ಕನ್ನಡಪ್ರಭ ವಾರ್ತೆ ಪಾಂಡವಪುರ
ಅಮೃತ್ ಯೋಜನೆಯಡಿ ನಡೆದ ಕಾಮಗಾರಿಯಿಂದ ಪಟ್ಟಣದ ರಸ್ತೆಗಳು ಹಾಳಾಗಿವೆ. ತಕ್ಷಣ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಪಟ್ಟಣ ನಿವಾಸಿಗಳು ಪುರಸಭೆ ಕಚೇರಿ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಪುರಸಭೆ ಕಚೇರಿ ಮುಂಭಾಗ ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಪಟ್ಟಣದ ರಸ್ತೆಗಳನ್ನು ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಅಮೃತ್ ಯೋಜನೆ ಪ್ರಾರಂಭವಾಗಿ ಹಲವು ತಿಂಗಳುಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿಯ ಪೈಪ್‌ಲೈನ್ ಅಳವಡಿಕೆಗಾಗಿ ಮನೆ ಮುಂದೆ ಗುಂಡಿ ತೆಗೆಯಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಂಡಿ ಮುಚ್ಚುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರು ರಸ್ತೆಯಲ್ಲಿ ಸುಗಮವಾಗಿ ಓಡಾಡಲು ತೊಂದರೆಯಾಗುತ್ತಿದೆ. ಗುಂಡಿಗಳಿಗೆ ಮುಚ್ಚಿರುವ ಮಣ್ಣು ಕುಸಿಯುತ್ತಿರುವ ಪರಿಣಾಮ ಮನೆ ಮುಂದೆ ಹಳ್ಳ ಬೀಳುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪುರಸಭೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪಟ್ಟಣದ ದೊಡ್ಡಿಬೀದಿ, ಹಳೆ ಪೋಸ್ಟ್ ಆಫೀಸ್ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೂ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ದೊಡ್ಡಿಬೀದಿ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಗುರುವಾರ ಸಂತೆ ದಿನ ಇದೇ ರಸ್ತೆ ಬದಿಯಲ್ಲಿ ಕುಳಿತು ರೈತರು ವ್ಯಾಪಾರ ಮಾಡಬೇಕಿದೆ ಎಂದರು.ಈ ರಸ್ತೆಗಳಲ್ಲಿ ಆಗಬೇಕಿರುವ ಅಮೃತ್ ಯೋಜನೆಯ ಕೆಲಸವನ್ನು ತಕ್ಷಣ ಪೂರ್ಣಗೊಳಿಸಿ ರಸ್ತೆ ಡಾಂಬರೀಕರಣ ಮಾಡುವ ಕೆಲಸ ಕೈಗೆತ್ತಿಕೊಳ್ಳಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಮೃತ್ ಯೋಜನೆ ಕಾಮಗಾರಿ ಹೆಸರಿನಲ್ಲಿ ಪಟ್ಟಣದ ಎಲ್ಲಾ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. 11.5 ಕೋಟಿ ರು. ವೆಚ್ಚದಲ್ಲಿ ಪಟ್ಟಣದ ಎಲ್ಲಾ ರಸ್ತೆಗಳನ್ನು ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ಸರ್ಕಾರದ ಹಣ ವ್ಯರ್ಥವಾಗಿದೆ.ಯೋಜನೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮನಸೋ ಇಚ್ಛೆ ರಸ್ತೆಗಳ ಮಧ್ಯೆ ಗುಂಡಿ ತೆಗೆದು ಹಾಳುಗೆಡವಿದ್ದಾರೆ. ಗುಂಡಿಯನ್ನು ಸರಿಯಾಗಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದರಿಂದ ಮಕ್ಕಳು ಮತ್ತು ವಯೋವೃದ್ಧರು ಕಾಲು ಜಾರಿ ಬೀಳುವ ಸಂಭವವಿದೆ. ಹೀಗಾಗಿ ಗುತ್ತಿಗೆದಾರರು ತಕ್ಷಣ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಯಥಾಸ್ಥಿತಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇಂಜಿನಿಯರ್ ಚೌಡಪ್ಪನಿಗೆ ತರಾಟೆ:ಪ್ರತಿಭಟನಾಕಾರರೊಂದಿಗೆ ಪುರಸಭೆ ಇಂಜಿನಿಯರ್ ಚೌಡಪ್ಪ ಉತ್ತರ ನೀಡುವ ಭರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೋರುವಂತೆ ಪಟ್ಟು ಹಿಡಿದ ಪರಿಣಾಮ ಎಚ್ಚೆತ್ತ ಇಂಜಿನಿಯರ್ ಕ್ಷಮೆ ಕೇಳಿದರು.
ಬಿಜೆಪಿ ರೈತಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್, ಬಾಲಗಂಗಾಧರ್, ದೊರೆಸ್ವಾಮಿ, ಪುರಸಭೆ ಮಾಜಿ ಸದಸ್ಯ ಹನುಮಯ್ಯ, ಹಿರೋಡೆ ಬೀದಿ ಗುರು, ಬಾಲು, ಇತರರು ಇದ್ದರು.