ಸಂವಾದದಲ್ಲಿ ಗ್ರಾ.ಪಂ ಸಮಸ್ಯೆಗಳ ಸರಮಾಲೆ ಅನಾವರಣ

KannadaprabhaNewsNetwork |  
Published : Sep 05, 2025, 01:01 AM IST
ಪೋಟೋ:-ಸಂವಾದ ಉದ್ಘಾಟನೆ. 2.ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾ.ಪಂ.ಗಳ ಅಧ್ಯಕ್ಷರು ಉಪಾಧ್ಯಕ್ಷರು | Kannada Prabha

ಸಾರಾಂಶ

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ಸೇರಿದ ವಿವಿಧ ಗ್ರಾ.ಪಂ.ಗಳಿಗೆ ಸಂಬಂಧಿಸಿದ ಕುಂದುಕೊರತೆ, ಜಟಿಲವಾದ ಸಮಸ್ಯೆಗಳ ಕುರಿತು ಮಾಧ್ಯಮ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಶನಿವಾರಸಂತೆ ಪ್ರೆಸ್ ಕ್ಲಬ್ ಭಾಗಿತ್ವದಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗೆ ಸೇರಿದ ವಿವಿಧ ಗ್ರಾ.ಪಂ.ಗಳಿಗೆ ಸಂಬಂಧಿಸಿದ ಕುಂದು ಕೊರತೆ, ಜಟಿಲವಾದ ಸಮಸ್ಯೆಗಳ ಕುರಿತು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಸೋಮವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಕೊಡ್ಲಿಪೇಟೆ ಬೆಸೂರು ಮತ್ತು ಆಲೂರುಸಿದ್ದಾಪುರ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಪಾಲ್ಗೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರು ತಮ್ಮ ಗ್ರಾ.ಪಂ.ಯ ಅಭಿವೃದ್ಧಿಯ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡರೆ ಪತ್ರಕರ್ತರು ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಕಂಡುಬಂದ ಕುಂದುಕೊರತೆ, ಸಮಸ್ಯೆಗಳ ಸರಮಾಲೆಯನ್ನು ಮಾಧ್ಯಮ ಸಂವಾದದಲ್ಲಿ ತೆರೆದಿಟ್ಟರು.

ಕೊಡಗು-ಹಾಸನ ಗಡಿಭಾಗದಲ್ಲಿರುವ ಬೆಸೂರು ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಹಕ್ಕುಪತ್ರ ಸಮಸ್ಯೆ ಬಗ್ಗೆ ಮಾತನಾಡಿ, ದೊಡ್ಡ ಭಂಡಾರ ಗ್ರಾಮದಲ್ಲಿ ಸುಮಾರು 40 ಕುಟುಂಬ 60 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಅವರಿಗೆ ಹಕ್ಕುಪತ್ರ ವಿತರಿಸಲು ಆಕ್ಷೇಪ ವ್ಯಕ್ತ ಪಡಿಸುತ್ತಿರುವ ಬಗ್ಗೆ, ಗ್ರಾ.ಪಂ.ವ್ಯಾಪ್ತಿಯಲ್ಲಿ 1973 ರಲ್ಲಿ ಹೇಮಾವತಿ ಮುಳುಗಡೆಯಾದ ಸ.ನಂ47\33 ರಲ್ಲಿ ನೂರು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸುವಂತೆ ಒತ್ತಾಯಿಸಿದರು. ಬೆಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ಕಾಡುಪ್ರಾಣಿಗಳ ಸಮಸ್ಯೆ, ಗ್ರಾಮೀಣ ರಸ್ತೆಗಳ ದುಸ್ಥಿತಿ, ಗ್ರಾ.ಪಂ.ಯಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ಸಮಜಾಯಿಷಿಕೆ ನೀಡಿದರು.

ಹೆಚ್ಚಿನ ಅನುದಾನ ನೀಡಲು ಒತ್ತಾಯ:

ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮತ್ತು ಹಾಲಿ ಹಿರಿಯ ಸದಸ್ಯ ಚಂದ್ರಶೇಖರ್ ಗ್ರಾ.ಪಂ.ಯ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಿದರು. ಸಂತೆ ಮಾರುಕಟ್ಟೆ ಅಭಿವೃದ್ದಿ, ಹಂಪಾಪುರ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಶಾಸಕರು ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.

ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್ ಮಾತನಾಡಿ, ಗ್ರಾ.ಪಂ.ಅಭಿವೃದ್ದಿ ಪಡಿಸಲು ಶ್ರಮಿಸಲಾಗುತ್ತಿದೆ. ಆದರೆ ಖಾಯಂ ಪಿಡಿಒ ಸೇರಿದಂತೆ ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದರು. ಹಂಡ್ಲಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಗುಡುಗಳಲ್ಲಿ ಜಂಕ್ಷನ್ ಬಳಿ ಕೆಲವೊಮ್ಮೆ ಕಸವನ್ನು ಹಾಕುತ್ತಿರುವುದು, ಗುಡುಗಳಲೆ ಗ್ರಾಮ ಪಟ್ಟಣದಂತೆ ಬೆಳೆಯುತ್ತಿದೆ. ಆದರೆ ಅಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇಲ್ಲದಿರುವುದು, ಬೀದಿ ನಾಯಿಗಳ ಸಮಸ್ಯೆ, ಜಾತ್ರಾ ಮೈದಾನದಲ್ಲಿ ವಸ್ತು ಪ್ರದರ್ಶನ ಕಟ್ಟಡ ಶಿಥಿಲಗೊಂಡಿದ್ದರೂ ದುರಸ್ಥಿ ಪಡಿಸದಿರುವುದು, ಜೆಜೆಎಂ ಯೋಜನೆ ವತಿಯಿಂದ ನಡೆದ ಕಾಮಗಾರಿ ಸಂದರ್ಭ ರಸ್ತೆ ಹಾಳಾಗಿದ್ದರೂ ಈ ಕುರಿತು ಗ್ರಾ.ಪಂ.ಯವರು ಕ್ರಮಕೈಗೊಳ್ಳದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ:

ಶನಿವಾರಸಂತೆ ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಆಹಮ್ಮದ್ ಗ್ರಾ.ಪಂ.ಅಭಿವೃದ್ಧಿ ಬಗ್ಗೆ ಮಾತನಾಡಿದರು. ಆದರೆ ಹೈಟೇಕ್ ಸಂತೆಮಾರುಕಟ್ಟೆ ಅಭಿವೃದ್ಧಿ ಕಾರ್ಯ ಆಗದಿರುವ ಬಗ್ಗೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳಿಂದ ನಿರ್ಲಕ್ಷ್ಯತನದ ಬಗ್ಗೆ ಒಪ್ಪಿಕೊಂಡರು. ಪಟ್ಟಣದ ಬೈಪಾಸ್ ರಸ್ತೆ ದುಸ್ಥಿತಿ, ಟ್ರಾಫಿಕ್ ಸಮಸ್ಯೆ ಬಗೆಹರಿಸದಿರುವುದು, ಕೆಲವು ಕಡೆಗಳಲ್ಲಿ ಶೌಚಾಲಯದ ಅಗತ್ಯ ಇರುವುದು, ಗ್ರಂಥಾಲಯಕ್ಕೆ ಮೇಲ್ವಿಚಾರಕನ್ನು ನೇಮಿಸದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಆಲೂರುಸಿದ್ದಾಪುರ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಮೋಹನ್ ನಮ್ಮ ಗ್ರಾ.ಪಂ.ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಗ್ರಾ.ಪಂ.ಯಿಂದ ಉದ್ಯಾನವನ ನಿರ್ಮಿಸಲಾಗಿದೆ. ಆದರೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಗ್ರಾಮೀಣ ರಸ್ತೆಗಳು ಹಾಳಾಗುತ್ತಿರುವುದು, ಆಲೂರುಸಿದ್ದಾಪುರದಲ್ಲಿ ಚರಂಡಿ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಮಾಲಿನ್ಯ ಉಂಟಾಗುತ್ತಿರುವುದು, ಸಾರಿಗೆ ಬಸ್ಸು ನಿಲ್ದಾಣ ಪ್ರಸ್ತಾವನೆ ನೆನೆಗುದಿಗೆ ಬಿದ್ದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದರು.

ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌