ಕನ್ನಡಪ್ರಭ ವಾರ್ತೆ ಗುರುಮಠಕಲ್
ಜೆಡಿಎಸ್ ಹಿರಿಯ ಮುಖಂಡ, ಗುರುಮಠಕಲ್ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ಅಂತಿಮ ಯಾತ್ರೆಯು ಸೋಮವಾರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಸಕಲ ಗೌರವಗಳೊಂದಿಗೆ ಸ್ವಗ್ರಾಮ ಕಂದಕೂರು ಗ್ರಾಮದ ತೋಟದಲ್ಲಿ ನಡೆಯಿತು.ಸೋಮವಾರ ಬೆಳಗ್ಗೆ 8 ಗಂಟೆಯ ವೇಳೆಗೆ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ ಸ್ವಗೃಹ ದಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭಗೊಂಡಿತು. ಮನೆಯಿಂದ ಸಾಗಿದ ಯಾತ್ರೆಯು ಹಾದಿಯಲ್ಲಿ ಅವರ ಪ್ರೀತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಅಂತಿಮ ಯಾತ್ರೆಯುದ್ದಕ್ಕೂ ನೂರಾರು ಅಭಿಮಾನಿಗಳು ಹಾರ ಹಾಕಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದರು.ಪುಷ್ಪಾಲಂಕೃತ ವಾಹನದಲ್ಲಿ ಅಂತಿಮ ಯಾತ್ರೆ:
ಪುಷ್ಪಾಲಂಕೃತ ವಾಹನದಲ್ಲಿ ನಾಗನಗೌಡ ಕಂದಕೂರು ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಬಳಿಕ ಎಲೇರಿ ರಸ್ತೆ ಮಧ್ಯದಲ್ಲಿರುವ ತೋಟದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪೊಲೀಸ್ ಇಲಾಖೆಯಿಂದ ಮೂರು ಸುತ್ತಿನ ಕುಶಾಲು ತೋಪು ಹಾರಿಸುವ ಮೂಲಕ ಗೌರವ ಸಲ್ಲಿಸುವರ್ಣ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಗಣ್ಯರಿಂದ ಅಂತಿಮ ನಮನ:
ನಿಖಿಲ್ ಕುಮಾರ ಸ್ವಾಮಿ, ಕಲಬುರಗಿ ಸಂಸದ ಡಾ. ಉಮೇಶ್ ಜಾಧವ, ಮಾಜಿ ಉಪ ಸಭಾಪತಿ ಹಾಗೂ ಸೇಡಂ ಕ್ಷೇತ್ರದ ಮಾಜಿ ಶಾಸಕ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ದೇವದುರ್ಗ ಶಾಸಕಿ ಕರೆಮ್ಮ, ಯಾದಗಿರಿ ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಡಾ. ಸುಶೀಲಾ, ಎಸ್ಪಿ ಸಂಗೀತಾ, ಜಿಪಂ ಸಿಇಓ ಗರಿಮಾ ಪನ್ವಾರ, ಅರಣ್ಯಾಧಿಕಾರಿ ಕಾಜೋಲ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ, ತಾಲೂಕು ಪಂಚಾಯತ್ ಅಧಿಕಾರಿ ಬಸವರಾಜ್ ಶರಬೈ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಹಸೀಲ್ದಾರ್ ನೀಲಪ್ರಭಾ ಸೇರಿದಂತೆ ಇತರರು ಅಂತಿಮ ನಮನ ಸಲ್ಲಿಸಿದರು.ಸ್ವಯಂ ಪ್ರೇರಣೆಯಿಂದ ಅಂಗಡಿಗಳು ಬಂದ್:
ನಾಗನಗೌಡ ಕಂದಕೂರು ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಂದರ್ಭದಲ್ಲಿ ಪಟ್ಟಣದಲ್ಲಿ ಬೆಳಿಗ್ಗೆ ಯಿಂದ ಸಂಜೆ 4 ಗಂಟೆಯವರೆಗೆ ಸ್ವಯಂ ಪ್ರೇರಿತರಾಗಿ ಹಲವು ಅಂಗಡಿ-ಮುಂಗಟ್ಟುಗಳನ್ನು ಅಭಿಮಾನದಿಂದ ಬಂದ್ ಮಾಡಿ ಗೌರವ ಸಲ್ಲಿಸಲಾಯಿತು.