ಹದಗೆಟ್ಟ ರಸ್ತೆಯಲ್ಲಿ ರಿಕ್ಷಾ ಪಲ್ಟಿ; ಸ್ಥಳೀಯರ ಆಕ್ರೋಶ, ಪ್ರತಿಭಟನೆ

KannadaprabhaNewsNetwork |  
Published : Aug 09, 2024, 12:49 AM IST
ಸ್ಥಳೀಯರಿಂದ ಆಕ್ರೋಶ | Kannada Prabha

ಸಾರಾಂಶ

ಗುರುವಾರ ಸಂಜೆ ಶಾಲಾ ಮಕ್ಕಳನ್ನು ಬಿಟ್ಟು ತೆರಳುತ್ತಿದ್ದ ಆಟೋ ಈ ರಸ್ತೆಯಲ್ಲಿ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಇದರಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಉಪ್ಪಿನಂಗಡಿ: ೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಕರ್ವೇಲು ಎಂಬಲ್ಲಿ ಮಾಡತ್ತಾರಿಗೆ ಹೋಗುವ ಮಣ್ಣಿನ ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ಗುರುವಾರ ಆಟೋ ಪಲ್ಟಿಯಾಯಿತು. ಇದರಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಗ್ರಾ.ಪಂ. ವಿರುದ್ದ ಪ್ರತಿಭಟಿಸಿದ ಘಟನೆಯೂ ನಡೆಯಿತು.

ಮಾಡತ್ತಾರು ವಿಗೆ ಹೋಗುವ ಮಣ್ಣಿನ ರಸ್ತೆಗೆ ಕರ್ವೇಲು ಬಳಿ ಚರಂಡಿ ವ್ಯವಸ್ಥೆಯನ್ನು ಗ್ರಾ.ಪಂ. ಕಲ್ಪಿಸದಿರುವುದರಿಂದ ಈ ರಸ್ತೆಯು ಹೊಂಡ- ಗುಂಡಿಗಳಿಂದ ಕೂಡಿತ್ತಲ್ಲದೇ, ಸಂಪೂರ್ಣ ಕೆಸರುಮಯವಾಗಿ ನಡೆದಾದಲೂ ಕಷ್ಟ ಪಡುವ ಸ್ಥಿತಿ ಎದುರಾಗಿತ್ತು. ಗುರುವಾರ ಸಂಜೆ ಶಾಲಾ ಮಕ್ಕಳನ್ನು ಬಿಟ್ಟು ತೆರಳುತ್ತಿದ್ದ ಆಟೋ ಈ ರಸ್ತೆಯಲ್ಲಿ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಇದರಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಸದಸ್ಯರಾದ ರಮೇಶ್ ಸುಭಾಶ್‌ನಗರ, ಪ್ರಶಾಂತ್ ಎನ್. ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಡಿ. ಅವರು ಆಗಮಿಸಿ , ರಸ್ತೆಯ ಅಂಚಿನ ವರೆಗೆ ಎಲ್ಲರೂ ಕಂಪೌಂಡ್ ನಿರ್ಮಿಸಿದರೆ ಚರಂಡಿಯನ್ನು ರಸ್ತೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಸತತ ಮನವಿಗೂ ಇಲ್ಲಿನ ಜನ ಸ್ಪಂದಿಸದೆ ಇರುವುದರಿಂದಲೇ ಈ ರಸ್ತೆ ಈ ಮಟ್ಟದ ದುಸ್ಥಿತಿಗೆ ಒಳಗಾಗಿದೆ. ಚರಂಡಿ ನಿರ್ಮಿಸಲು ಅಗತ್ಯ ಸ್ಥಳವನ್ನು ಬಿಟ್ಟು ಕೊಟ್ಟಲ್ಲಿ ರಸ್ತೆಯುದ್ದಕ್ಕೂ ಚರಂಡಿ ನಿರ್ಮಿಸಲಾಗುವುದೆಂದು ತಿಳಿಸಿದರು. ಬಳಿಕ ಚರಂಡಿ ನಿರ್ಮಿಸಲು ಸ್ಥಳೀಯ ನಿವಾಸಿಗರು ಒಪ್ಪಿಗೆ ನೀಡುವುದರೊಂದಿಗೆ ಪಂಚಾಯತ್ ಆಡಳಿತ ನಾಳೆಯಿಂದಲೇ ಚರಂಡಿ ನಿರ್ಮಿಸಲು ಮುಂದಾಗುವುದಾಗಿ ಭರವಸೆ ನೀಡಿತು. ಪ್ರತಿಭಟನೆಯಲ್ಲಿ ಸ್ಥಳೀಯರಾದ ಶರೀಫ್ ಕವೇಲು, ಅಬ್ದುಲ್ ರಹಿಮಾನ್ , ಆಚು ಪಾಳ್ಯ, ಹ್ಯಾರೀಸ್, ವಾಸು ಪೂಜಾರಿ, ಜಗದೀಶ್, ರಜಾಕ್, ಸತ್ತಾರ್ ಬರಮೇಲು ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ