ಬ್ಯಾಡಗಿ ಮಾರುಕಟ್ಟೆಗೆ ದಾಖಲೆಯ 4.09 ಲಕ್ಷ ಮೆಣಸಿನಕಾಯಿ ಚೀಲ ಆಚಕ

KannadaprabhaNewsNetwork |  
Published : Mar 05, 2024, 01:32 AM IST
ಮಮ | Kannada Prabha

ಸಾರಾಂಶ

ಇಲ್ಲಿಯ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಸೋಮವಾರ ಮೊದಲ ಬಾರಿಗೆ 4.09 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಎಲ್ಲೆಂದರಲ್ಲಿ ಮೆಣಸಿನಕಾಯಿ ಚೀಲಗಳೇ ಕಾಣುತ್ತಿವೆ.

ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿ 4 ಲಕ್ಷ ಚೀಲ ಆವಕ । ಗುರುವಾರ ಮಾ.7 ರಂದು ಮಾರುಕಟ್ಟೆಗೆ ರಜೆ ಘೋಷಣೆಕನ್ನಡಪ್ರಭ ವಾರ್ತೆ ಬ್ಯಾಡಗಿ

ಇಲ್ಲಿಯ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಸೋಮವಾರ ಮೊದಲ ಬಾರಿಗೆ 4.09 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಎಲ್ಲೆಂದರಲ್ಲಿ ಮೆಣಸಿನಕಾಯಿ ಚೀಲಗಳೇ ಕಾಣುತ್ತಿವೆ.

ಕಳೆದ ವಾರ 3.34 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ ನಿರ್ಮಿಸಿದ್ದ ದಾಖಲೆ ವಾರದಲ್ಲಯೇ ಧೂಳಿಪಟವಾಯಿತು. ಈ ಮೆಣಸಿನಕಾಯಿ ವ್ಯವಹಾರ ನಿಭಾಯಿಸಲು ಹಾಗೂ ಪ್ರಕ್ರಿಯೆ ಮುಗಿಸುವ ಉದ್ದೇಶದಿಂದ ಮಾ.7 ಗುರುವಾರ ಮಾರುಕಟ್ಟೆಗೆ ರಜೆ ಘೋಷಿಸಲಾಯಿತು.

ಸೋಮವಾರ ಬ್ಯಾಡಗಿ ಮಾರುಕಟ್ಟೆ ಅಕ್ಷರಶಃ ಮೆಣಸಿನಕಾಯಿ ಚೀಲಗಳಿಂದ ತುಂಬಿ ಹೋಗಿತ್ತು. ಎಲ್ಲಿ ಕಣ್ಣು ಹಾಯಿಸಿ ದರೂ ಸಾಗರದಂತೆ ಮೆಣಸಿನಕಾಯಿ ಚೀಲಗಳೇ ಕಂಡು ಬಂದಿದ್ದು, ವರ್ತಕರ ನಿರೀಕ್ಷೆಗೂ ಮೀರಿ ದಾಖಲೆಯ ಒಟ್ಟು 4.09.121 ಲಕ್ಷ ಚೀಲಗಳು ಆವಕವಾದವು.

ವಿಶ್ವದಲ್ಲೇ ಅತೀಹೆಚ್ಚು ಆವಕವಾಗುವ ದ್ವಿತೀಯ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಬ್ಯಾಡಗಿ ಮಾರುಕಟ್ಟೆ ವಿಶ್ವದ ನಂ.1 ಸ್ಥಾನ ತಲುಪುವತ್ತ ದಾಪುಗಾಲು ಹಾಕುತ್ತಿದೆ. ಮೆಣಸಿನಕಾಯಿ ಆವಕ 13 ಬಾರಿ 1 ಲಕ್ಷ ದಾಟಿದರೇ, 5 ಬಾರಿ ಎರಡು ಲಕ್ಷ ದಾಟಿದೆ, 2 ಬಾರಿ 3 ಲಕ್ಷ ದಾಟಿದ್ದು, ಇದೀಗ ಪ್ರಥಮ ಬಾರಿಗೆ 4 ಲಕ್ಷ ದಾಟಿದೆ.

ಪ್ರಸಕ್ತ ವರ್ಷದ ಫೆ.15ರಂದು ಮಾರುಕಟ್ಟೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 3 ಲಕ್ಷ ಮೆಣಸಿನಕಾಯಿ ಚೀಲ ಗಡಿ ದಾಟಿ ದಾಖಲೆ ಬರೆದಿತ್ತು. ನಂತರ ಫೆ.26ರಂದು ಸಹ ಮತ್ತೆ 3 ಲಕ್ಷ ಮೆಣಸಿನಕಾಯಿ ಚೀಲ ಆವಕಾಗುವ ಮೂಲಕ ಎರಡನೇ ಬಾರಿ 3 ಲಕ್ಷದ ಗಡಿ ದಾಟಿತ್ತು.

ದರದಲ್ಲಿ ಸ್ಥಿರತೆ:

ಸೋಮವಾರ 4 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿದ್ದರೂ ಸಹ ಸರಾಸರಿ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ದರ ನೀಡುತ್ತಾ ಬಂದಿರುವ ವ್ಯಾಪಾರಸ್ಥರು ಸೋಮವಾರವು ಸಹ ಉತ್ತಮ ದರ ನೀಡಿದ ಪರಿಣಾಮ ಕಡ್ಡಿ, ಡಬ್ಬಿ ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹2189, ಗರಿಷ್ಠ ₹35511, ಸರಾಸರಿ ₹32529, ಡಬ್ಬಿತಳಿ ಕನಿಷ್ಠ ₹2899, ಗರಿಷ್ಠ ₹43009, ಸರಾಸರಿ ₹36509, ಗುಂಟೂರು ಕನಿಷ್ಠ ₹1129 ಗರಿಷ್ಠ ₹17809, ಸರಾಸರಿ ₹12589ಗೆ ಮಾರಾಟವಾಗಿವೆ.

ಮನೆಯ ಮುಂದೇ ವ್ಯಾಪಾರ:

ಮೊದಲ ಬಾರಿಗೆ 4 ಲಕ್ಷಕ್ಕೂ ಅಧಿಕ ಆವಕವಾದ ಕಾರಣ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದಲ್ಲಿ ಮೆಣಸಿನ ಕಂಪು ಮತ್ತು ಘಾಟು ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಂತಾಗಿದ್ದು, ರಸ್ತೆಗಳ ಮೇಲಿಟ್ಟು ಮೆಣಸಿನಕಾಯಿ ಮಾರಾಟ ಮಾಡಲು ದಲಾಲರು ಮುಂದಾದರು. ಅದರಲ್ಲೊಬ್ಬ ದಲಾಲರು ಜಾಗದ ಕೊರತೆಯಿಂದ ಮಾರುಕಟ್ಟೆಗೆ ಹೊಂದಿಕೊಂಡಿರುವ ತನ್ನ ಮನೆಯ ಮುಂದೇ ವ್ಯಾಪಾರ ಮಾಡಿದರು.

ಪಟ್ಟಣದ ಭರ್ತಿ ಮೆಣಸಿನಕಾಯಿಯೊಂದಿಗೆ ಸಾವಿರಾರು ಜನರು ಪಟ್ಟಣಕ್ಕೆ ಆಗಮಿಸಿದ್ದ ಪರಿಣಾಮ ಪಟ್ಟಣ ರೈತರಿಂದ ತುಂಬಿ ಹೋಗಿತ್ತು. ಹೋಟೆಲ್ ಸೇರಿದಂತೆ ವಿವಿಧ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದವು.

ಮೆಣಸಿನಕಾಯಿ ಇಳಿಸಲು ಹಾಗೂ ವಾಹನ ನಿಲ್ಲಿಸಲು ಜಾಗವೇ ಇಲ್ಲದಂತಾಗಿ ಸಾವಿರಾರು ವಾಹನಗಳಲ್ಲಿ ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಅನ್‌ಲೋಡ್ ಆಗದೇ ಉಳಿದವು ಮತ್ತು ಚಾಲಕರು ಪಟ್ಟಣದ ಪುರಸಭೆ, ಗುಮ್ಮನಹಳ್ಳಿ, ಮಲ್ಲೂರ, ಮೋಟೆಬೆನ್ನೂರ, ಛತ್ರ, ಕದರಮಂಡಲಗಿ ರಸ್ತೆ, ಕಲಾವಭವನ ಬಳಿಯಲ್ಲಿ ಮೆಣಸಿನಕಾಯಿ ಲಾರಿಗಳನ್ನು ನಿಲ್ಲಿಸಿದ ದೃಶ್ಯಗಳು ಕಂಡು ಬಂದವು.

7ರಂದು ಮಾರುಕಟ್ಟೆ ರಜೆ:

ಪ್ರತಿ ಸೋಮವಾರ ಮತ್ತು ಗುರುವಾರ ಬ್ಯಾಡಗಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಡೆಯುತ್ತದೆ. ರೈತರು, ವ್ಯಾಪಾರಿಗಳು, ದಲ್ಲಾಳಿಗಳಿಗೂ ಇದು ಗೊತ್ತಿರುವ ಹಿನ್ನೆಲೆಯಲ್ಲಿ ಆ ದಿನಗಳಂದೇ ಬರುತ್ತಾರೆ. ಇದೀಗ 4 ಲಕ್ಷಕ್ಕೂ ಅಧೀಕ ಚೀಲ ಬಂದಿದ್ದರಿಂದ ಇದನ್ನು ನಿಭಾಯಿಸಲು, ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಾ.7 ಗುರುವಾರ ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ