ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಸರ್ಕಾರ ವಕ್ಫ್ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ನ.12ರಂದು ಸಂಜೆ 6 ಗಂಟೆಗೆ ನಗರದ ಸಂಭಾಜಿ ಉದ್ಯಾನದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಡಾ.ಬಸವರಾಜ ಬಾಗೋಜಿ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನಾ ಸಭೆಯಲ್ಲಿ ಕೊಲ್ಲಾಪುರ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಅನೇಕ ಮಠಾಧೀಶರು ಹಾಗೂ ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ. ಕಪಿಲೇಶ್ವರ ಮಂದಿರದಲ್ಲಿ ಸಂಜೆ ಆರತಿ ನೆರವೇರಿಸಿ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮಠ, ಮಂದಿರ, ಶಾಲಾ ಕಾಲೇಜು ಹಾಗೂ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ನೋಟಿಸ್ ನೀಡುತ್ತಿರುವುದು ದುರಂತ. 2013ರಲ್ಲಿ ವಕ್ಫ್ ಕಾಯ್ದೆಗೆ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದು ವಕ್ಫ್ ಮಂಡಳಿಗೆ ಮಿತಿಮೀರಿದ ಅಧಿಕಾರ ನೀಡಿದ ಪರಿಣಾಮ 8 ಸಾವಿರ ಎಕರೆಯಷ್ಟಿದ್ದ ವಕ್ಫ್ ಆಸ್ತಿ ಈಗ 9 ಲಕ್ಷ 40 ಸಾವಿರ ಎಕರೆಗೇರಿದೆ. ರೈತರ ಜಮೀನು ಸೇರಿದಂತೆ ಇನ್ನಿತರ ಸಾರ್ವಜನಿಕ ಆಸ್ತಿಯನ್ನು ಕಬಳಿಸಿಕೊಂಡಿರುವುದು ಆಘಾತಕಾರಿ ಸಂಗತಿ ಎಂದರು.2022ರ ಅ.10ರಂದು ವಾಟ್ಸಾಪ್ ಪೋಸ್ಟ್ ನೆಪ ಮಾಡಿಕೊಂಡು ನೂರಾರು ಜಿಹಾದಿ ಮಾನಸಿಕತೆಯ ಗೂಂಡಾಗಳು ಹಳೆಯ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಕಲ್ಲು ಬಡಿಗೆಗಳಿಂದ ಮುಗಿಬಿದ್ದ ಗುಂಪು ಪೊಲೀಸ್ ವಾಹನಗಳನ್ನು ಪುಡಿಪುಡಿ ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಮಾಡಿತ್ತು. ಇಂತಹ ಪ್ರಕರಣ ಹಿಂಪಡೆಯಲು ಹೊರಟಿರುವ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದರು.
ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯ ಮತ್ತು ಉದ್ಯಮಿ ರೋಹನ ಜವಳಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಳೆ ಹುಬ್ಬಳ್ಳಿ ಠಾಣೆಯ ದಾಳಿ ಪ್ರಕರಣ ಹಿಂಪಡೆಯುತ್ತಿರುವುದು ಸೂಕ್ತವಲ್ಲ. ಪ್ರಕರಣ ಹಿಂಪಡೆಯುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಸಿಯಲಿದೆ. ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯಬಾರದು. ರಾಜ್ಯದಲ್ಲಿ ಯುವತಿಯರ ಕಗ್ಗೊಲೆ, ಲವ್ ಜಿಹಾದ್ ಪ್ರಕರಣ, ಹಿಂದೂ ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲು, ಗಣೇಶ ಮೂರ್ತಿ ಬಂಧನ, ಹೀಗೆ ಅನೇಕ ಘಟನೆಗಳಲ್ಲಿ ಸರ್ಕಾರದ ನೀತಿಗಳು ದ್ವಂದ್ವವಾಗಿವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಲು ಮತ್ತು ನಿಷ್ಪಕ್ಷಪಾತ ಆಡಳಿತ ನಡೆಸುವಂತೆ ಆಗ್ರಹಿಸಲು ಜನಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕೃಷ್ಣ ಭಟ್, ವಿಜಯ ಜಾಧವ, ರೋಹಿತ್ ಉಮನಾಬಾದಿಮಠ, ಶಿವಾಜಿ ಶಹಾಪುರಕರ, ಅರುಣ ಹೊಸಮಠ ಮತ್ತಿತರರು ಉಪಸ್ಥಿತರಿದ್ದರು.
ದೇಶದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿ ಬಡ ರೈತರ, ಸಾರ್ವಜನಿಕರ, ಮಠ, ಮಂದಿರಗಳ ಸರ್ಕಾರಿ ಜಮೀನು ಕಬಳಿಸುವುದಕ್ಕೆ ತಡೆಯೊಡ್ಡುವ ಪ್ರಯತ್ನ ಈಗಿನ ಕೇಂದ್ರ ಸರ್ಕಾರ ನಡೆಸಿದೆ. ಈ ಕಾಯ್ದೆ ಅಂಗೀಕಾರವಾದರೆ ತನ್ನ ಷಡ್ಯಂತ್ರಕ್ಕೆ ತಡೆ ಬರುವುದನ್ನು ಅರಿತು ವಕ್ಫ್ ಮಂಡಳಿ ಕರ್ನಾಟಕದ ಸಾವಿರಾರು ಬಡ ರೈತರ, ಮಠ, ಮಂದಿರಗಳ ಆಸ್ತಿಗಳ ದಾಖಲೆಗಳಲ್ಲಿ ತರಾತುರಿಯಿಂದ ವಕ್ಫ್ ಮಂಡಳಿಗೆ ಸೇರಿಸಿಕೊಂಡಿದೆ.- ಬಸವರಾಜ ಬಾಗೋಜಿ ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ