ದೇಶದಲ್ಲಿ ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲೋಕಸಭೆಯಲ್ಲಿ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ದಾವಣಗೆರೆ : ದೇಶದಲ್ಲಿ ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲೋಕಸಭೆಯಲ್ಲಿ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ರೈತ ಸಂಘ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಸಂಸದರ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಮುಖಂಡರ ನೇತೃತ್ವ ನಿಯೋಗ ಸಂಸದರ ಆಪ್ತ ಸಹಾಯಕರಿಗೆ ಮನವಿ ಅರ್ಪಿಸಿತು.
ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರವು ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು. ಕೃಷಿ ಕ್ಷೇತ್ರ ಕಾರ್ಪೋರೇಟೀಕರಣ ಸರಿಯಲ್ಲ. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್‌ಸಿಗಳಿಗೆ ಪ್ರವೇಶ ನೀಡಬಾರದು. ಮುಕ್ತ ವ್ಯಾಪಾರ ಒಡಂಬಡಿಕೆ (ಫ್ರೀ ಟ್ರೇಡ್ ಅಗ್ರಿಮೆಂಟ್-ಎಫ್‌ಟಿಎ) ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿದಂತೆ ಡಬ್ಲ್ಯುಟಿಒ ಒಪ್ಪಂದದಿಂದ ಹೊರಬರಬೇಕು ಎಂದು ಒತ್ತಾಯಿಸಿದರು.
ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಬಲಿಷ್ಠ ರಾಜ್ಯಗಳು, ಬಲಿಷ್ಠ ಭಾರತ ಒಕ್ಕೂಟ ಎಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಗಳನ್ನು ಎತ್ತಿಹಿಡಿಯಬೇಕು. ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಬೇಕು. ನ್ಯಾಷನಲ್ ಮಾನೀಟೈಸೇಷನ್ ಪೈಪ್ ಲೈನ್ (ಎಫ್‌ಟಿಎ) ಕೈ ಬಿಡಬೇಕು. ಶ್ರಮವನ್ನು ಕಾಂಟ್ರ್ಯಾಕ್ಟ್ ಪದ್ಧತಿಗೆ ಒಳಪಡಿಸುವುದನ್ನು ಕೊನೆಗೊಳಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರ ಭೂಮಿ ಹಾಗೂ ಜಾನುವಾರು ಸಂಪನ್ಮೂಲ ರಕ್ಷಿಸಿ, ಕೃಷಿ ಬಿಕ್ಕಟ್ಟಿನಿಂದ ದಿವಾಳಿ ಆಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಕುರುವ ಗಣೇಶ, ಹೊನ್ನೂರು ಮುನಿಯಪ್ಪ, ಪಿ.ಪಿ.ಮರುಳಸಿದ್ದಯ್ಯ, ಎಐಟಿಯುಸಿ ಐರಣಿ ಚಂದ್ರು, ತೆಂಗು ಬೆಳೆಗಾರರ ಹೋರಾಟ ಸಮಿತಿ ಮಂಜುನಾಥ ರೆಡ್ಡಿ, ಕರ್ನಾಟಕ ಜನಶಕ್ತಿ ಸತೀಶ, ಬುಳ್ಳಾಪುರ ಹನುಮಂತಪ್ಪ, ಹೊನ್ನೂರು ರಾಜು, ಕೆ.ಜಿ.ಶೇಖರಪ್ಪ, ಗೋಶಾಲೆ ಬಸವರಾಜ, ಕಣಿವೆಬಿಳಚಿ ಅಣ್ಣಪ್ಪ, ಮಾಯಕೊಂಡ ಬೀರಪ್ಪ, ಸಂತೋಷ ನಾಯ್ಕ, ಮಾಯಕೊಂಡ ಬೀರಪ್ಪ, ಎಚ್.ಬಿ.ನಾಗರಾಜ, ನಾಗರಾಜ, ದುರುಗಪ್ಪ, ಬಟ್ಲಕಟ್ಟೆ ಪಾಲಾಕ್ಷಿ, ದೊಡ್ಡೇರಿ ಬಸವರಾಜಪ್ಪ, ಕ್ಯಾತನಹಳ್ಳಿ ಎಚ್.ಬಿ. ನಾಗರಾಜ, ಗಣೇಶಪ್ಪ ಶುಂಠಿ, ಮಲಹಾಳ್ ತಿಪ್ಪಣ್ಣ, ನುಗ್ಗೇಹಳ್ಳಿ ನಿಂಗಪ್ಪ, ಕೋಗಲೂರು ಶಿವಕುಮಾರ, ದಶರಥ ರಾಜ, ಬಿ.ಜಿ. ಷಣ್ಮುಖಪ್ಪ, ವಿಜಯ ಇತರರು ಇದ್ದರು.
ಬೇಡಿಕೆಗಳೇನೇನು? - ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್‌ಸಿಗಳಿಗೆ ಪ್ರವೇಶ ನೀಡಬಾರದು
- ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಗಳನ್ನು ಎತ್ತಿಹಿಡಿಯಬೇಕು
- ರೈತರು, ಕೃಷಿ ಕಾರ್ಮಿಕರ ಭೂಮಿ, ಜಾನುವಾರು ಸಂಪನ್ಮೂಲಗಳನ್ನು ರಕ್ಷಿಸಬೇಕು
- ನೈಸರ್ಗಿಕ ಸಂಪನ್ಮೂಲಗಳ ಕಾರ್ಪೋರೇಟ್ ಹತೋಟಿ ಮತ್ತು ಸರಕೀಕರಣ ಕೊನೆಗೊಳಿಸಬೇಕು
- ಕೃಷಿಯ ರಕ್ಷಣೆ, ಮಳೆ ನೀರಿನ ವೈಜ್ಞಾನಿಕ ಸಂರಕ್ಷಣೆ-ಬಳಕೆ ಅಭಿವೃದ್ಧಿ, ಜಲಾನಯನ ಪ್ರದೇಶಗಳ ಆಯೋಜನೆ ಹಾಗೂ ಜಲಮೂಲಗಳ ರಕ್ಷಣೆಗೆ ಮುಂದಾಗಬೇಕು - ಅಂತರ್ಜಲ ಮರುಪೂರಣ ಮತ್ತು ಜಾಗತಿಕ ತಾಪಮಾನ ಏರಿಕೆಗೆ ನಿರೋಧಕ ಸಾಮರ್ಥ್ಯವನ್ನು ಬೆಳೆಸಲು ಸ್ಟ್ರಕ್ಚರ್ಡ್ ಇರಿಗೇಷನ್, ಅರಣ್ಯೀಕರಣ ಉತ್ತೇಜಿಸಬೇಕು
- ಎಂಜಿಎನ್ಆರ್‌ಇಜಿಎ ಕೂಲಿಯನ್ನು ದಿನಕ್ಕೆ ₹600 ಗೆ ಹೆಚ್ಚಿಸಬೇಕು, ದೇಶಾದ್ಯಂತ ಯೋಜನೆಯನ್ನು ಜಲಾನಯನ ಪ್ರದೇಶಗಳ ಆಯೋಜನೆ ಮತ್ತು ಕೃಷಿ ಅಭಿವೃದ್ಧಿಯೊಂದಿಗೆ ಜೋಡಿಸಬೇಕು
- ನಾಲ್ಕೂ ಕಾರ್ಮಿಕ ಕೋಡ್‌ಗಳನ್ನು ರದ್ದುಪಡಿಸಬೇಕು, ₹26 ಸಾವಿರಗಳನ್ನು ರಾಷ್ಟ್ರೀಯ ಕನಿಷ್ಠ ಕೂಲಿಯಾಗಿ ಜಾರಿಗೆ ತರಬೇಕು