ಗುಡ್ಡ ಅಗೆದು ಮನೆ ನಿರ್ಮಾಣಕ್ಕೆ ಬರಲಿದೆ ಹೊಸ ನಿಯಮ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲು ಮತ್ತು ವಿಪತ್ತು ನಿರ್ವಹಣೆಗಾಗಿ ಜಿಲ್ಲಾದ್ಯಂತ ಗ್ರಾಮ ಮಟ್ಟ ಹಾಗೂ ವಾರ್ಡ್‌ ಮಟ್ಟದಲ್ಲಿ 292 ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಮುಲ್ಲೈ ಮುಗಿಲನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡಗಳನ್ನು ಅಗೆದು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪ ಯೋಜನೆಯಡಿ ನಿಯಮಾವಳಿ ರೂಪಿಸುವ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.ನಗರದ ಮೆಸ್ಕಾಂ ಕಚೇರಿಯಲ್ಲಿ ಭಾನುವಾರ ವಿಪತ್ತು ನಿರ್ವಹಣಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಹಳಷ್ಟು ಕಡೆ ಗುಡ್ಡವನ್ನು ಕಡಿದಾಗಿ ಕತ್ತರಿಸಿ ಕೆಳಭಾಗದಲ್ಲಿ ಮನೆಗಳು, ಲೇಔಟ್‌ಗಳನ್ನು ಮಾಡಿರುವುದು ಕಂಡು ಬಂದಿದೆ. ಅಂತಹ ಕಡೆ ತಡೆಗೋಡೆ ನಿರ್ಮಿಸಿದರೂ ಗುಡ್ಡ ಕುಸಿದು ಹಾನಿ ಸಂಭವಿಸುವುದು ತಪ್ಪಲ್ಲ. ಇದನ್ನು ತಡೆಗಟ್ಟಲು ಸೂಕ್ತ ನಿಯಮ ರೂಪಿಸಲಾಗುವುದು ಎಂದರು.

ವಿಪತ್ತು ನಿರ್ವಹಣೆಗೆ ತಂಡಗಳು: ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲು ಮತ್ತು ವಿಪತ್ತು ನಿರ್ವಹಣೆಗಾಗಿ ಜಿಲ್ಲಾದ್ಯಂತ ಗ್ರಾಮ ಮಟ್ಟ ಹಾಗೂ ವಾರ್ಡ್‌ ಮಟ್ಟದಲ್ಲಿ 292 ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಮುಲ್ಲೈ ಮುಗಿಲನ್ ತಿಳಿಸಿದರು.

ಈ ಮೊದಲು ಜಿಲ್ಲೆಗೆ ಒಂದು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಯೋಜನೆ ಸಿದ್ಧಪಡಿಸಲಾಗುತ್ತಿತ್ತು. ಜಿಲ್ಲಾ ಮಟ್ಟದಲ್ಲಿ ಇದು ಕಾರ್ಯಾಚರಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಇದರಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ವಿಕೇಂದ್ರೀಕಣಗೊಳಿಸಲಾಗಿದೆ. ಇದರಿಂದಾಗಿ ಪ್ರಾಕೃತಿಕ ವಿಕೋಪದ ಸೂಕ್ಷ್ಮ ಪ್ರದೇಶ, ಅಲ್ಲಿ ಎಷ್ಟು ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತದೆ, ಪ್ರದೇಶದ ಜನ ಸಂಖ್ಯೆ ಎಷ್ಟಿದೆ, ಪರಿಹಾರ ವ್ಯವಸ್ಥೆ ಏನು ಎನ್ನುವುದನ್ನು ಹಿಂದಿನ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಈ 292 ತಂಡಗಳು ವರದಿ ತಯಾರಿಸಿವೆ ಎಂದರು.

ಪ್ರತಿ ತಂಡವು ಓರ್ವ ‘ಇನ್ಸಿಡೆಂಟ್ ಕಮಾಂಡರ್’ನ್ನು ಹೊಂದಿದ್ದು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಈ ತಂಡದಲ್ಲಿರುತ್ತಾರೆ. ಯಾವುದೇ ಕಾರ್ಯಾಚರಣೆ ಸಂದರ್ಭ ಇನ್ಸಿಡೆಂಟ್ ಕಮಾಂಡರ್ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಾಗುತ್ತದೆ. ಈ ತಂಡಗಳ ವರದಿ ಆಧಾರದಲ್ಲಿ ಆಪ್ ಅಭಿವೃದ್ಧಿಪಡಿಸಲಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಆಪ್ ಮೂಲಕ ಕೆಲಸ ನಡೆಯುತ್ತದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಬೇಕಾದ ವಸ್ತು, ಸಲಕರಣೆಗಳನ್ನು ಪೂರೈಸಲಾಗುತ್ತದೆ. ಈಜುಗಾರರು, ಮುಳುಗು ತಜ್ಞರು, ಆಶಾ ಕಾರ್ಯಕರ್ತೆಯರೂ ಈ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿವರಿಸಿದರು.ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ, ಅಧಿಕಾರಿಗಳಿಗೆ ಬರುವ ಕರೆ, ವಾಟ್ಸಾಪ್ ಸಂದೇಶಗಳನ್ನು ಆಪ್ ಮೂಲಕ ಇನ್ಸಿಡೆಂಟ್ ಕಮಾಂಡರ್‌ಗೆ ವರ್ಗಾಯಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಮಾಡಿ ದೂರಿನ ವಿಲೇವಾರಿ ಮಾಡಬೇಕು. ಈ ಕೆಲಸ ಈಗಾಗಲೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜನರು ದೂರುಗಳು ವಾಟ್ಸಾಪ್‌ನಿಂದ ನೇರವಾಗಿ ಆಪ್‌ಗೆ ಬರುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Share this article