ಹುಬ್ಬಳ್ಳಿ: ಕಳೆದ ಮೂರು ದಶಕಗಳಿಂದ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸಾಧನಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಸೇವಾ ಸಮಿತಿ ಅಧ್ಯಕ್ಷ ಚಿನ್ನಣ್ಣವರ ಆರ್.ಎಸ್. ಹೇಳಿದರು.
ಇಲ್ಲಿನ ಲ್ಯಾಮಿಂಗ್ಟನ್ ಪ್ರೌಢಶಾಲೆಯ ಸಭಾಭವನದಲ್ಲಿ ಸಾಧನಾ ಮಾನವ ಹಕ್ಕುಗಳ ಸಂಸ್ಥೆ, ಶ್ರೀನಿವಾಸ ಕಲಾಸಂಗಮ ಹುಬ್ಬಳ್ಳಿ ಹಾಗೂ ಪದ್ಮಹಸ್ತ ವೆಲ್ ಬೀಯಿಂಗ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಿಎಡ್, ಡಿಎಡ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ-ಶಿಕ್ಷಕಿಯರಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಸಂವಿಧಾನ ಪೀಠಿಕೆ ಓದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಾಧನಾ ಸಂಸ್ಥೆಯು ವಿದ್ಯಾರ್ಥಿಗಳು, ಯುವಕ, ಯುವತಿಯರು, ತಳಸ್ಥರದ ಸಮುದಾಯಕ್ಕೆ ಅರಿವು ಮೂಡಿಸುತ್ತಿದೆ. ಇಂದು ಭಾವಿ ಮತ್ತು ಹಾಲಿ ಶಿಕ್ಷಕ-ಶಿಕ್ಷಕಿಯರಿಗೆ ಮಾನವ ಹಕ್ಕುಗಳು ಮತ್ತು ಶಿಕ್ಷಕರ ಪಾತ್ರದ ಕುರಿತು ಕಾರ್ಯಾಗಾರ ಏರ್ಪಡಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹವಾಗಿದೆ ಎಂದರು.
ಮಾನವ ಹಕ್ಕುಗಳು ಇತಿಹಾಸ, ಕರ್ತವ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹೈಕೊರ್ಟ್‌ನ ನ್ಯಾಯವಾದಿ ಪ್ರಕಾಶ ಉಡಕೇರಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ನೆಲೆಯಲ್ಲಿ ಮಾನವ ಹಕ್ಕುಗಳು ವ್ಯತ್ಯಾಸ ಮತ್ತು ಇತಿಹಾಸದ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಲಿಂಗ ಅಸಮಾನತೆ, ಧರ್ಮ, ಜಾತಿ, ವರ್ಗ ಮತ್ತು ಪುರುಷರನ್ನು ಒಳಗೊಂಡು ಮಹಿಳೆಯರ ಮೇಲೆ ನಿರಂತರ ದೈಹಿಕ ಮತ್ತು ಮಾನಸಿಕ ಹಲ್ಲೆಗಳು ಶತಮಾನದಿಂದಲೂ ನಡೆಯುತ್ತಲೆ ಬಂದಿದೆ. ಪುರಾಣದ ಮನು ಭಾರತ ಮತ್ತು ಅಂಬೇಡ್ಕರ್ ಅವರ ಸಂವಿಧಾನ ಭಾರತದ ಆಯ್ಕೆ ಯಾವುದು ಎಂದು ಕೇಳಿಕೊಳ್ಳುವ ಸಮಯ ಬಂದಿದೆ ಎಂದರು.
ಡಾ. ಇಸಬೆಲಾ ಝೇವಿಯರ ಅವರು ಲಿಂಗಸಮಾನತೆ ಕುರಿತು ಹಾಗೂ ವೈಶಾಲಿ ಬ್ಯಾಳಿ ಅವರು ತೃತೀಯ ಲಿಂಗದ ಸವಾಲುಗಳ ಬಗ್ಗೆ ಉಪನ್ಯಾಸ ನೀಡಿದರು. ಗೀತಾ ಹಜಾರೆ ಅವರು ಪೋಸ್ಕೋ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು.ಉಪ ಪೊಲೀಸ್ ಆಯುಕ್ತ ರಾಜೀವ ಎಂ, ಅಪರಾಧ ತಡೆ ಕುರಿತು, ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಸಾಧನಾ ಸಂಸ್ಥೆಯಂಥಹ ಸಂಸ್ಥೆಗಳ ಅವಶ್ಯಕತೆಯಿದೆ ಎಂದರು.
200ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಜಶೇಖರ ಮಾಣಿಕ್ಯಂ ಸ್ವಾಗತಿಸಿದರು. ಅವಿನಾಶ ಬೆಳವಡೆ ವಂದಿಸಿದರು.