ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯವರೇ ಆದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಮಂಡಿಸಲಿರುವ ಬಜೆಟ್ ನಲ್ಲಿ ರೇಷ್ಮೆನಗರಿ ರಾಮನಗರಕ್ಕೆ ಏನಾದರು ವಿಶೇಷ ಕೊಡುಗೆ ನೀಡಬಹುದು ಎಂದು ಜನರು ನಿರೀಕ್ಷೆ ಹೊಂದಿದ್ದಾರೆ.
ಈಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಪುರ, ರಾಮನಗರ, ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ಬಜೆಟ್ ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಘೋಷಣೆ ಹಾಗೂ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಜೀವ ನೀಡಿ ಪೂರ್ಣಗೊಳಿಸುವ ಸವಾಲು ಕೂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರ ಮೇಲಿದೆ.ಜಿಲ್ಲೆಯಲ್ಲಿ ರೇಷ್ಮೆ, ಹೈನುಗಾರಿಕೆ ಹಾಗೂ ಮಾವು ಪ್ರಮುಖ ಕಸುಬುಗಳಾಗಿದ್ದು, ಇದನ್ನು ಅವಲಂಬಿಸಿರುವ ರೈತರ ಪ್ರಗತಿಗಾಗಿ ಪೂರಕವಾದ ಯೋಜನೆ ರೂಪಿಸಬೇಕಿದೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವುದು.
ಇನ್ನು ಮಹತ್ವಕಾಂಕ್ಷೆ ಮೇಕೆದಾಟು ಅಣೆಕಟ್ಟೆ ಯೋಜನೆ, ಪ್ರವಾಸೋದ್ಯಮ ಉತ್ತೇಜನೆ, ಕೆಂಗೇರಿ - ಬಿಡದಿವರೆಗೆ ಮೆಟ್ರೋ ವಿಸ್ತರಣೆ, ಬೆಂಗಳೂರು - ಚಾಮರಾಜನಗರ ರೈಲು ಯೋಜನೆ, ನೂತನ ತಾಲೂಕು ಹಾರೋಹಳ್ಳಿಗೆ ಅಗತ್ಯ ಸೌಲಭ್ಯ ಹಾಗೂ ವಿಶ್ವ ವಿಖ್ಯಾತ ಬೊಂಬೆ ಉದ್ಯಮಕ್ಕೆ ನೆರವು. ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಿ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ.ಜಿಲ್ಲೆಯ ಜನರ ಜೀವನಾಧಾರವಾಗಿರುವ ರೇಷ್ಮೆ, ಹಾಲು ಹಾಗೂ ಮಾವಿನ ಹಣ್ಣಿನ ಬೆಳೆಗಳಿಗೆ ಉತ್ತೇಜನ, ಮಾರುಕಟ್ಟೆ ಹಾಗೂ ಸಂಸ್ಕರಣ ಸೌಲಭ್ಯ, ಬೆಂಗಳೂರು - ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಭೂಮಿ ಗುರುತಿಸಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸುವುದು, ಈ ಹೆದ್ದಾರಿ ನಿರ್ಮಾಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹೆದ್ದಾರಿ ಬದಿಯ ಹಲವು ಉದ್ಯಮಗಳಿಗೆ ನೆರವು ಸೇರಿದಂತೆ ಹತ್ತಾರು ನಿರೀಕ್ಷೆಗಳು ಬಜೆಟ್ ಮೇಲಿದೆ.ರೇಷ್ಮೆನಗರಿ ಜನರ ನಿರೀಕ್ಷೆಗಳೇನು?1.ರಾಮನಗರ ಹಾಗೂ ಚನ್ನಪಟ್ಟಣ ಎರಡು ನಗರಗಳನ್ನು ಅವಳಿ ನಗರಗಳನ್ನಾಗಿ ಘೋಷಣೆ ಮಾಡುವುದು. ಅವಳಿ ನಗರ ಘೋಷಣೆಯಿಂದ ಬೆಂಗಳೂರಿಗೆ ಪರ್ಯಾಯ ಪಟ್ಟಣವಾಗಿ ಜಿಲ್ಲೆ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಲಿದೆ.
2.ರಾಮನಗರದಲ್ಲಿ ಸ್ಲಂ ಕ್ಲಿಯರೆನ್ಸ್ ಬೋರ್ಡಿನಿಂದ ದಶಕದ ಹಿಂದೆ ಮನೆ ನಿರ್ಮಿಸಿಕೊಡುವ ವಾಗ್ದಾನವನ್ನು ಪೂರೈಸುವುದು. ಬಡವರಿಗೆ ಸೂರು ಮತ್ತು ನಿವೇಶನ ಒದಗಿಸುವುದು. ಬೆಂ- ಮೈ ಹೆದ್ದಾರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ, ಸುಸಜ್ಜಿತವಾದ ಕ್ರೀಡಾಂಗಣ, ಪಾರ್ಕ್ ನಿರ್ಮಿಸುವುದು.3.ರಾಮನಗರ ಟೌನಿನ ಮಧ್ಯಭಾಗದಲ್ಲಿ ಹರಿದು ಹೋಗಿರುವ ಅರ್ಕಾವತಿ ಕಾಲುವೆ ಎರಡು ಬದಿಯಲ್ಲಿ ಥೇಮ್ಸ್ ನದಿ ಮಾದರಿಯಲ್ಲಿಯೇ ಅರ್ಕಾವತಿ ನದಿ ಶುದ್ಧೀಕರಣ, ಮಕ್ಕಳ ಉದ್ಯಾನ ನಿರ್ಮಾಣ.
4.ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮೈಸೂರು ಕಡೆಗೆ ಪ್ರಯಾಣಿಸುವ ಜನರಿಗಾಗಿ ಬಸ್ ನಿಲ್ದಾಣ ಸ್ಥಾಪನೆ ಮಾಡುವುದು. ಅಪರೂಪದ ಅಳಿವಿನ ಅಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು ಬ್ರೀಡಿಂಗ್ ಸೆಂಟರ್ ಸ್ಥಾಪನೆ ಮಾಡುವುದು.5.ಆರ್ಥಿಕತೆಯ ದೃಷಿಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ(ಕೆ.ಆರ್.ಮಾರ್ಕಟ್ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿಸಿಕೊಳ್ಳುವುದು.ಬೊಂಬೆನಗರಿ ಜನರ ನಿರೀಕ್ಷೆಗಳೇನು?
1.ಬೊಂಬೆ ಉದ್ಯಮದ ಚೇತರಿಕೆಗೆ ವಿಶೇಷ ಕ್ಲಸ್ಟರ್ ನಿರ್ಮಾಣದ ಅಗತ್ಯವಿದೆ. ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು ನೀಡುವ ಮೂಲಕ ಸಾವಿರಾರು ಕುಶಲಕರ್ಮಿಗಳ ರಕ್ಷಣೆ ಮಾಡಬೇಕಿದೆ.2.ಸ್ಪನ್ ಸಿಲ್ಕ್ ಮಿಲ್ (ಕೆಎಸ್ ಐಸಿ ) ಪುನಶ್ಚೇತನಕ್ಕೆ ಕ್ರಮ ವಹಿಸಬೇಕಿದೆ. 208 ರಿಂದ ಸ್ಥಗಿತಗೊಂಡಿರುವ ಸ್ಪನ್ ಸಿಲ್ಕ್ ಮಿಲ್ ಕಾರ್ಖಾನೆ ಪುನಶ್ಚೇತನ ಮಾಡುವ ಮೂಲಕ ಕ್ಷೇತ್ರದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ ಗೊಳಿಸುವುದು.
3.ಪ್ರಧಾನ ಕಸುಬಾದ ಹೈನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಶು ಆಹಾರ ಘಟಕ, ಪಶುಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ಮಾಡಬೇಕಿದೆ.4.ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಣ್ವ ಜಲಾಶಯ ಅಭಿವೃದ್ಧಿ ಪಡಿಸುವುದು. ಈಗಾಗಲೇ ಜಲಾಶಯದ ಬಳಿ ಮಕ್ಕಳ ಉದ್ಯಾನ (ಚಿಲ್ಡ್ರನ್ ಪಾರ್ಕ್) ಸ್ಥಾಪನೆಯ ಘೋಷಣೆಯಾಗಿದೆ. ಅದಕ್ಕೆ ಅನುದಾನ ಒದಗಿಸುವ ಕಾರ್ಯ ಆಗಬೇಕು.
5.ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಟರ್ಮಿನಲ್ ಮಾರುಕಟ್ಟೆ ಸ್ಥಾಪನೆ.ಮಾಗಡಿ ಜನರ ನಿರೀಕ್ಷೆಗಳೇನು?
1.ಮಾಗಡಿ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆ ಕಾರ್ಯಗತಗೊಳಿಸುವುದು. ಬೈರಮಂಗಲ ಭಾಗದ ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವುದು.2.ಮಾಗಡಿಯಲ್ಲಿರುವ ಕೆಂಪೇಗೌಡ ಕೋಟೆ ಅಭಿವೃದ್ಧಿ, ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕು. ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ವೇಗ ನೀಡುವುದು.
3.ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್, ಕಾನೂನು ಕಾಲೇಜು ಹಾಗೂ ತಾಯಿ ಮಗು ಆಸ್ಪತ್ರೆ ಸ್ಥಾಪನೆ ಮಾಡುವುದು. ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಮಾಡಬೇಕಿದೆ.4.ಮಂಚನಬೆಲೆ ಜಲಾಶಯದ ಬಳಿ ಕೆಆರ್ ಎಸ್ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಘೋಷಣೆಯಾಗಿದ್ದು, ಅದರ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಆಗಬೇಕಿದೆ. ವೀರಾಪುರ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ತ್ವರಿಗತಗತಿಯಲ್ಲಿ ಪೂರ್ಣಗೊಳಿಸುವುದು, ಸಾವನದುರ್ಗ ಬೆಟ್ಟಕ್ಕೆ ರೋಪ್ ವೇ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸುವುದು.
5.ಕೆಂಗೇರಿಯಿಂದ ಬಿಡದಿ ಪಟ್ಟಣದವರೆಗೆ ಮೆಟ್ರೋ ವಿಸ್ತರಣೆ ಮಾಡುವುದು. ಬಿಡದಿ - ಹಾರೋಹಳ್ಳಿ ಕೈಗಾರಿಕಾ ಪ್ರದೇಶವಿರುವ ಕಾರಣ ಇಎಸ್ ಐ ಆಸ್ಪತ್ರೆ ನಿರ್ಮಾಣ ಮಾಡಬೇಕು. ಬೆಂಗಳೂರು - ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ವೇಗ ನೀಡುವುದು. ಸ್ಥಗಿತಗೊಂಡಿದ್ದು, ಚಾಲನೆ ದೊರಕಬೇಕಿದೆ.ಕನಕಪುರ ಜನರ ನಿರೀಕ್ಷೆಗಳೇನು?
1.ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡುವ ಸವಾಲು ಇದೆ. ಏತ ನೀರಾವರಿಯ ಮೂಲಕ ತಾಲೂಕಿನಲ್ಲಿನ ಕೆರೆಗಳನ್ನು ತುಂಬಿಸುವುದು ಮತ್ತು ಪ್ರಗತಿಯಲ್ಲಿರುವ ಏತ ನೀರಾವರಿಗಳನ್ನು ಪೂರ್ಣಗೊಳಿಸುವುದು.2.ಕನಕಪುರ ತಾಲೂಕಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿದ್ದು, ಅಗತ್ಯ ಅನುದಾನ ಒದಗಿಸಬೇಕಿದೆ. ತಾಯಿ ಮಗು ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ, ಸಲಕರಣೆ ಅಗತ್ಯವಿದೆ.
3.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಧಿಕಾರದ ಅವಧಿಯಲ್ಲಿ ಮಂಜೂರಾದ ಬೆಂಗಳೂರಿನಿಂದ ಕನಕಪುರ - ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ರೇಲ್ವೆ ಮಾರ್ಗ ಅನುಷ್ಠಾನಕ್ಕೆ ಮಾಡಬೇಕಿದೆ.4.ಪ್ರವಾಸೋದ್ಯಮಕ್ಕೆ ತಾಲೂಕಿನಲ್ಲಿ ಸಾಕಷ್ಟು ಅವಕಾಶಗಳಿದ್ದು , ಕನಕಪುರ ಸೇರಿದಂತೆ ನಾಲ್ಕು ತಾಲೂಕುಗಳ ಪ್ರವಾಸಿ ತಾಣಗಳನ್ನು ಒಳಗೊಳ್ಳುವ ಸರ್ಕ್ಯೂಟ್ ರಚಿಸಿ ಮೂಲಸೌಕರ್ಯ ವೃದ್ಧಿಸಬೇಕಿದೆ.
5.ರೇಷ್ಮೆಗೆ ಹೆಸರಾಗಿರುವ ಕನಕಪುರ ತಾಲೂಕಿನಲ್ಲಿ ರೇಷ್ಮೆ ಟೆಕ್ನೊ ಪಾರ್ಕ್ ನಿರ್ಮಾಣ ಮಾಡಿ ರೇಷ್ಮೆಗೆ ಉತ್ತೇಜನ ನೀಡುವುದು.ಹಾರೋಹಳ್ಳಿ ಜನರ ನಿರೀಕ್ಷೆಗಳೇನು?
1.ಹಾರೋಹಳ್ಳಿ ಹೊಸ ತಾಲೂಕಾಗಿ ಘೋಷಣೆಯಾಗಿದ್ದು, ತಾಲೂಕು ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಘೋಷಿಸಿ ಪೂರ್ಣಗೊಳಿಸಬೇಕು.2.ಹಾರೋಹಳ್ಳಿ ತಾಲೂಕು ಅಭಿವೃದ್ಧಿ ಪಡಿಸಲು ವಿವಿಧ ಸರ್ಕಾರಿ ಇಲಾಖೆಗಳಿಗೆ ಆದಷ್ಟು ಶೀಘ್ರವಾಗಿ ಅಕಾರಿಗಳ ನೇಮಿಸಬೇಕು.
3.ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗ್ನಿಶಾಮಕ ಠಾಣೆಯ ಮಂಜೂರು ಮಾಡಬೇಕು. ಸುಸಜ್ಜಿತ ಬಸ್ ನಿಲ್ದಾಣ, ಹೈಟೆಕ್ ಆಸ್ಪತ್ರೆ , ಕೃಷಿ ಉತ್ಪನ್ನ ಮಾರುಕಟ್ಟೆ, ನಿರ್ಮಾಣ ಮಾಡಬೇಕು4.ಹಾರೋಹಳ್ಳಿ ಕೈಗಾರಿಕೆ ಪ್ರದೇಶ ಸಾಕಷ್ಟು ಅಭಿವೃದ್ದಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಆರ್ಟ್ ಆಫ್ ಲೀವಿಂಗ್ ಆಶ್ರಮದಿಂದ 20 ಕಿ.ಮಿ ಮೆಟ್ರೊ ರೈಲು ವಿಸ್ತರಿಸುವುದು. 5.ಹಾರೋಹಳ್ಳಿ ಹೃದಯ ಭಾಗದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಪಟ್ಟಣದ ಎಲ್ಲ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಯೋಜನೆ ರೂಪಿಸುವುದು. ಸಮುದಾಯ ಆರೋಗ್ಯ ಮೇಲ್ದರ್ಜೆಗೇರಿಸುವುದು. ಐಟಿಐ ಕಾಲೇಜಿಗೆ ಕಟ್ಟಡ ನಿರ್ಮಾಣ, ಪಟ್ಟಣದಲ್ಲಿ ಮೂಲಸೌಲಭ್ಯ ಕಲ್ಪಿಸುವುದು.14ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣ.