ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿನೂತನ ತಾಲೂಕು ಕೇಂದ್ರವೆಂದು ೯ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ, ರಾಜ್ಯಪತ್ರ ಹೊರಡಿಸಿದ್ದರೂ ರಬಕವಿ-ಬನಹಟ್ಟಿ ತಾಲೂಕಿಗೆ ಮೂಲಭೂತ ಸೌಕರ್ಯಗಳ ಕೊರತೆಗಳು ಪೆಡಂಭೂತದಂತೆ ಕಾಡುತ್ತಿವೆ. ತಹಸೀಲ್ದಾರ್ ಹಾಗೂ ತಾಪಂ ಕಚೇರಿ ಮಾತ್ರ ಕಾರ್ಯಾರಂಭಗೊಂಡಿದ್ದು, ಬಹುತೇಕ ಇಲ್ಲಗಳಿಂದಲೇ ತಾಲೂಕಾಗಿ ಮುನ್ನಡೆಯುತ್ತಿರುವುದು ಸರ್ಕಾರದ ನಿಷ್ಕ್ರಿಯತೆ ಮತ್ತು ತಾಲೂಕಿನ ಜನತೆಯಲ್ಲಿನ ಹೋರಾಟದ ಕಿಚ್ಚಿನ ಕೊರತೆಯನ್ನು ಪ್ರತಿಬಿಂಬಿಸುತ್ತಿದೆ.
ಆರೋಗ್ಯ ಸೇವೆ ಪಡೆಯಲು ಪರದಾಟ:ಅವಳಿ ನಗರ ಸೇರಿದಂತೆ ಕುಲಹಳ್ಳಿ, ಯಲ್ಲಟ್ಟಿ, ಜಗದಾಳ, ನಾವಲಗಿ, ಹನಗಂಡಿ, ಮದನಮಟ್ಟಿ, ಹಳಿಂಗಳಿ, ತಮದಡ್ಡಿ ಗ್ರಾಮಗಳ ಜನತೆ ವೈದ್ಯಕೀಯ ಸೌಲಭ್ಯ ಪಡೆಯಲು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ ಸರ್ಕಾರ ಸ್ಥಳೀಯ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು, ಕೊರತೆಯಾದ ಸಿಬ್ಬಂದಿ ತುಂಬಲು ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ ಅನಾರೋಗ್ಯಕ್ಕೆ ಸ್ಪಂದಿಸಲು ಅಗತ್ಯ ಸಿಬ್ಬಂದಿ ಒದಗಿಸಲು ವಿಫಲವಾಗಿದ್ದರಿಂದ ಜನತೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಕಾರ್ಮಿಕ ಇಲಾಖೆ ಇಎಸ್‌ಐ ಕಾರ್ಡ್ ವಿತರಿಸುತ್ತಿದೆಯಾದರೂ ಇಲ್ಲಿನ ನುರಿತ ತಜ್ಞ ವೈದ್ಯರ ಸೇವೆಗೆ ನೊಂದಣಿ ಮಾಡಿಸದೇ ಕೇವಲ ಮುಧೋಳದ ಒಂದೇ ಆಸ್ಪತ್ರೆಯನ್ನು ಇಲಾಖೆಯ ಅಧಿಕೃತ ಆಸ್ಪತ್ರೆ ಎಂದು ಘೋಷಿಸಿದ್ದರಿಂದ ರಬಕವಿ-ಬನಹಟ್ಟಿ, ತೇರದಾಳ, ಜಮಖಂಡಿ, ಮಹಾಲಿಂಗಪುರ ಸುತ್ತಲಿನ ಕಾರ್ಮಿಕರು ವೈದ್ಯಕೀಯ ಸೇವೆ ಪಡೆಯಲಾಗದೇ ಕೇವಲ ಕಾಗದದಲ್ಲಿನ ಕೇಕ್ ತೋರಿಸಿದಂತಾಗಿದೆ.ಸ್ವಚ್ಛತೆ ಮರೀಚಿಕೆ: ತಾಲೂಕಿನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು, ಕಂದಾಯ, ಶೈಕ್ಷಣಿಕ ಸೇರಿದಂತೆ ಇತರೆ ಸಂಬಂಧಿಸಿದ ಕೆಲಸಗಳಿಗೆ ಜಮಖಂಡಿಗೆ ಹೋಗುವುದು ತಪ್ಪಿಲ್ಲ. ಸಾಕಷ್ಟು ಬಾರಿ ಹೋರಾಟದ ಫಲವಾಗಿ ೨೦೧೭ ಮಾರ್ಚ್ ನಲ್ಲಿ ನೂತನ ತಾಲೂಕು ಕೇಂದ್ರ ಘೋಷಣೆಯಾಗಿದೆ. ಆದರೆ ಪ್ರಜಾಪೀಡಣೆ ಈಗಲೂ ಮುಂದುವರಿದಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಕಚೇರಿ, ಸಿಬ್ಬಂದಿಯನ್ನು ತರಲಾಗದ ಶಾಸಕರು ಇದ್ದರೂ ಇಲ್ಲದಂತಿದ್ದಾರೆ. ತಾಲೂಕಾಗಿ ೯ ವರ್ಷಗಳೇ ಕಳೆದರೂ ಕವಡೆಯಷ್ಟು ಪ್ರಗತಿಯಾಗಿಲ್ಲ.
ಪೂರಕ ಅನುದಾನವಿಲ್ಲ:ರಾಜ್ಯ ಬಜೆಟ್‌ನಲ್ಲಿ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಪೂರಕ ಅನುದಾನ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಪ್ರಮುಖವಾಗಿ ಉಪ ನೋಂದಣಿ, ಆರೋಗ್ಯ, ಶಿಕ್ಷಣ, ಕೃಷಿ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಬಿಸಿಎಂ, ಕರ್ನಾಟಕ ಭೂ ಸೇನಾ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ನೀರಾವರಿ, ಮೀನುಗಾರಿಕೆ, ಅಬಕಾರಿ ಇಲಾಖೆ ಕಚೇರಿಗಳೇ ಇಲ್ಲ. ಎಲ್ಲ ಇಲಾಖೆಗಳ ಕಚೇರಿಗಳ ಆರಂಭಿಸಲು ಮಿನಿ ವಿಧಾನಸೌಧ ನಿರ್ಮಿಸಲು ಅಂದಿನ ಸರ್ಕಾರ ರಬಕವಿಯ ನಾಯಕರ ಗುಡ್ಡದಲ್ಲಿನ ಜಮೀನು ವಶಪಡಿಸಿಕೊಂಡಿದ್ದರೂ ಅನುದಾನ ಬಿಡಗಡೆಯಾಗದ ಕಾರಣ ಕಾರ್ಯರೂಪಕ್ಕೆ ಬಂದಿಲ್ಲ.ಇದ್ದೂ ಇಲ್ಲದಂತಿರುವ ಮಹಾಲಿಂಗಪುರ: ಮುಧೋಳ ತಾಲೂಕಿನಿಂದ ಒಡೆದು ನೂತನ ತಾಲೂಕಾವಾಗಿರುವ ರಬಕವಿ-ಬನಹಟ್ಟಿಗೆ ಸೇರ್ಪಡೆಗೊಂಡಿರುವ ಮಹಾಲಿಂಗಪುರ ಹಾಗೂ ಸುತ್ತಲಿನ ಗ್ರಾಮಗಳಿಗೆ ಹೊಸ ತಾಲೂಕು ಹೆಸರಿಗೆ ಮಾತ್ರ ಎಂಬಂತಾಗಿದೆ. ಸರ್ಕಾರಿ ಕೆಲಸ, ದಾಖಲಾತಿ ಸೇರಿದಂತೆ ಯಾವುದೇ ಚಟುವಟಿಕೆಗೂ ಇನ್ನೂ ಮುಧೋಳ ನಗರವನ್ನೇ ಇಲ್ಲಿನ ಜನತೆ ಆಶ್ರಯಿಸಿದ್ದು, ಮುಧೋಳಕ್ಕೆ ಅಲೆಯುವುದು ತಪ್ಪಿಲ್ಲ.
ರಬಕವಿಗೆ ಇಲ್ಲ ಪೊಲೀಸ್ ಠಾಣೆ: ಬೆಳೆದಿರುವ ರಬಕವಿ ನಗರದ ಜನತೆ ದೂರು ನೀಡಲು, ಕಳ್ಳತನ ನಡೆದರೆ, ಪಾಸ್‌ಪೋರ್ಟ್, ಸಣ್ಣಪುಟ್ಟ ಕೆಲಸಗಳಿಗೂ 7 ಕಿ.ಮೀ.ದೂರದ ತೇರದಾಳ ಪಟ್ಟಣಕ್ಕೆ ತೆರಳಬೇಕಿದೆ. ರಬಕವಿ-ಬನಹಟ್ಟಿ ಕೇವಲ ಕೂಗಳತೆ ಅಂತರದಲ್ಲಿದ್ದು, ಒಂದೂವರೆ ಕಿ.ಮೀ.ದೂರದ ಬನಹಟ್ಟಿ ಪೊಲೀಸ್ ಠಾಣೆಗೆ ರಬಕವಿ ನಗರ ಸೇರ್ಪಡೆಗೊಳಿಸಲು ಜನತೆ ಮಾಡಿದ್ದ ವಿನಂತಿಗೂ ಸರ್ಕಾರ ಸ್ಪಂದಿಸುತ್ತಿಲ್ಲ. ವಕೀಲರಾದ ಚಂದ್ರಕಾಂತ ದುರಡಿ ೩ ದಶಕಗಳ ಹಿಂದೆಯೇ ರಬಕವಿ ಹೃದಯ ಭಾಗದಲ್ಲಿ ಪೊಲೀಸ್ ಠಾಣೆಗಾಗಿ ಒಂದು ಎಕರೆ ಬೆಲೆಬಾಳುವ ಭೂಮಿ ನೀಡಿದ್ದರೂ ಇಲಾಖೆಯ ಹಿರಿಯ ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ೨೦೨೩ರಲ್ಲಿ ಸ್ಥಳೀಯರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಫಲಕಾರಿಯಾಗದ ಕಾರಣ ಕೇವಲ ೨೬ಕಿ.ಮೀ.ದೂರದಲ್ಲಿ ಅಥಣಿ, ಮಹಾರಾಷ್ಟ್ರದತ್ತ ಸಂಪರ್ಕ ಸಾಧಿಸಲು ಅವಕಾಶವಾಗುತ್ತಿಲ್ಲ.ಜನಪ್ರತಿನಿಧಿಗಳ ನಿರಾಸಕ್ತಿ: ಕ್ಷೇತ್ರದಲ್ಲಿ ತೇರದಾಳ ತಾಲೂಕು ಘೋಷಣೆಯಾಗಿದ್ದು, ವಿಶೇಷ ತಹಸೀಲ್ದಾರ ಹುದ್ದೆ ನೀಡಿದ್ದು ಬಿಟ್ಟರೆ ಅಲ್ಲಿಯೂ ಇನ್ನೂ ಕಚೇರಿಗಳ ನೀಡಿಲ್ಲ. ತೇರದಾಳ ತಾಲೂಕಿಗೆ ಮಹಾಲಿಂಗಪುರ ಸುತ್ತಲಿನ ಪ್ರದೇಶ ಸೇರಿಸಿ ಹೊರಡಿಸಿದ ಅವೈಜ್ಞಾನಿಕ ಆದೇಶದಿಂದ ಮಹಾಲಿಂಗಪುರದಲ್ಲೂ ನೂತನ ತಾಲೂಕು ಬೇಡಿಕೆಯ ಬೆಂಕಿ ಪ್ರಜ್ವಲಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಚೇರಿಗಳನ್ನು ನೀಡದೇ ಬೊಮ್ಮಾಯಿ ಸರ್ಕಾರ ಪತನದ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನಿರ್ವಹಿಸಲು ಹೆಣಗುತ್ತಿದೆ. ಸ್ಥಳೀಯ ಸಮಸ್ಯೆಗಳನ್ನು ಎತ್ತಿ ತೋರಿಸಲು ಮತ್ತು ಪಟ್ಟುಬಿಡದೇ ಅನುದಾನ ತರಲು ಶಾಸಕ ಸವದಿ ವಿಫಲರಾದ ಕಾರಣ ಮತ್ತು ಹೋರಾಟ, ಆಗ್ರಹ ಪದಗಳನ್ನೇ ಮರೆತಿರುವ ಸಮುದಾಯಗಳ ಮುಖಂಡರಿಂದಾಗಿ ಪ್ರಮುಖವಾಗಿ ಜವಳಿ ಉದ್ಯಮ ಸೇರಿದಂತೆ ಎಲ್ಲ ನಾಗರಿಕ ಬೇಡಿಕೆಗಳು ಹೂತು ಹೋದಂತಾಗಿವೆ.
ನೋಂದಣಿ, ಶಿಕ್ಷಣ, ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಸೇರಿದಂತೆ ಶೇ.೭೦ರಷ್ಟು ಇಲಾಖೆಗಳ ಸಮಸ್ಯೆಯಿದೆ. ಸರ್ಕಾರ ವಿಳಂಬ ನೀತಿ ಅನುಸರಿಸದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ತಾಲೂಕು ಸಮನ್ವಯ ಸಮಿತಿಯಿಂದ ಮತ್ತೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.-ಭೀಮಶಿ ಮಗದುಮ್, ಮಾಜಿ ಅಧ್ಯಕ್ಷರು, ರಬಕವಿ-ಬನಹಟ್ಟಿ ತಾಲೂಕು ಸಮಿತಿ
ಸರ್ಕಾರಗಳಿಗೆ ಸಂಕಷ್ಟ ಹೊಸದಲ್ಲ. ರಾಜ್ಯದಲ್ಲಿ ಅಧಿಕೃತ ಘೋಷಣೆಯಾದ ಎಲ್ಲ ೪೯ ತಾಲೂಕುಗಳಿಗೆ ಪೂರ್ಣ ಪ್ರಮಾಣದ ಕಚೇರಿ ಕಾರ್ಯಾರಂಭಕ್ಕೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.-ಶಿವಾನಂದ ಗಾಯಕವಾಡ, ಹಿಂದೂಪರ ಸಂಘಟನೆ ಮುಖಂಡರು
ಅತ್ಯಂತ ಕಡಿಮೆ ವೆಚ್ಚದಲ್ಲಿ ತಾಲೂಕಾಗಿರುವ ರಬಕವಿ-ಬನಹಟ್ಟಿಗೆ ಸೂಕ್ತ ಸ್ಥಳಾವಕಾಶಗಳನ್ನೂ ಖಾಸಗಿ ವ್ಯಕ್ತಿಗಳು ಗುರ್ತಿಸಿದ್ದಾರೆ. ಸರ್ಕಾರ ಕಾರ್ಯಾರಂಭ ಮಾಡುವುದೊಂದೇ ಬಾಕಿ, ಹೀಗಿದ್ದಾಗ್ಯೂ ವಿಳಂಬವೇಕೆ? ಸ್ಥಳೀಯ ಶಾಸಕರು ಕಾಳಜಿ ವಹಿಸಿ ಕಚೇರಿಗಳನ್ನು ತರಬೇಕು.-ನೀಲಕಂಠ ಗೌರಿಹರ ಮುತ್ತೂರ. ಅಧ್ಯಕ್ಷರು, ಪವರ್ ಲೂಂ ಅಸೋಸಿಯೇಶನ್, ಹಿರಿಯ ಕಾಂಗ್ರೆಸ್ ಧುರೀಣರು, ರಬಕವಿನೋಂದಣಿ, ಶಿಕ್ಷಣ, ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಸೇರಿದಂತೆ ಶೇ.೭೦ರಷ್ಟು ಇಲಾಖೆಗಳ ಸಮಸ್ಯೆಯಿದೆ. ಸರ್ಕಾರ ವಿಳಂಬ ನೀತಿ ಅನುಸರಿಸದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ತಾಲೂಕು ಸಮನ್ವಯ ಸಮಿತಿಯಿಂದ ಮತ್ತೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.
-ಭೀಮಶಿ ಮಗದುಮ್, ಮಾಜಿ ಅಧ್ಯಕ್ಷರು, ರಬಕವಿ-ಬನಹಟ್ಟಿ ತಾಲೂಕು ಸಮಿತಿಸರ್ಕಾರಗಳಿಗೆ ಸಂಕಷ್ಟ ಹೊಸದಲ್ಲ. ರಾಜ್ಯದಲ್ಲಿ ಅಧಿಕೃತ ಘೋಷಣೆಯಾದ ಎಲ್ಲ ೪೯ ತಾಲೂಕುಗಳಿಗೆ ಪೂರ್ಣ ಪ್ರಮಾಣದ ಕಚೇರಿ ಕಾರ್ಯಾರಂಭಕ್ಕೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.
-ಶಿವಾನಂದ ಗಾಯಕವಾಡ, ಹಿಂದೂಪರ ಸಂಘಟನೆ ಮುಖಂಡರುಅತ್ಯಂತ ಕಡಿಮೆ ವೆಚ್ಚದಲ್ಲಿ ತಾಲೂಕಾಗಿರುವ ರಬಕವಿ-ಬನಹಟ್ಟಿಗೆ ಸೂಕ್ತ ಸ್ಥಳಾವಕಾಶಗಳನ್ನೂ ಖಾಸಗಿ ವ್ಯಕ್ತಿಗಳು ಗುರ್ತಿಸಿದ್ದಾರೆ. ಸರ್ಕಾರ ಕಾರ್ಯಾರಂಭ ಮಾಡುವುದೊಂದೇ ಬಾಕಿ, ಹೀಗಿದ್ದಾಗ್ಯೂ ವಿಳಂಬವೇಕೆ? ಸ್ಥಳೀಯ ಶಾಸಕರು ಕಾಳಜಿ ವಹಿಸಿ ಕಚೇರಿಗಳನ್ನು ತರಬೇಕು.
-ನೀಲಕಂಠ ಗೌರಿಹರ ಮುತ್ತೂರ. ಅಧ್ಯಕ್ಷರು, ಪವರ್ ಲೂಂ ಅಸೋಸಿಯೇಶನ್, ಹಿರಿಯ ಕಾಂಗ್ರೆಸ್ ಧುರೀಣರು, ರಬಕವಿ