ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಿಪ್ಪಾಣಿಯಲ್ಲಿ ರಾಮಮಂದಿರ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಪತ್ರಗಳು ಬಂದಿವೆ. ಬಾಂಬ್ ಬ್ಲಾಸ್ಟ್ ನಿಂದ ಒಂದು ಕಲ್ಲು ಕೂಡ ಅಲ್ಲಾಡಿಸೋಕೆ ಆಗಲ್ಲ, ನಿಮ್ಮ ನಾಟಕ ನಡೆಯೋದಿಲ್ಲ, ಈ ರೀತಿ ಬೆದರಿಸೋದು ಬಿಡಿ, ಎದುರು ಬಂದು ಧೈರ್ಯ ತೋರಿಸಿ , ಕೇಂದ್ರದಲ್ಲಿ ಸಶಕ್ತ ನಾಯಕತ್ವ ಇದೆ ಎಂದು ಶ್ರೀರಾಮಸೇನೆ ಸಂಸ್ಥಾಪ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತ ಕಲಬುರಗಿ, ಬಳ್ಳಾರಿ ಜೊತೆಗೆ ಭಟ್ಕಳದ ಲಿಂಕ್ ಇದೆ. ಭಟ್ಕಳದಲ್ಲಿಯೇ ಅಡಗಿರಬಹುದು ಎಂಬ ಮಾಹಿತಿ ಹೊರಬರ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಸರ್ಕಾರ ಇರಲಿ. ಇವರೆಲ್ಲರೂ ಅಧಿಕಾರದ ದಾಹಿಗಳು ಅಷ್ಟೇ, ಇವರಿಗೆ ಸಮಾಜ, ದೇಶ, ಧರ್ಮ ಎಳ್ಳಷ್ಟೂ ಬೇಡ. ಬರೀ ಬೂಟಾಟಿಕೆ ಮಾಡುತ್ತಾರಷ್ಟೇ. ಮುಸ್ಲಿಮರ ಓಲೈಕೆ, ತುಷ್ಟೀಕರಣ ಇದೇ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಭಟ್ಕಳ ನೇರವಾಗಿ ಪಾಕಿಸ್ತಾನ್ ಜೊತೆಗೆ ಲಿಂಕ್ ಇದೆ ಎಂಬುದು ಗೊತ್ತಾಗಿದ್ದರೂ ಯಾಕೆ ಬಾಯಿ ಮುಚ್ಕೊಂಡು ಕೂತಿದ್ದಾರೆ. ದೇಶದ ಸುರಕ್ಷತೆ ಬಗ್ಗೆ ನಿಮಗೆ ಕಾಳಜಿ ಇದೆಯಾ? ಬಳ್ಳಾರಿಯೂ ಕೂಡ ಸ್ಲೀಪರ್ ಸೆಲ್ ಆಗಿ ಬೆಳೆಯುತ್ತಿದೆ. ಹುಬ್ಬಳ್ಳಿ, ಕಲಬುರಗಿ ಸೇರಿ ಬೇರೆ ಬೇರೆ ಕಡೆ ಉಗ್ರರ ಚಟುವಟಿಕೆ ನಡೆಯುತ್ತಿದೆ. ನಮ್ಮ ಕಾನೂನು ಕೂಡ ದುರ್ಬಲವಾಗಿದೆ, ಕಾನೂನು ಬಿಗಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ:ರಾಜ್ಯದಲ್ಲಿ ಬಿಜೆಪಿ ನಾಯಕರ ನನಗೆ ಬಗ್ಗೆ ಅಸಮಾಧಾನ, ಸಿಟ್ಟಿದೆ.ಇವರು ಭ್ರಷ್ಟರು, ಹಿಂದುತ್ವ ವಿರೋಧಿಗಳಾಗಿದ್ದಾರೆ. ಸೋತ ಮೇಲೆ ಹಿಂದುತ್ವ ನೆನಪಾಗಿದೆ. ಗೆದ್ದಾಗ ಮೂರು ವರ್ಷ ಏನೂ ಮಾಡಲಿಲ್ಲ, ಆದರೆ, ದೇಶದ ಸುರಕ್ಷತೆ, ಭದ್ರತೆ ಹಿನ್ನೆಲೆ, ಧರ್ಮದ ಉಳಿವಿಗಾಗಿ ಪ್ರಧಾನಿ ಮೋದಿ ಅವರ ನಾಯಕತ್ವ ಬೇಕಿದೆ. ಹೀಗಾಗಿ ಶ್ರೀರಾಮಸೇನೆ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನ ಮಾಡುತ್ತಿದ್ದೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ನನ್ನನ್ನು ಸ್ವೀಕರಿಸುವ ಮಾನಸಿಕತೆ ಬಿಜೆಪಿಯಲ್ಲಿಲ್ಲ. ಬಿಜೆಪಿಗರಿಗೆ ಗಾದಿ, ದುಡ್ಡು ಇದೇ ಬೇಕಾಗಿದೆ. ರಾಜ್ಯ ಬಿಜೆಪಿಗರ ಮೇಲೆ ಏನೇ ಅಸಮಾಧಾನ ಇದ್ದರೂ ಕೇಂದ್ರಕ್ಕೆ ಮೋದಿ ಬೇಕು, ಮೋದಿ ಇಲ್ಲದೆ ದೇಶದ ಭವಿಷ್ಯ ಬಹಳ ಅಂಧಕಾರಕ್ಕೆ ಹೋಗುತ್ತದೆ. ಇಂತಹ ವ್ಯಕ್ತಿ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಮೋದಿ ಅವಶ್ಯಕತೆ ದೇಶಕ್ಕೆ ಇದೆ ಎಂದರು.ಇಂಡಿಯಾ ಒಕ್ಕೂಟಕ್ಕೆ ಭವಿಷ್ಯವಿಲ್ಲ:
ಇಂಡಿಯಾ ಒಕ್ಕೂಟದಿಂದ ಬಿಜೆಪಿಗೆ ಹಿನ್ನಡೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂಡಿಯಾ ಒಕ್ಕೂಟ ಅನ್ನೋದು ದಿಕ್ಕು ತಪ್ಪಿದ, ದಾರಿ ತಪ್ಪಿದ, ವಿಚಾರ ರಹಿತ ಒಕ್ಕೂಟ. ಈ ಒಕ್ಕೂಟಕ್ಕೆ ಯಾವುದೇ ಸಿದ್ಧಾಂತ, ನೀತಿ, ನಡವಳಿಕೆ ಇಲ್ಲ, ಪಶ್ಚಿಮ ಬಂಗಾಳದ ಟಿಎಂಸಿ ನಡವಳಿಕೆ ನೋಡಿದರೆ ಆ ರಾಜ್ಯದಲ್ಲಿ ರಾಕ್ಷಸಿ ರೂಪದ ಆಡಳಿತ ನಡೆಯುತ್ತಿದೆ, ಪಶ್ಚಿಮ ಬಂಗಾಳ, ಕೇರಳ, ದೆಹಲಿಯಲ್ಲಿ ಮುಸ್ಲಿಂ ತುಷ್ಟೀಕರಣದಿಂದ ದೇಶದ್ರೋಹಿ ಚಟುವಟಿಕೆ ನಡೆಯುತ್ತಿವೆ. ಇಂಡಿಯಾ ಒಕ್ಕೂಟಕ್ಕೆ ಭವಿಷ್ಯ ಇಲ್ಲ, ಮೋದಿ ಅವರಿಂದಲೇ ಹಿಂದು ರಾಷ್ಟ್ರದ ಕಡೆ ಹೋಗುತ್ತದೆ ಎಂದು ತಿಳಿಸಿದರು.ಪ್ರಕಾಶ್ ರಾಜ್ ಗೆ ಆಸ್ಕರ್ ಪ್ರಶಸ್ತಿ ಕೊಡಬೇಕು:
ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಪದೇ ಪದೆ ವಾಗ್ದಾಳಿ ನಡೆಸುವ ವಿಚಾರ ಪ್ರಸ್ತಾಪಿಸಿದ ಮುತಾಲಿಕ್, ಪ್ರಕಾಶ್ ರಾಜ್ ಒಳ್ಳೆಯ ನಟ, ಅವರ ನಟನೆಗೆ ಸೆಲ್ಯೂಟ್ ಹೊಡೆಯಬೇಕು. ಆದರೆ, ರಾಜಕೀಯದಲ್ಲಿ ಆ ನಟ ಹತಾಶನಾಗಿದ್ದಾನೆ. ಆತ ರಾಜಕೀಯಕ್ಕೆ ಅನ್ ಫಿಟ್. ನಟನೆಯಲ್ಲಿ ಏ ಒನ್, ಆಸ್ಕರ್ ಪ್ರಶಸ್ತಿ ಕೊಡುವಷ್ಟು ನಟನೆ ನಿಮ್ಮಲ್ಲಿದೆ. ಪೊಲಿಟಿಕಲಿ ನೀವು ಫೇಲ್ ಆಗಿದ್ದೀರಿ, ನೀವು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಮುತಾಲಿಕ್ ಹೇಳಿದರು.ಪ್ರತಾಪ್ ಸಿಂಹ ಪರ ಮುತಾಲಿಕ್ ಬ್ಯಾಟಿಂಗ್:
ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಎಂಪಿ ಟಿಕೆಟ್ ತಪ್ಪುತ್ತದೆ ಎಂಬ ವದಂತಿ ಬಗ್ಗೆ ಉತ್ತರಿಸಿದ ಮುತಾಲಿಕ್, ಹಿಂದುತ್ವ, ಅಭಿವೃದ್ಧಿ ಬಗ್ಗೆ ಸಮನಾಗಿ ತೆಗೆದುಕೊಂಡು ಹೋಗುತ್ತೀರೋ ಕರ್ನಾಟಕದ ಏಕೈಕ ಸಂಸದ ಪ್ರತಾಪ್ ಸಿಂಹ. ಅವರಿಗೆ ಪಕ್ಷ ಕಣ್ಮುಚ್ಚಿ ಟಿಕೆಟ್ ಕೊಡಬೇಕು ಎಂದು ಪ್ರತಾಪ್ ಪರ ಬ್ಯಾಟ್ ಬೀಸಿದರು.ಇವತ್ತಿನ ದುರ್ಬಲ, ನಿಷ್ಕ್ರಿಯ ಸಂಸದರ ಸಾಲಿದೆ, ಅಂತವರನ್ನು ಪ್ರತಾಪ್ ಜೊತೆಗೆ ಹೋಲಿಕೆ ಮಾಡೋಕೆ ಆಗಲ್ಲ. ಅಷ್ಟು ಕೆಲಸವನ್ನು ಅವರು ಮಾಡಿದ್ದಾರೆ. ಬೇರೆಯವರ ತರಹ ಬಾಲಬುಡಕತನ, ಲಾಬಿ, ಸಲಾಂ ಹೊಡೆಯೋದು ಮಾಡಿಲ್ಲ. ಆದರೆ, ಅಭಿವೃದ್ಧಿಯಲ್ಲಿ ನಂಬರ್ ಒನ್ ಸಂಸದ. ಅವರಿಗೆ ಟಿಕೆಟ್ ಕೊಡದಿದ್ದರೆ ನಾಗರಿಕರು, ಯುವಕರು ಸಿಡಿದೇಳುತ್ತಾರೆ ಎಂದು ಎಚ್ಚರಿಸಿದ ಅವರು, ಪ್ರಜ್ಞಾ ಸಿಂಗ್ ಅವರಿಗೂ ಟಿಕೆಟ್ ಕೊಡದಿರುವುದು ತಪ್ಪು ಎಂದ ಮುತಾಲಿಕ್, ಅವರಿಗೆ ಟಿಕೆಟ್ ತಪ್ಪಿಸಿದ್ದು ನೋಡಿದರೆ ಬಿಜೆಪಿ ಎಲ್ಲೋ ಒಂದು ಕಡೆ ವಿಕೃತಿಯ ಕಡೆ ಹೊರಟಿದೆ ಅಂತನಿಸುತ್ತೆ, ಇದು ಸರಿಯಲ್ಲ, ಈ ರೀತಿ ಹೊಂದಾಣಿಕೆ ರಾಜಕಾರಣ ಒಳ್ಳೆಯದಲ್ಲ, ಆದರೂ ಕೇಂದ್ರ ಸರ್ಕಾರದ ನಾಯಕತ್ವದಲ್ಲಿ ವಿಶ್ವಾಸವಿದೆ ಎಂದು ತಿಳಿಸಿದರು.