ಬಡತನವೇ ಬಾಳಿಗೆ ಬೆಳಕಾಯಿತು, ಪರಿಶ್ರಮವೇ ಬಾಳನ್ನು ಪ್ರಕಾಶಿಸಿತು: ಬಡತನ ಮೆಟ್ಟಿ ನಿಂತು ಉದ್ಯಮಿಯಾದ ಕತೆ

KannadaprabhaNewsNetwork | Published : Sep 30, 2024 1:21 AM

ಸಾರಾಂಶ

ಒಟ್ಟಾರೆ ತನ್ನನ್ನು ಕಾಡಿದ ಬಡತನವನ್ನು ಶಪಿಸದೆ ಬಡತನವನ್ನು ಬಡಿದೋಡಿಸಿ ಅವಿರತ ಶ್ರಮವನ್ನು ಪಟ್ಟು, ಎದುರಾದ ಸಂಕಷ್ಟವನ್ನೇ ಸಾಧನೆಗೆ ಮೆಟ್ಟಿಲುಗಳನ್ನಾಗಿ ಮಾಡಿ ಯಶಸ್ಸು ಸಾಧಿಸಿದ ನಿಹಾ ಅಬೂಬಕ್ಕರ್, ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ, ಪ್ರೇರಣೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಅದು ಅವರ ಬಾಲ್ಯದ ದಿನಗಳು, ಎಲ್ಲರಂತೆ ಆಟೋಟಗಳಲ್ಲಿ ಭಾಗಿಯಾಗುವ ಮನಸ್ಸು ಅವರಿಗಿತ್ತು. ಆದರೆ ಮನೆಯಲ್ಲಿ ಅನುಕೂಲತೆಗಳು ಇರಲಿಲ್ಲ. ಬಡತನ ಇವರ ಕುಟುಂಬವನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ದಿನಗಳು ಅದು. ಒಪ್ಪೊತ್ತು ಊಟಕ್ಕೂ ಗತಿ ಇಲ್ಲದ, ಹಸಿವೆಯಲ್ಲೇ ದಿನ ಕಳೆಯುವ ಸ್ಥಿತಿಯ ದಿನಗಳು ಅದು. ಕಷ್ಟದಲ್ಲಿ ಶಾಲೆಗೆ ಹೋಗುತ್ತಿದ್ದರೂ ಹಸಿವು ಕಲಿಕೆಯನ್ನು ಮುದಗೊಳಿಸಲಿಲ್ಲ, ಮುಂದುವರಿಸಲೂ ಬಿಡಲಿಲ್ಲ. ಕೊನೆಗೂ ೬ನೇ ತರಗತಿಗೆ ಶಿಕ್ಷಣವನ್ನು ಕೊನೆಗೊಳಿಸಲು ಸಂಕಲ್ಪಿಸಿ ದೂರದ ಮಂಗಳೂರಿಗೆ ಹೋದ ಆ ಹುಡುಗ, ಇಂದು ಯಶಸ್ವಿ ಜವುಳಿ ಉದ್ಯಮಿಯಾಗಿ, ಕೃಷಿಕನಾಗಿ, ವಾಣಿಜ್ಯ ಮಳಿಗೆಯ ಮಾಲಕನಾಗಿ ಜನಪ್ರಿಯನಾಗಿದ್ದಾರೆ. ಅವರೇ ಉಪ್ಪಿನಂಗಡಿಯ ಜವುಳಿ ಮಳಿಗೆಯ ಮಾಲಕ ಅಬೂಬಕ್ಕರ್. ಅವರ ಜೀವನ ವೃತ್ತಾಂತವೇ ಪ್ರೇರಣದಾಯಿ, ಶೂನ್ಯದಿಂದ ಸಾಧಕನಾದ ಶ್ರಮಜೀವಿಯ ಕಥನವಿದು.

ಹೌದು ಪುತ್ತೂರು ತಾಲೂಕಿನ ೩೪ನೇ ನೆಕ್ಕಿಲಾಡಿ ಗ್ರಾಮದ ಕರುವೇಲು ಎಂಬಲ್ಲಿನ ನಿವಾಸಿ ಹಸನಬ್ಬ- ಅಲಿಯಮ್ಮ ದಂಪತಿಯ ನಾಲ್ಕನೇ ಮಗನಾದ ಅಬೂಬಕ್ಕರ್ ಎಲ್ಲರಂತೆ ಬಾಲ್ಯದಲ್ಲಿ ಕುಣಿದು ಕುಪ್ಪಳಿಸಲು ಬಯಸಿದ್ದು ಸಹಜ. ಆದರೆ ಮನೆಯಲ್ಲಿ ಕಾಡಿದ ಬಡತನದಿಂದ ಆಟವಾಡುವ ಮನಸ್ಸು ಕರಗಿ ಹಸಿವು ನೀಗಿಸುವ ಕಾಯಕದತ್ತ ಮನಸ್ಸು ವಾಲಿತ್ತು. ಶಿಕ್ಷಣವನ್ನು ೬ನೇ ತರಗತಿಗೆ ಕೊನೆಗೊಳಿಸಿದ ಆತ ನೇರವಾಗಿ ಮಂಗಳೂರಿಗೆ ಹೋದ. ಅಲ್ಲಿ ಬಂದರಿನಲ್ಲಿ ಮೂಟೆ ಹೊರುವ ಕಾಯಕವನ್ನು, ಕೂಲಿ ಕೆಲಸವೆಲ್ಲವನ್ನೂ ಮಾಡಿದರು. ರಕ್ತವನ್ನು ಬೆವರನ್ನಾಗಿಸಿ ಶ್ರಮಿಸಿ ಆಸೆಗಳನ್ನು ಬದಿಗಿರಿಸಿ ಕಷ್ಟಪಟ್ಟು ಸಂಪಾದಿಸಿ ೨೦೦೦೦ ರು. ಒಟ್ಟುಗೂಡಿಸಿದ್ದರು. ಈ ಮೊತ್ತದಲ್ಲಿ ಒಂದಷ್ಟು ಬಟ್ಟೆಗಳನ್ನು ಖರೀದಿಸಿ ಉಪ್ಪಿನಂಗಡಿಯ ರಸ್ತೆ ಬದಿಯಲ್ಲಿ, ಜಾತ್ರೆ, ಸಂತೆಗಳಲ್ಲಿ ಮಡಚುವ ಮಂಚದಲ್ಲಿ ಬಟ್ಟೆ ಇಟ್ಟು ಮಾರಾಟ ಪ್ರಾರಂಭಿಸಿದರು.

ಸ್ವಲ್ಪ, ಸ್ವಲ್ಪವೇ ಲಾಭವನ್ನು ಗಳಿಸುತ್ತಾ, ವ್ಯಾಪಾರವನ್ನು ವೃದ್ಧಿಸತೊಡಗಿದರು. ಸತತ ೫ ವರ್ಷಗಳ ಕಾಲ ಬೀದಿ ಬದಿಯ ವ್ಯಾಪಾರವನ್ನು ನಡೆಸಿ ಉಪ್ಪಿನಂಗಡಿಯ ಪಿಬಿ ಕಾಂಪ್ಲೆಕ್ಸ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ನಿಹಾ ಡ್ರೆಸ್ಸಸ್ ಎಂಬ ಜವುಳಿ ಉದ್ಯಮವನ್ನು ಪ್ರಾರಂಭಿಸುತ್ತಾರೆ. ಉತ್ತಮ ಗುಣಮಟ್ಟದ ಬಟ್ಟೆಗಳ ಮಾರಾಟದಿಂದ ಯಶಸ್ವಿ ಉದ್ಯಮಿ ಎಂದೆಣಿಸಿ, ವೇಗದ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಾರೆ. ಯೋಗ್ಯ ಸಮಯಕ್ಕೆ ವಿವಾಹವಾಗಿ ಜವುಳಿ ಉದ್ಯಮ ಏರುಗತಿಯಲ್ಲಿ ಸಾಗುತ್ತಿದ್ದಂತೆಯೇ ಕೃಷಿ ಕ್ಷೇತ್ರಕ್ಕೂ ಗಮನ ಹರಿಸಿದ ಇವರು ಕರುವೇಲಿನಲ್ಲಿ ತೋಟವನ್ನು ಖರೀದಿಸಿದರು. ಮಹಡಿ ಮನೆಯನ್ನು ನಿರ್ಮಿಸಿದರು. ವಾಣಿಜ್ಯ ಮಳಿಗೆಯನ್ನು ನಿರ್ಮಿಸಿ ಬಾಡಿಗೆಗೆ ನೀಡುವ ಮೂಲಕ ಆದಾಯವನ್ನು ಹೆಚ್ಚಿಸತೊಡಗಿದರು.

* ದಾನ ಧರ್ಮಗಳತ್ತ ಗಮನ

ಸಂಪತ್ತು ಹರಿದು ಬರತೊಡಗಿದಂತೆ ದಾನ ಧರ್ಮಗಳತ್ತಲೂ ಗಮನ ಹರಿಸಿದ ಅವರು, ಸದ್ದಿಲ್ಲದೆ ಸಹಾಯ ಸಹಕಾರ ನೀಡುತ್ತಾ ಬಂದರು. ಬಡ ಪ್ರಾಮಾಣಿಕ ಶ್ರಮಜೀವಿಗಳ ಕನಸು ನನಸಾಗಿಸಲು ಬ್ಯಾಂಕ್ ಸಾಲಕ್ಕೆ ಭದ್ರತೆ ನಿಂತು ಸಾಲ ಒದಗಿಸಿಕೊಟ್ಟರು. ಅವರೆಲ್ಲರ ಆರ್ಥಿಕ ಉನ್ನತಿಗೂ ಸಹಕಾರಿಯಾದರು. ಇತ್ತ ತನ್ನ ನಾಲ್ಕು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಬದುಕು ಬೆಳಗಿಸುವಲ್ಲಿ ಶ್ರಮಿಸುವ ಮೂಲಕ ಆದರ್ಶ ತಂದೆಯಾಗಿಯೂ ಕಾಣಿಸಿಕೊಂಡಿದ್ದಾರೆ.ಒಟ್ಟಾರೆ ತನ್ನನ್ನು ಕಾಡಿದ ಬಡತನವನ್ನು ಶಪಿಸದೆ ಬಡತನವನ್ನು ಬಡಿದೋಡಿಸಿ ಅವಿರತ ಶ್ರಮವನ್ನು ಪಟ್ಟು, ಎದುರಾದ ಸಂಕಷ್ಟವನ್ನೇ ಸಾಧನೆಗೆ ಮೆಟ್ಟಿಲುಗಳನ್ನಾಗಿ ಮಾಡಿ ಯಶಸ್ಸು ಸಾಧಿಸಿದ ನಿಹಾ ಅಬೂಬಕ್ಕರ್, ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ, ಪ್ರೇರಣೆಯಾಗಿದ್ದಾರೆ.ಬಡತನವೇ ನನಗೆ ವರವಾಯಿತುನನ್ನ ಬಾಲ್ಯ ಎಲ್ಲರಂತಿರಲಿಲ್ಲ. ಮನೆಯಲ್ಲಿ ಕಷ್ಟವಿತ್ತು, ಶಾಲಾ ಶಿಕ್ಷಣ ಮುಂದುವರಿಸಲು ಅನುಕೂಲವಿರಲಿಲ್ಲ. ಅದಕ್ಕಾಗಿ ಶಾಲೆ ತೊರೆದು ಕೆಲಸಕ್ಕೆಂದು ಮಂಗಳೂರಿಗೆ ಹೋದೆ. ಅಲ್ಲಿ ತುಂಬಾ ಕಷ್ಟಪಟ್ಟೆ. ಆದರೆ ಇಪ್ಪತ್ತು ಸಾವಿರ ರುಪಾಯಿ ಸಂಪಾದಿಸಿಯೇ ಅಲ್ಲಿಂದ ವಾಪಸ್‌ ಆಗಬೇಕೆಂದು ನಾನಿರಿಸಿದ ಗುರಿಯನ್ನು ಸಾಧಿಸಿದೆ. ಬಳಿಕ ಬಟ್ಟೆ ವ್ಯಾಪಾರಿಯಾಗಬೇಕೆಂಬ ಕನಸನ್ನು ನನಸಾಗಿಸಿದೆ. ದಿನಕಳೆದಂತೆ ಅದರಲ್ಲಿ ಪಕ್ವತೆಯನ್ನು ಪಡೆದು ಇವತ್ತು ಈ ಸ್ಥಿತಿಗೆ ಬಂದಿದ್ದೇನೆ. ಕಷ್ಟದ, ಹಸಿವಿನ ಅರಿವು ನನಗೆ ಇದೆ. ಅದಕ್ಕಾಗಿ ಸಂಕಷ್ಟದಲ್ಲಿ ಇದ್ದವರಿಗೆ ಒಂದಷ್ಟು ಸಹಾಯ ಮಾಡುವ ಶಕ್ತಿ ಮತ್ತು ಮನಸನ್ನು ಭಗವಂತ ನನಗೆ ನೀಡಿದ್ದಾನೆ. ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಎಷ್ಟೋ ಬಾರಿ ನಮ್ಮ ಒಳ್ಳೆಯದ್ದಕ್ಕೇ ಬರುತ್ತದೆ. ಅದನ್ನು ಎದುರಿಸುವ ಛಲ ನಮ್ಮಲ್ಲಿರಬೇಕು ಹಾಗೂ ಭಗವಂತನಲ್ಲಿ ಪ್ರಾರ್ಥಿಸಿ, ಪ್ರಾಮಾಣಿಕವಾಗಿ ಪರಿಶ್ರಮಿಸಿದರೆ ಜೀವನದಲ್ಲಿ ನಿಶ್ಚಿತವಾಗಿಯೂ ಪ್ರಕಾಶಿಸಬಹುದೆಂದು ನಾನು ಕಂಡುಕೊಂಡಿದ್ದೇನೆ ಎಂದು ಹೇಳುತ್ತಾರೆ ಅಬೂಬಕ್ಕರ್ ಕೆ.

Share this article