ಹೃದ್ರೋಗ ಸಮಸ್ಯೆ ಕಾಡುತ್ತಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ

KannadaprabhaNewsNetwork | Published : Mar 1, 2024 2:19 AM

ಸಾರಾಂಶ

ಕಲಬುರಗಿಯಲ್ಲಿರುವ ಸನ್‍ರೈಸ್ ಆಸ್ಪತ್ರೆ ತಜ್ಞ ವೈದ್ಯರ ಸಾಧನೆ. ಸವಾಲಿನ ಹೆರಿಗೆ ಸುಸೂತ್ರವಾಗಿಸಿದ ಪ್ರಸೂತಿ ತಜ್ಞೆಗೆ ಅಭಿನಂದನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹೆರಿಗೆಯನ್ನು ಮಹಿಳೆಯರ ಪಾಲಿನ ಪುನರ್ಜನ್ಮ ಅಂತಾರೆ, ಅದರಲ್ಲಿ ಹೃದ್ರೋಗ ಹಾಗೂ ಹರ್ನಿಯಾ ಸಮಸ್ಯೆಯಿಂದ ಗರ್ಭಿಣಿ ಮಹಿಳೆ ಬಳಲುತ್ತಿದ್ದರೆ ಅಂತಹ ಹೆರಿಗೆ ಇನ್ನೂ ಕಷ್ಟದ್ದು.

ಆದರೆ ಕಲಬುರಗಿಯಲ್ಲಿರುವ ಸನ್‌ರೈಸ್‌ ಆಸ್ಪತ್ರೆಯಲ್ಲಿರುವ ವೈದ್ಯರು ಹೃದ್ರೋಗ ಹಾಗೂ ಹರ್ನಿಯಾ ಸಮಸ್ಯೆಯಿರುವ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸನ್‍ರೈಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸನಾ ಫಾತಿಮಾ ಹಾಗೂ ಡಾ.ಸಲ್ಮಾನ್ ಪಟೇಲ್ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮೆರೆದಿದೆ.

ಬಸವಕಲ್ಯಾಣ ತಾಲೂಕಿನ ಗುಂಡೂರು ಗ್ರಾಮದ ಸುಜಾತ ಸುಭಾಷ್ (26) ಇಂಥದ್ದೊಂದು ಸವಾಲಿನ ಹೆರಿಗೆ ಮೂಲಕ ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಸವಾಲಿನ ಮೇಲೆ ಸವಾಲು:

ಎರಡು ವರ್ಷಗಳ ಹಿಂದೆ (ಫೆ.2022) ಹೃದ್ರೋಗದ ಕಾರಣಕ್ಕಾಗಿಯೇ ಸುಜಾತ ಅವರ ಭ್ರೂಣದಲ್ಲಿದ್ದ ಮಗು ಸಾವನ್ನಪ್ಪಿತ್ತು. ಈ ಕಾರಣಕ್ಕಾಗಿ ಮಗು ಪಡೆಯುವ ಸಾಹಸಕ್ಕೆ ಕೈ ಹಾಕದಂತೆ ವೈದ್ಯರು ಸಲಹೆ ನೀಡಿದ್ದರು. ಆದರೂ, ತಾಯ್ತನದ ಆಸೆ ಹೊತ್ತಿದ್ದ ಸುಜಾತ 18 ತಿಂಗಳ ಹಿಂದೆ ಸನ್‍ರೈಸ್ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಟ್ಟಾಗ ಆಕೆ ಆರು ವಾರಗಳ ಗರ್ಭಿಣಿ ಎಂಬುದು ಪತ್ತೆಯಾಗಿತ್ತು. ಆದರೆ, ಆಕೆಗೆ ಹರ್ನಿಯಾ ಸಮಸ್ಯೆಯ ಜೊತೆಗೆ ಗಂಭೀರ ಹೃದ್ರೋಗ ಸಮಸ್ಯೆ ಇರುವುದು ಸಹ ವೈದ್ಯರ ಗಮನ ಸೆಳೆದಿತ್ತು. ಹಾಗಾಗಿ, ತಾಯಿಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಮಾಡಿಸಿಕೊಳ್ಳುವುದೆ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದರೂ ಸುಜಾತ ಗರ್ಭಪಾತಕ್ಕೆ ಒಪ್ಪಿಗೆ ನೀಡದೆ, ಹೇಗಾದರೂ ಸರಿ, ತನಗೆ ಮಗು ಉಳಿಸಿಕೊಡಬೇಕೆಂದು ಬೇಡಿಕೊಂಡಿದ್ದರಿಂದ ಸನ್‍ರೈಸ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಝರಾ ಫಾತಿಮಾ ಇದನ್ನೊಂದು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ್ದಾರೆಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಲ್ಮಾನ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೊದಲ ಹಂತದಲ್ಲಿ ಹರ್ನಿಯಾ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡು ಸುಜಾತಗೆ ನೆಮ್ಮದಿ ಕಲ್ಪಿಸಲಾಗಿತ್ತಾದರೂ, 6 ತಿಂಗಳ ಗರ್ಭಾವಸ್ಥೆಯಲ್ಲಿ ಗರ್ಭಕೋಶದಿಂದ ಶಿಶು ಹೊರಬಂದು ಚರ್ಮದ ಅಡಿಯಲ್ಲಿ ನೆಲೆಗೊಂಡಿದ್ದು ಖುದ್ದು ವೈದ್ಯರಲ್ಲಿ ಆತಂಕ ಮೂಡಿಸಿತ್ತು. ಈ ಹಂತದಲ್ಲಿ ಹೆಚ್ಚು ಕಾಲಹರಣ ಮಾಡದೆ ಪುನಃ ಶಿಶುವನ್ನು ಗರ್ಭಕೋಶದಲ್ಲಿ ಅಳವಡಿಸಿ, ಹೆರಿಗೆಗೂ ಮುನ್ನ ಮತ್ತೊಮ್ಮೆ ಹೊರಬರದಂತೆ ತಡಿಕೆ (ಮೆಷ್) ಅಳವಡಿಸಿ, ಕೊನೆಯ 9 ತಿಂಗಳವರೆಗೆ ತೀವ್ರ ನಿಗಾ ವಹಿಸಲಾಯಿತು. ಹೆರಿಗೆ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತೆ ವಹಿಸಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ, ಕಳೆದ 15 ದಿನಗಳ ಹಿಂದೆ ಸುಜಾತ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಕುಟುಂಬ ಹಾಗೂ ಸನ್‍ರೈಸ್ ಆಸ್ಪತ್ರೆಯ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಡಾ.ಸಲ್ಮಾನ್ ಪಟೇಲ್ ಹೇಳಿದರು.

ಡಾ.ಝರಾ ಫಾತಿಮಾ , ಸರ್ಜನ್ ಡಾ.ಆರಿಫ್ ರಝಾ, ಜನರಲ್ ಸರ್ಜನ್ ಡಾ.ಅಹ್ಮದ್ ಫರಾಜ್, ಅರಿವಳಿಕೆ ತಜ್ಞರಾದ ಡಾ.ಹಸೀಬ್ ಮತ್ತು ಡಾ.ಅಜೀಮುದ್ದೀನ್ ಇದ್ದರು.

ಇದೊಂದು ಹೈ ರಿಸ್ಕ್ ಡೆಲಿವರಿ ಎಂದು ಪ್ರಸೂತಿ ತಜ್ಞೆ ಡಾ.ಝರಾ ಫಾತಿಮಾ ಹೇಳಿದರಲ್ಲದೆ ಈವರೆಗೆ ಗಂಭೀರ ಸ್ವರೂಪದ ಸುಮಾರು 500 ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿರೋದಾಗಿ ನುಡಿದರು.

Share this article