ಗದಗ: ಹೆಚ್ಚಾಗಿರುವ ಜನಸಂಖ್ಯೆ. ಜನರ ಬೇಡಿಕೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಮುದಾಯಗಳ ಆಶೋತ್ತರ ಈಡೇರಿಸುವ ಹೊಸ ಮೀಸಲಾತಿ ನೀತಿ ಅಗತ್ಯವಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.
ಭಾನುವಾರ ಇಲ್ಲಿ ನಡೆದ ಪಂಚಮಸಾಲಿ ಸಮಾಜದ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಈಗ ದೇಶದಲ್ಲಿ ಮೀಸಲಾತಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಎಲ್ಲ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಕಾರಣ ಶಿಕ್ಷಣ ಕಲಿತು ಜಾಗೃತರಾಗಿದ್ದಾರೆ. ನಮ್ಮ ಮಕ್ಕಳು ವಿದ್ಯಾವಂತರಾಗಿ ದೊಡ್ಡವರಾಗಬೇಕು ಎಂಬ ಆಸೆಯಿಂದ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಆದರೆ, ಸಮಸ್ಯೆ ಇರುವುದು ಒಟ್ಟಾರೆ ಶೇ. 50ರಷ್ಟು ಮಾತ್ರ ಮೀಸಲಾತಿ ನೀಡಲು ಅವಕಾಶ ಇದೆ. ಬೆಳೆದಿರುವ ಜನಸಂಖ್ಯೆ ಹೆಚ್ಚಾಗಿರುವ ಜನರ ಬೇಡಿಕೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಮುದಾಯಗಳ ಅಶೋತ್ತರ ಈಡೇರಿಸುವಂತೆ ಮೀಸಲಾತಿ ನೀತಿ ಜಾರಿಗೆ ತರುವುದು ಅವಶ್ಯಕತೆ ಇದೆ. ಹೀಗಾಗಿ ಈ ವಿಚಾರ ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ನಾನು ಅಧಿಕಾರದಲ್ಲಿ ಇದ್ದಾಗ ಎಸ್ಸಿ ಸಮುದಾಯದ ಮೀಸಲಾತಿ ಶೇ. 15ರಿಂದ ಶೇ 17, ಎಸ್ಪಿ ಸಮುದಾಯದ ಮೀಸಲಾತಿ ಪ್ರಮಾಣ ಶೇ. 3ರಿಂದ ಶೇ. 7ಕ್ಕೆ ಹೆಚ್ಚಳ ಮಾಡಿದ್ದೇವು. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ. 2ರಷ್ಟು ಹೆಚ್ಚಳ ಮಾಡಿದೇವು. ಆದರೆ, ಮತ್ತೆ ಶೇ. 50 ಮೀಸಲಾತಿ ಮಿತಿ ಇರುವುದರಿಂದ ಕಾನೂನು ಸಂಘರ್ಷ ಏರ್ಪಟ್ಟಿದೆ. ನಾವು ಏನು ಮಾತನಾಡಿದ್ದೇವೆಯೋ ಅದರಂತೆ ನಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮಾಜಕ್ಕೆ ನ್ಯಾಯ ಕೊಡಿಸಲು ದಿಟ್ಟ ಹೋರಾಟ ಆಗತ್ಯವಿದೆ. ಅದಕ್ಕಾಗಿ ನಾನು ಸಿದ್ಧನಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಶ್ರೀವಚನಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಮಾಜಿ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಅನೇಕ ಮುಖಂಡರು ಇದ್ದರು.