣೆತ್ತುಗಳ ದರ ಚೌಕಾಸಿ ಮಾಡಿ ಮಕ್ಕಳಿಗೆ ಇಷ್ಟವಾದ ಬಣ್ಣ ಹಚ್ಚಿದ ಅಲಂಕಾರಿಕ ಮಣ್ಣೆತ್ತುಗಳನ್ನು ಖರೀದಿಸಿದರೆ ಇನ್ನೂ ಕೆಲವರು ಬಣ್ಣ ಹಚ್ಚದೇ ಇರುವ ಮಣ್ಣೆತ್ತುಗಳೊಂದಿಗೆ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಮಾರುಕಟ್ಟೆಯಲ್ಲಿ ಮಣ್ಣಿನಿಂದ ತಯಾರಿಸಿದ ಹಾಗೂ ಬಣ್ಣದಿಂದ ಸಿಂಗರಿಸಿದ ವಿವಿಧ ಬಗೆಯ ಪಿಒಪಿ ಮಣ್ಣೆತ್ತುಗಳು ಆಕಾರಕ್ಕೆ ತಕ್ಕಂತೆ ₹೫೦ ರಿಂದ ₹೨೦೦೦ ವರೆಗೆ ಮಾರಾಟವಾದವು.ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗಲ್ಲಿಗಳಲ್ಲಿ ಅಲಂಕಾರಿಕ ಮಂಟಪ ಹಾಕಿ ಮಧ್ಯಾಹ್ನ, ಸಂಜೆ ಮಣ್ಣೆತ್ತುಗಳನ್ನು ಪ್ರತಿಷ್ಠಾಪಿಸುತ್ತಿರುವುದು ಕಂಡು ಬಂದಿತು.ಮನೆಯಲ್ಲಿ ದೇವರ ಜಗುಲಿಯ ಮೇಲೆ, ಕೆಲವರು ಮನೆಯಲ್ಲಿ ಮಂಟಪದಲ್ಲಿ ಮಣ್ಣೆತ್ತುಗಳನ್ನು ಪ್ರತಿಷ್ಠಾಪಿಸಿದ ನಂತರ ಕುಟುಂಬ ಸದಸ್ಯರೆಲ್ಲರೂ ಪೂಜೆ ಸಲ್ಲಿಸಿ ಕಾಯಿ, ಕರ್ಪೂರದೊಂದಿಗೆ ನೈವೇದ್ಯ ಅರ್ಪಿಸಿ ಮಳೆ, ಬೆಳೆ ಸಮೃದ್ಧಿಯಾಗಲೆಂದು ಪ್ರಾರ್ಥಿಸಿದರು. ಮಣ್ಣೆತ್ತಿನ ಪೂಜೆಯ ನಂತರ ಹಬ್ಬದ ಅಂಗವಾಗಿ ತಯಾರಿಸಲಾಗಿದ್ದ ವಿಶೇಷ ಖಾದ್ಯಗಳಾದ ಹೋಳಿಗೆ, ಕರ್ಚಿಕಾಯಿ, ಕರಿಗಡುಬು, ಪಾಯಸವನ್ನು ಕುಟುಂಬ ಸದಸ್ಯರು ಸವಿದರು.
ತಾಲೂಕಿನ ಮನಗೂಳಿ ಪಟ್ಟಣದ ಭೀಮರಾವ ಕುಂಬಾರ ಅವರು ಈ ಸಲ ಬಣ್ಣ ಹಚ್ಚಿದ್ದ ಮಣ್ಣೆತ್ತುಗಳನ್ನು ಗುರುವಾರ ಮಾರಾಟಕ್ಕೆ ತಂದಿದ್ದರು. ಅವರು ರಾತ್ರಿ ಒಂಭತ್ತು ಗಂಟೆಯೊಳಗೆ ಬಣ್ಣ ಹಚ್ಚಿದ್ದ ತಾವು ತಂದಿದ್ದ ಎಲ್ಲ ಮಣ್ಣೆತ್ತುಗಳನ್ನು ₹೫೦ ರಿಂದ ೧೦೦ ರವರೆಗೆ ಮಾರಾಟ ಮಾಡಿ ನಮ್ಮ ಊರಿಗೆ ಹೋದೆ ಎಂದು ಶುಕ್ರವಾರ ಪತ್ರಿಕೆಗೆ ತಿಳಿಸಿದರು.ಪಟ್ಟಣದ ಗದಿಗೆಪ್ಪ ಕುಂಬಾರ ಅವರು ಈ ಸಲ ಮೂರುವರೆ ಸಾವಿರ ಜೋಡಿ ಅಲಂಕಾರಿಕ ಪಿಓಪಿ ಎತ್ತುಗಳು ಮಾರಾಟ ಆಗಿವೆ. ಲಾಭ ಬಹಳ ನೋಡದೇ ಮಾರಾಟ ಮಾಡಲಾಗಿದೆ. ನಿನ್ನೆ, ಇಂದು ತರಿಸಲಾದ ಎತ್ತುಗಳಲ್ಲಿ ಸ್ವಲ್ಪ ಮಾತ್ರ ಮಾರಾಟವಾಗಿ ಒಂದೂವರೆ ಸಾವಿರ ಜೋಡಿ ಉಳಿದುಕೊಂಡಿವೆ. ನಮಗೆ ಮಣ್ಣೆತ್ತಿನ ಮಾರಾಟದಿಂದಾಗಿ ಅಷ್ಟಾಗಿ ಲಾಭವಾಗದೇ ಹೋದರೂ ಸಂಪ್ರದಾಯದಂತೆ ಮಣ್ಣೆತ್ತು ಮಾರಾಟ ಮಾಡಲಾಗುವುದು ಎಂದು ಹೇಳಿದರು.