ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣದ ಕ್ರಾಂತಿ ಯಾವುದೇ ರಕ್ತಕ್ರಾಂತಿ ಆಗಿರದೇ ಅದೊಂದು ಇತಿಹಾಸದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಆಗಿತ್ತು. ಸಮಾಜದಲ್ಲಿಯ ಅನಿಷ್ಠಗಳನ್ನು ಹೋಗಲಾಡಿಸಿ ಹೊಸ ಸಮಾಜವನ್ನು ಹುಟ್ಟುಹಾಕಿದ ಕ್ರಾಂತಿಯಾಗಿತ್ತು ಎಂದು ಆನಂದಪುರ ಹಾಗೂ ಶಿವಮೊಗ್ಗ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ನುಡಿದರು.ಶಿರಾಳಕೊಪ್ಪದಲ್ಲಿ ಬುಧವಾರ ನಡೆದ ಶಿಕಾರಿಪುರ ತಾಲೂಕಿನ ೬ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಶಿರಾಳಕೊಪ್ಪ ಶಿವ-ಶರಣರ ತವರುಭೂಮಿ. ಪ್ರಪಂಚದಲ್ಲಿ ಬೇರೆಲ್ಲೂ ನಡೆಯದ ಮಹಾ ಶರಣಕ್ರಾಂತಿ, ಕಲ್ಯಾಣ ಕ್ರಾಂತಿ ಆಗಿದೆ ಎಂದರು.
ಬಸವಣ್ಣನವರು ತಾವು ಏನು ಹೇಳುತ್ತಿದ್ದರೋ, ಅದನ್ನೇ ಮಾಡುತ್ತಿದ್ದ ಮಹಾನ್ ವ್ಯಕ್ತಿ ಆಗಿದ್ದರು. ೧೨ನೇ ಶತಮಾನದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಎಲ್ಲ ಶರಣರು ಕಲ್ಯಾಣದ ಕಡೆಗೆ ಹೊರಟುಬಂದು ಹೊಸ ಅಲೆ ಸೃಷ್ಠಿ ಮಾಡಿದರು. ಆದರೆ ನಮಗೆ ಅದರ ಕಲ್ಪನೆಯೇ ಇಲ್ಲ. ನಮಗೆ ಸಾಹಿತ್ಯವಿದೆ, ಸಂಸ್ಕೃತಿ ಇದೆ, ಪರಂಪರೆ ಇದೆ. ಉದಾಹರಣೆಗಳು ಸಹ ಇದ್ದರೂ ನಾವು ಬಳ್ಳಿಗೂಟದಂತೆ ಇರುವುದು ಬೇಸರದ ಸಂಗತಿ ಎಂದರು.ಸಮ್ಮೇಳನಾಧ್ಯಕ್ಷೆ ಮಧುರಾ ಅಶೋಕಕುಮಾರ ಮಾತನಾಡಿ, ಇಂದು ಜೀವನದ ವಿಶೇಷ ದಿನ. ಮುಂದಿನ ಸಮ್ಮೇಳನವರೆಗೆ ಅಧ್ಯಕ್ಷೆಯಾಗಿ ಎಲ್ಲ ಸಹಕಾರ ನೀಡುತ್ತೇನೆ. ನಾನು ಈ ಊರಿನ ಸೊಸೆ, ನಮ್ಮ ಮಾವ ಸ್ವಾತಂತ್ರ್ಯ ಹೋರಾಟಗಾರ ಮಂಗಲಿಗಿ ಶಿವಪ್ಪನವರ ಸೊಸೆ ಎಂಬ ಹೆಮ್ಮೆ ಇತ್ತು. ಈಗ ಆ ಹೆಮ್ಮೆ ಇಮ್ಮಡಿಗೊಂಡಿದೆ. ಇಂದು ನನ್ನನ್ನು ಮೆರವಣಿಗೆ ಮಾಡಿ, ವೇದಿಕೆಗೆ ಕರೆತಂದಿರುವ ಈ ಅವಿಸ್ಮರಣೀಯ ಕ್ಷಣವನ್ನು ಎಂದೂ ಮರೆಯದಂತೆ ಮಾಡಿದ್ದೀರಿ ಎಂದರು.
ನನ್ನ ಸೇವಾ ಚಟುವಟಿಕೆ ಜೊತೆಗೆ ೧೧೭ ಬಾರಿ ರಕ್ತದಾನ ಮಾಡಿ ಗಿನ್ನೀಸ್ ವಿಶ್ವದಾಖಲೆ ಪುಟದಲ್ಲಿ ಸೇರಿದೆ. ನಿಮ್ಮೂರ ಸೊಸೆಯನ್ನು ನಮ್ಮೂರ ಸೊಸೆ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದೀರಿ. ನಿಮ್ಮೂರ ಸೊಸೆಗೆ ಊರಿನ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿವಂತೆ ಮಾಡಿದ್ದೀರಿ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ೬ನೇ ಸರ್ವಾಧ್ಯಕ್ಷೆಯಾಗಿ ಆಯ್ಕೆ ಮಾಡಿ, ಆಹ್ವಾನಿಸಿದ ತಮ್ಮೆಲ್ಲರಿಗೂ ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ೫ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮುರಘರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ವೇದಿಕೆ ಅಧ್ಯಕ್ಷತೆ ವಹಿಸಿದ್ದ ಎಂ.ಕೆ.ಶಶಿಧರಸ್ವಾಮಿ, ಶಿರಾಳಕೊಪ್ಪ ಘಟಕದ ಅಧ್ಯಕ್ಷ ಸುರಹೊನ್ನೆ ಚಂದ್ರಶೇಖರ, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪ ಹಾಲೇಶ್, ಅಖಿಲ ಭಾರತ ವೀರಶೈವ ಸಮಾಜದ ಕಾಯರ್ದರ್ಶಿ ನಿವೇದಿತಾ ರಾಜು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾರುದ್ರ, ತಾಲೂಕು ಮಾಜಿ ಅಧ್ಯಕ್ಷ ಸುಭಾಷ್‌ಚಂದ್ರ ಸ್ಥಾನಿಕ್, ಶಿವಾನಂದಸ್ವಾಮಿ, ಶಿರಾಳಕೊಪ್ಪ ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಕಸಾಪ ಅಧ್ಯಕ್ಷ ಮಂಜುನಾಥ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
- - - -೨೮ಕೆ.ಎಸ್ ಎಚ್ ಆರ್-೧:ಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ೬ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಆನಂದಪುರ ಶ್ರೀಗಳು ಸಸಿಗೆ ನೀರು ಹಾಕುವ ಮೂಕ ಚಾಲನೆ ನೀಡಿದರು.