ಕನ್ನಡಪ್ರಭ ವಾರ್ತೆ ಮೈಸೂರುಇದೇ ಪ್ರಥಮ ಬಾರಿಗೆ ಮೈಸೂರಿನ ಬೃಂದಾವನ ಬಡಾವಣೆಯ ನಾಗರೀಕರ ಹಿತರಕ್ಷಣಾ ವೇದಿಕೆಯಿಂದ ಅತ್ಯಾಕರ್ಷಕವಾಗಿ ಒಂದೇ ಸೂರಿನಡಿಯಲ್ಲಿ ಪ್ರತಿಷ್ಠಾಪಿಸಿದ್ದ, ಇತಿಹಾಸ ಸೃಷ್ಟಿಸಿದ್ದ 1021 ಗಣಪತಿಗಳನ್ನು ಗುರುವಾರ ಸಂಜೆ ಅದ್ದೂರಿ ಮೆರವಣಿಗೆಯೊಂದಿಗೆ ನಾಗನಹಳ್ಳಿ ಸಮೀಪವಿರುವ ವರುಣ ನಾಲೆಯಲ್ಲಿ ವಿಸರ್ಜಿಸಲಾಯಿತು. ನಾದಸ್ವರ, ತಮಟೆ ಮೇಳ, ನಗಾರಿ, ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದರು.ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಗಣಪತಿಯನ್ನು ಮೆರವಣಿಗೆ ನಡೆಸಿದ ನಂತರ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಬಡಾವಣೆಯ ಎಲ್ಲ ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು ಸಾಥ್ ನೀಡಿದರು. ವರುಣ ನಾಲೆಯಲ್ಲಿ 1021 ಗಣಪತಿಗಳ ವಿಸರ್ಜನೆ ಮಾಡುವ ವಿಷಯ ತಿಳಿದು, ಸಮೀಪದ ಗ್ರಾಮಸ್ಥರು ಬಂದು ವಿಸರ್ಜನೆಗೆ ಕೈಜೋಡಿಸಿದರು. ಈ ಒಂದು ಸಹಾಯಕ್ಕೆ ವೇದಿಕೆಯ ಪದಾಧಿಕಾರಿಗಳು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಭಕ್ತರಿಂದ ಅಭಿನಂದನೆಗಳ ಸುರಿಮಳೆಬೃಂದಾವನ ಬಡಾವಣೆಯಲ್ಲಿ ಈ ಬಾರಿ ಬಹಳ ಶ್ರಮಪಟ್ಟು ಪ್ರತಿಷ್ಠಾಪಿಸಿದ್ದ 1021 ಗಣಪತಿಯು ಬಹು ಆಕರ್ಷಣೆವಾಗಿದ್ದು, ಮೈಸೂರಿನ ವಿವಿಧ ಬಡಾವಣೆಗಳಿಂದ ಹಾಗೂ ಪ್ರವಾಸಿಗಳು 11 ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿವರೆಗೆ ಭೇಟಿ ನೀಡಿ, ಒಂದೇ ಬಾರಿಗೆ 1021 ಗಣಪತಿಯನ್ನು ಕಣ್ತುಂಬಿಕೊಂಡು, ಒಂದೇ ಬಾರಿಗೆ ಇಷ್ಟೊಂದು ಗಣಪತಿಯನ್ನು ದರ್ಶನ ಮಾಡಿಸಿದ್ದಕ್ಕಾಗಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಅಭಿನಂದನೆಯ ಸುರಿಮಳೆಗೈದರು. ಪತ್ರಿಕೆ, ಟಿ.ವಿ, ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ 1021 ಗಣಪತಿಯನ್ನು ವಿಶೇಷವಾಗಿ ಪ್ರತಿಷ್ಠಾಪಿಸಿದ್ದನ್ನು ಪತ್ರಿಕೆ, ಟಿ.ವಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕಾರಣ ಭಕ್ತಾದಿಗಳಿಂದ ವೇದಿಕೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತು. ಒಂಬತ್ತು ದಿನಗಳ ಕಾಲ ಆಯೋಜಿಸಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು ಮತ್ತು ಮಹಿಳೆಯರ ಆಟೋಟ ಸ್ಪರ್ಧೆಗಳು ವಿಜೃಂಭಣೆಯಿಂದ ನೆರವೇರಿತು.
ಹಿತರಕ್ಷಣಾ ವೇದಿಕೆಯಿಂದ ಕೃತಜ್ಞತೆಕಳೆದ 9 ದಿನಗಳ ಕಾಲ ಬೃಂದಾವನ ಬಡಾವಣೆಯಲ್ಲಿ ನಡೆದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿದ್ದ 1021 ಗಣೇಶನ ದರ್ಶನ ಪಡೆದು ಎಲ್ಲ ರೀತಿಯಲ್ಲೂ ಸಹಕಾರ ನೀಡಿ, ಈ ಒಂದು ಉತ್ಸವದ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಸಾವಿರಾರು ಭಕ್ತಾದಿಗಳಿಗೆ, ಬಡಾವಣೆಯ ನಿವಾಸಿಗಳಿಗೆ, ಪೊಲೀಸ್‌ಇಲಾಖೆಗೆ ಹಾಗೂ ಇತರರಿಗೆ ಬೃಂದಾವನ ಬಡಾವಣೆಯ ನಾಗರೀಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.