ಪ್ರಾಣಿಪ್ರಿಯರ ಆಕರ್ಷಿಸಿದ ಶ್ವಾನಗಳ ಪ್ರದರ್ಶನ

KannadaprabhaNewsNetwork | Updated : Oct 28 2024, 01:27 AM IST

ಸಾರಾಂಶ

ವಾರಾಂತ್ಯದ ದಿನವಾದ ಭಾನುವಾರ ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಬಳಿಯ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ನಡೆದ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಪ್ರಾಣಿಪ್ರಿಯರ ಗಮನ ಸೆಳೆಯಿತು.

ಹುಬ್ಬಳ್ಳಿ: ವಾರಾಂತ್ಯದ ದಿನವಾದ ಭಾನುವಾರ ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಬಳಿಯ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ನಡೆದ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಪ್ರಾಣಿಪ್ರಿಯರ ಗಮನ ಸೆಳೆಯಿತು.

ಕೆನ್ನಲ್‌ ಕ್ಲಬ್‌ ಆಫ್‌ ಇಂಡಿಯಾದ ಹುಬ್ಬಳ್ಳಿಯ ಕೆನ್ನಲ್‌ ಅಸೋಸಿಯೇಶನ್‌ ಪ್ರಥಮ ಬಾರಿಗೆ ಎಲ್ಲ ತಳಿಗಳ ಮುಕ್ತ ಶ್ವಾನಗಳ ಪ್ರದರ್ಶನ ಏರ್ಪಡಿಸಿತ್ತು. ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮಹಾರಾಷ್ಟ್ರದಿಂದ ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ತಂದಿದ್ದು, ವೀಕ್ಷಕರು ಗಂಟೆಗಳ ಕಾಲ ಶ್ವಾನಗಳ ಜತೆ ಕಾಲಕಳೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಪ್ರದರ್ಶನದಲ್ಲಿ ಪೋಮೆರಿಯನ್‌, ದ್ರಾಸ್‌ ಹೊಂಡ, ಡಾಬರ್‌ ಮ್ಯಾನ್‌, ರಾಟ್‌ವಿಲ್ಲರ್‌, ಟಿಪಿ ಬುಲ್‌, ಸೆಂಟಬರ್ನಾಡ್‌, ಗ್ರೇಡ್‌ದೇನ್‌, ಬಾಕ್ಸರ್‌, ಹಸ್ಸಕೀ, ಮುಧೋಳ ಶ್ವಾನ, ಜರ್ಮನ್‌ ಶೆಫರ್ಡ್‌, ಲ್ಯಾಬ್ರೇಡರ್‌ ಸೇರಿದಂತೆ 30ಕ್ಕೂ ಹೆಚ್ಚು ಜಾತಿಯ ಶ್ವಾನಗಳು ಪಾಲ್ಗೊಂಡವು.

ಶಾಸಕ ಟೆಂಗಿನಕಾಯಿ ಚಾಲನೆ

ಶಾಸಕ ಮಹೇಶ ಟೆಂಗಿನಕಾಯಿ ಅವರು ಶ್ವಾನಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಶ್ವಾನಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕು. ಇದರಿಂದ ಸಾಕುವವರಿಗೆ ಹಾಗೂ ಪ್ರಾಣಿಪ್ರಿಯರಿಗೆ ಖುಷಿ ಕೊಡುತ್ತದೆ. 30ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಕ್ಕೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದರಿಂದ ದೂರದ ಊರುಗಳಿಂದ ಬೆಳಗ್ಗೆಯೇ ಶ್ವಾನಗಳೊಂದಿಗೆ ಮಾಲೀಕರು ಆಗಮಿಸಿದ್ದರು. ಆದರೆ ಕಾರ್ಯಕ್ರಮ ಆರಂಭ ಎರಡೂವರೆಗೂ ಹೆಚ್ಚು ಗಂಟೆ ವಿಳಂಬವಾಯಿತು. ''''ಶ್ವಾನಗಳ ಕಷ್ಟ ಇವರಿಗೇನು ಗೊತ್ತಾಗುತ್ತೆ?'''' ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಬೆಂಗಳೂರಿನ ಕೆನ್ನಲ್‌ ಕ್ಲಬ್‌ ಆಫ್‌ ಇಂಡಿಯಾದ ಟಿ. ಪ್ರೀತಂ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅ‍ವರು ಪಿಎಸ್‌ಐ ಎಸ್‌.ಬಿ. ವಿರೂಪಾಕ್ಷ ಅವರು ಬರೆದ ನೀವು ನಾಯಿ ಸಾಕುತ್ತೀರಾ? ಶ್ವಾನ ಪಾಲನೆ, ಪೋಷಣೆ ಮತ್ತು ತರಬೇತಿ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆ ಮಾಡಿದರು.

ಹುಬ್ಬಳ್ಳಿ ಕೆನ್ನಲ್‌ ಅಸೋಸಿಯೇಶನ್‌ದ ಉಪಾಧ್ಯಕ್ಷ ಡಾ. ಶ್ರೀನಿವಾಸ ದೇಶಪಾಂಡೆ ಸ್ವಾಗತಿಸಿದರು. ಅಧ್ಯಕ್ಷ ಮೈಕಲ್‌ ರಾಬರ್ಟ್‌, ಕಾರ್ಯದರ್ಶಿ ಭಾನುಚಂದ್ರ ಹೊಸಮನಿ, ಜಯರಾಮಯ್ಯ ಇತರರಿದ್ದರು.

ವಿಕ್ರಮ ರಾಜಾರವರ ಲ್ಯಾಬ್ರಡರ್‌ಗೆ ಪ್ರಥಮ ಬಹುಮಾನಶ್ವಾನ ಪ್ರದರ್ಶನದಲ್ಲಿ ವಿಕ್ರಮ ರಾಜಾ ಅವರ ಲ್ಯಾಬ್ರಡರ್‌ ತಳಿ ನಾಯಿ ಪ್ರಥಮ ಸ್ಥಾನ ಗಳಿಸಿದೆ. ವಂಶಿ ಅ‍ವರ ಡಾಬರಮ್ಯಾನ್ ದ್ವಿತೀಯ, ಕೃಷ್ಣನುಣ್ಣಿ ಸಹದೇವ ಅನಂತಕಷ್ಣಮೂರ್ತಿ ಅವರ ಜರ್ಮನ್‌ ಶೆಫರ್ಡ್‌ (ಎಸ್‌ಎಚ್‌) 3ನೇ ಸ್ಥಾನ, ಅಬ್ದುಲ್‌ರಜಾಕ್ ಅವರ ಬೀಗಲೇ 4ನೇ ಸ್ಥಾನ, ಹರ್ಷದಾ ಸೇವ್ ಅವರ ರೋಟ್‌ವೀಲರ್‌ 5ನೇ ಸ್ಥಾನ, ಸಚಿನ್ ತಮಡಲಾಗೆ ಅವರ ಲ್ಯಾಬ್ರಡರ್‌ 6ನೇ ಸ್ಥಾನ, ವೇದಮಿತ್ರ ಪಾಲ್ ಅವರ ಜರ್ಮನ್‌ ಶೆಫರ್ಡ್‌ (ಎಲ್‌ಎಚ್‌) 7ನೇ ಸ್ಥಾನ, ಗುಂಡ್ಯಪ್ಪ ನಾವಲಗಿ ಅವರ ಮುಧೋಳ ಹೌಂಡ್ 8ನೇ ಸ್ಥಾನ ಪಡೆದಿವೆ. ವಂಶಿ ಅವರ ಡಾಬರ್‌ಮ್ಯಾನ್ ಅತ್ಯುತ್ತಮ ನಾಯಿಮರಿ, ಕೆನಿತ್ ಹರ್ಷ ಅವರ ಕಾರವಾನ್ ಹೌಂಡ್‌ಗೆ ಎರಡನೇ ಅತ್ಯುತ್ತಮ ನಾಯಿಮರಿ ಗುಂಡ್ಯಪ್ಪ ನಾವಲಗಿ ಅವರ ಮುಧೋಳ ಹೌಂಡ್‌ಗೆ ಅತ್ಯುತ್ತಮ ಭಾರತೀಯ ತಳಿ ಎರಡನೇ ಅತ್ಯುತ್ತಮ ಭಾರತೀಯ ತಳಿ ಕೆನಿತ್ ಹರ್ಷ ಅವರ ಕಾರವಾನ್ ಹೌಂಡ್‌ಗೆ ದೊರೆಯಿತು.ಮಕ್ಕಳಂತೆ ಜೋಪಾನ

ಮುಧೋಳ ನಾಯಿ ಮಳೆ, ಚಳಿ, ಬಿಸಿಲು ಹೀಗೆ ಎಲ್ಲ ಕಾಲದಲ್ಲೂ ಹೊಂದಿಕೊಳ್ಳುವ ತಳಿಯಾಗಿದ್ದು, ಈಗಲೂ ಇದಕ್ಕೆ ಬೇಡಿಕೆ ಹೆಚ್ಚಿದೆ. ಇದರ ನಾಯಿಮರಿ ಈಗಲೂ ₹15 ಸಾವಿರ ವರೆಗೂ ಮಾರಾಟವಾಗುತ್ತಿದೆ. ಒಂದು ಬಾರಿಗೆ 5-6 ಮರಿ ಹಾಕುತ್ತದೆ. ರೊಟ್ಟಿ, ಸಾರು, ಗೋವಿನಜೋಳದ ನುಚ್ಚು ಸೇರಿದಂತೆ ಹಾಲು, ಮೊಟ್ಟೆ, ವಾರದಲ್ಲಿ ಎರಡು ಸಲ ಮಾಂಸಾಹಾರ ಕೊಟ್ಟು ಮಕ್ಕಳಂತೆ ಜೋಪಾನ ಮಾಡಿದ್ದೇವೆ.

- ಲಕ್ಷ್ಮಣ ಕಲಾದಗಿ, ಬಾಗಲಕೋಟೆ ಜಿಲ್ಲೆ

Share this article