ಕಾರವಾರ: ಹೆಸ್ಕಾಂನಿಂದ ಕಂಬದ ಬದಲು ಟವರ್

KannadaprabhaNewsNetwork | Updated : Jan 06 2024, 09:59 AM IST

ಸಾರಾಂಶ

ಮಳೆಗಾಲದಲ್ಲಿ ಹೆಸ್ಕಾಂಗೆ ವಿದ್ಯುತ್ ತಂತಿ, ಕಂಬದ ನಿರ್ವಹಣೆಯೇ ಉತ್ತರ ಕನ್ನಡದಲ್ಲಿ ದೊಡ್ಡ ಸವಾಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಟವರ್ ಮೂಲಕ ವಿದ್ಯುತ್ ತಂತಿ ಜೋಡಿಸಲು ಮುಂದಾಗಿದೆ.

ಜಿ.ಡಿ. ಹೆಗಡೆ

ಕಾರವಾರ: ಮಳೆಗಾಲದಲ್ಲಿ ಹೆಸ್ಕಾಂಗೆ ವಿದ್ಯುತ್ ತಂತಿ, ಕಂಬದ ನಿರ್ವಹಣೆಯೇ ಉತ್ತರ ಕನ್ನಡದಲ್ಲಿ ದೊಡ್ಡ ಸವಾಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಟವರ್ ಮೂಲಕ ವಿದ್ಯುತ್ ತಂತಿ ಜೋಡಿಸಲು ಮುಂದಾಗಿದೆ.

ಪ್ರಾಯೋಗಿಕವಾಗಿ ಕಿರವತ್ತಿಯಿಂದ ಯಲ್ಲಾಪುರ ವರೆಗೆ ಅಂದಾಜು ೨೩ ಕಿಮೀ ಟವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮೂರು ಮಾದರಿಯ ಟವರ್ ಪ್ರಸ್ತಾವನೆ ಹೆಸ್ಕಾಂನಲ್ಲಿದೆ. ಉತ್ತರ ಕನ್ನಡದ ಮಲೆನಾಡಿನ ಪ್ರದೇಶವಿರಲಿ, ಕರಾವಳಿಯ ಭಾಗವಿರಲಿ ಮಳೆ ಬೀಳುವುದು ಹೆಚ್ಚು, ಗಾಳಿಯೂ ಜೋರಾಗಿಯೇ ಬೀಸುತ್ತಿರುತ್ತದೆ. ಹೀಗಾಗಿ ಮರ, ಅದರ ಟೊಂಗೆ ವಿದ್ಯುತ್ ತಂತಿ, ಕಂಬದ ಮೇಲೆ ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಒಂದೆಡೆ ದುರಸ್ತಿಯಾದರೆ ಮತ್ತೊಂದೆಡೆ ಮರ, ಟೊಂಗೆ ಉರುಳಿರುತ್ತದೆ. ಗ್ರಾಮೀಣ ಭಾಗದಲ್ಲಿ ವಾರಗಟ್ಟಲೆ ವಿದ್ಯುತ್ ಸರಬರಾಜು ಇರುವುದೇ ಇಲ್ಲ. ಕಿರವತ್ತಿಯಿಂದ ಯಲ್ಲಾಪುರ ವರೆಗೆ ಟವರ್ ಮೂಲಕ ವಿದ್ಯುತ್ ತಂತಿ ಎಳೆಯಲು ಹೆಸ್ಕಾಂ ಯೋಜನೆ ರೂಪಿಸಿಕೊಂಡಿದೆ.

೩೩ಕೆವಿ ವಿದ್ಯುತ್ ಮಾರ್ಗವಾಗಿದ್ದು, ತಂತಿ ಹಳೆಯದಾಗಿದ್ದು, ಬದಲಿಸಬೇಕಿದೆ. ಕಿರವತ್ತಿ ಯಲ್ಲಾಪುರ ಮಾರ್ಗ ಗೊಂಡಾರಣ್ಯವಾಗಿದೆ. ಇದೇ ಹಳೆ ಪದ್ಧತಿಯಲ್ಲಿ ಕಂಬದ ಮೂಲಕ ತಂತಿ ಎಳೆದರೆ ಪುನಃ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಅಂದಾಜು ₹ ೨.೫ ಕೋಟಿ ವೆಚ್ಚದಲ್ಲಿ ಟವರ್ ನಿರ್ಮಿಸಿ ವಿದ್ಯುತ್ ತಂತಿ ಎಳೆಯಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಹೈಟೆನ್ಶನ್ ಟವರ್ ಮಾದರಿಯಲ್ಲಿ ಇರಲಿದ್ದು, ಸಿಮೆಂಟ್‌ನಲ್ಲಿ ತಯಾರಿಸಿದ ವಿದ್ಯುತ್ ಕಂಬಕ್ಕಿಂತ ಇದು ಎತ್ತರವಾಗಿರಲಿದೆ. ಹೀಗಾಗಿ ಟೊಂಗೆ ತಂತಿಯ ಮೇಲೆ ಬೀಳುವುದು ಕಡಿಮೆಯಾಗಲಿದೆ.

ವಿದ್ಯುತ್ ಪೂರೈಕೆಗೆ ಸಿಮೆಂಟ್ ಕಂಬದ ಬದಲು ಗಟ್ಟಿಮುಟ್ಟಾದ ಇಂತಹ ಟವರ್ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಶೀಘ್ರದಲ್ಲಿ ಕಿರವತ್ತಿ-ಯಲ್ಲಾಪುರ ಮಾರ್ಗದಲ್ಲಿ ಸಿಮೆಂಟ್ ವಿದ್ಯುತ್ ಕಂಬದ ಬದಲಾಗಿದೆ ಟವರ್ ನಿರ್ಮಾಣವಾಗಲಿದೆ.

ಮಳೆ, ಗಾಳಿಯಿಂದ ಉತ್ತರ ಕನ್ನಡದಲ್ಲಿ ಮರ, ಟೊಂಗೆ ಉರುಳಿ ವಿದ್ಯುತ್ ತಂತಿ ತುಂಡಾಗುವುದು, ಕಂಬಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯಲು ಟವರ್ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಕಿರವತ್ತಿಯಿಂದ ಯಲ್ಲಾಪುರ ವರೆಗೆ ನೀಲನಕ್ಷೆ ರೂಪಿಸಿಕೊಳ್ಳಲಾಗಿದೆ. ಇದಲ್ಲದೇ ಕುಮಟಾದ ಮಿರ್ಜಾನ, ಸಿದ್ದಾಪುರದ ಆಡುಕಟ್ಟೆಯಲ್ಲಿ ತಲಾ ೩೩ ಕೆವಿ ಉಪ ಕೇಂದ್ರ(ಗ್ರಿಡ್) ಸ್ಥಾಪನೆ, ಯಲ್ಲಾಪುರ, ಭಟ್ಕಳದಲ್ಲಿ ಹೆಚ್ಚುವರಿ ಟಿಸಿ ಅಳವಡಿಕೆ ಕೂಡಾ ನಡೆಯಲಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ. ರೋಷನ್ ಹೇಳಿದ್ದಾರೆ.

Share this article