ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾರ್ವಜನಿಕ ಮಸೀದಿ ದರ್ಶನದಿಂದ ಹಿಂದೂ ಮುಸ್ಲಿಂರ ಭಾವೈಕ್ಯತೆ ಇಮ್ಮಡಿಗೊಳಿಸುತ್ತದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು. ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಮದೀನಾ ಮಸ್ಜಿದ್‌ಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಮದೀನಾ ಮಸ್ಜಿದ್ ಆಶ್ರಯದಲ್ಲಿ ಸೀರತ್ ಪ್ರಯುಕ್ತ ನಡೆದ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವಸ್ಥಾನಗಳು, ಚರ್ಚೆಗಳಲ್ಲಿ ದೇವರು ಇದ್ದಾನೆ ಎಂದು ಪ್ರಾರ್ಥನೆ ಮಾಡುವಂತೆ ಮುಸ್ಲಿಂ ಸಮುದಾಯವರಿಗೆ ಮಸೀದಿಗಳಲ್ಲಿ ದೇವರು ಕಾಣುತ್ತದೆ. ಹೀಗಾಗಿ ಅವರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುತ್ತಾರೆ. ಅದೇ, ರೀತಿ ಹಿಂದುಗಳು ದೇವಸ್ಥಾನಗಳಲ್ಲಿ, ಕ್ರೈಸ್ತರು ಚರ್ಚ್‌ಗಳಲ್ಲಿ ಪ್ರಾರ್ಥಿಸುತ್ತಾರೆ. ಹೀಗಾಗಿ ಮಸೀದಿಗಳು ಪುಣ್ಯಕ್ಷೇತ್ರಗಳಾಗಿದ್ದು, ಈ ನಿಟ್ಟಿನಲ್ಲಿ ಮಸೀದಿಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆತಾಗ ಇತರೇ ಧರ್ಮದವರಲ್ಲಿ ಇರುವ ತಪ್ಪು ಗ್ರಹಿಕೆ ಹಾಗೂ ಅಂತರ ದೂರವಾಗುತ್ತದೆ. ಪರಸ್ಪರ ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಕುಂಞ ಮಾತನಾಡಿ, ಮಸೀದಿ ದರ್ಶನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ. ಯಾವುದೇ ಮನುಷ್ಯ ಆ ಧರ್ಮದ ಬಗ್ಗೆ ಅರಿವಿಲ್ಲದೇ ಅದರ ಪೂರ್ವಪರ ಚಿಂತನೆ ಇಲ್ಲದೇ ದ್ವೇಷ ಮಾಡುವ ಮನೋಭಾವನ್ನು ಬೆಳೆಸಿಕೊಳ್ಳುತ್ತಾನೆ. ಹೀಗಾಗಿ ಇದರ ತಿಳುವಳಿಕೆ ಮೂಡಿಸಲು ಈ ಬಗ್ಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು. ಮಸ್ಜಿದ್ ದರ್ಶನ ಶಾಂತಿಯುತ ಸಮಾಜವನ್ನು ನಿರ್ಮಿಸುವ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಧರ್ಮಗಳ ಬಗ್ಗೆ ಅಪಪ್ರಚಾರ ಮಾಡುವ ಕಾರ್ಯಗಳು ನಡೆಯುತ್ತಿವೆ. ಅಪಪ್ರಚಾರಗಳಿಂದ ದೂರವಾಗಲು ಪ್ರತಿಯೊಬ್ಬರಲ್ಲೂ ಶಾಂತಿ ಸಹ ಬಾಳ್ವೆ ನೆಲೆಸಲು ಮಸೀದಿ ದರ್ಶನ ಕಾರ್ಯಕ್ರಮ ಸಹಾಯಕವಾಗಲಿವೆ ಎಂದರು. ಮಸೀದಿಗಳ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲು ಅಲ್ಲಿಗೆ ಭೇಟಿ ನೀಡಿದರೆ ಅಲ್ಲಿ ಯಾವುದೇ ನಿಗೂಢತೆ ಇಲ್ಲ. ಮಸೀದಿ ಎಂಬುದು ದೇವರನ್ನು ಆರಾಧಿಸುವ ಮತ್ತು ಪ್ರಾರ್ಥಿಸಲು ಇರುವ ಸೀಮಿತ ಸ್ಥಳವಾಗಿದೆ. ಮಸೀದಿಗಳಿಗೆ ಹಿಂದುಗಳು ಹೋಗುವ, ಮಂದಿರಗಳಿಗೆ ಮುಸ್ಲಿಮರು ಹೋಗುವ, ಚರ್ಚ್‌ಗಳಿಗೆ ಹಿಂದೂ, ಮುಸ್ಲಿಮರು ಹೋಗುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಎಲ್ಲಾ ಧರ್ಮಗಳಿಂತ ಮಾನವ ಧರ್ಮ ದೊಡ್ಡದು. ಮನುಷ್ಯ ತನ್ನ ಧರ್ಮವನ್ನು ಪ್ರೀತಿಸುವ ಜೊತೆಗೆ ಇತರೆ ಧರ್ಮಗಳನ್ನು ಗೌರವಿಸಲು ಮುಂದಾಗಬೇಕು. ಮಸೀದಿ ದರ್ಶನ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಆಯೋಜನೆ ಮಾಡಿರುವುದು ತಮ್ಮ ಸಂತಸ ತಂದಿದೆ.ಚಾ.ನಗರ ದಾರುಲ್ ಕಝಾ ಖಾಝೀ ಮೌಲಾನಾ ಮುಫ್ತಿ ಜಾಫರ್‌ಹುಸೇನ್ ಖಾಸ್ಕಿ , ಚಾ.ನಗರ ಸಂತಪಾಲರ ದೇವಾಲಯದ ಫಾದರ್ ಅಂಥೋನಪ್ಪ ಸಾನ್ನಿಧ್ಯ ವಹಿಸಿದ್ದರು. ಮದೀನಾ ಮಸೀದಿ ಅಧ್ಯಕ್ಷ ನಯೀಮ್ ಉಲ್ ಹಕ್ ಅಧ್ಯಕ್ಷತೆ ವಹಿಸಿದ್ದರು. ಮದೀನ ಕಾರ್ಯದರ್ಶಿ ವಸೀಮ್ ಪಾಷಾ, ಪುರ್ಖಾನ್, ಖಲೀಕ್ ಅಹಮದ್, ಡಾ. ಬಸವ ರಾಜೇಂದ್ರ, ಡಾ. ಶ್ವೇತಾ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೊಂಗನೂರು ಚಂದ್ರು, ಚಾಮರಾಜೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ರಾಮಕೃಷ್ ಭಾರಧ್ವಾಜ್, ಜಿಲ್ಲಾ ವರ್ಕ್ಪ ಸಲಹೆ ಸಮಿತಿ ಅಧ್ಯಕ್ಷ ಸೈಯದ್ ಇರ್ಷಾದು ಉಲ್ಲಾ, ಮದೀನ ಮಸೀದಿಯ ಉಪಾದ್ಯಕ್ಷ ಸೈಯದ್ ರೈಸ್ ಅಹಮದ್, ಖಜಾಂಚಿ ಸೈಯದ್ ಪುಖಾನ್ ಅಹಮದ್, ನಾಝೀಮ್ ಉಲ್ಲಾ ಷರೀಷ್, ಅಬ್ದುಲ್ ಷರೀಪ್, ಅಬ್ದುಲ್ ಖಲೀಲ್, ಮಹಮದ್ ಕಬೀರ್, ಅಪ್ಬಲ್ ಅಹಮದ್, ಸರದಾರ್ ಬೇಗ್ ಭಾಗವಹಿಸಿದ್ದರು. ಮಧ್ಯಾಹ್ನ್ ಮಸೀದಿ ಸಮಿತಿಯಿಂದ ಬಾಳೆ ಎಲೆಯಲ್ಲಿ ಹೋಳಿಗೆ ಊಟದ ಸಹ ಪಂಕ್ತಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಸಾರ್ವಜನಿಕರಿಗೆ ಮಸೀದಿ ದರ್ಶನ ನಡೆಯಿತು.