ನೈಸರ್ಗಿಕವಾಗಿ ಬೆಳೆಯುವ ಹಣ್ಣು ಅಪರೂಪ । ಬಯಲು ಸೀಮೆಯ ಬಡವರು ಸೇವಿಸುವ ಖರ್ಜೂರಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭವಾರ್ತೆ ಕುಷ್ಟಗಿಬಡವರ ಖರ್ಜೂರ ಎಂದೇ ಪ್ರಖ್ಯಾತಿ ಪಡೆದ ನೈಸರ್ಗಿಕವಾಗಿ ಬೆಳೆಯುವ ಈಚಲು ಹಣ್ಣುಗಳು ಅಪರೂಪವಾಗುತ್ತಿದ್ದು, ಮರ ಅವನತಿಯತ್ತ ಸಾಗುತ್ತಿದೆ.
ಹೌದು. ಗ್ರಾಮೀಣ ಪ್ರದೇಶದ ಹಳ್ಳಗಳ ದಂಡೆ, ನಾಲೆಗಳ ದಂಡೆಯಲ್ಲಿ, ಜೌಗು ಪ್ರದೇಶ ಇರುವ ಕಡೆ ಹೇರಳವಾಗಿ ಈಚಲ ಗಿಡಗಳು ಬೆಳೆಯುತ್ತಿದ್ದವು. ಇತ್ತೀಚೆಗೆ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ಈಚಲ ಗಿಡಗಳ ಸಂತತಿ ತೀರಾ ಕಡಿಮೆಯಾಗಿದೆ. ಈಚಲು ಮರಗಳು ಬಹುಪಯೋಗಿಯಾಗಿದ್ದು, ಈ ಮರದ ಹಣ್ಣುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಬಡವರ ಖರ್ಜೂರ ಎಂದು ಕರೆಯಲಾಗುತ್ತದೆ. ಅವು ಈಗ ಅವನತಿಯ ಅಂಚಿಗೆ ಸರಿಯುತ್ತಿವೆ.ತಾಲೂಕಿನ ಮೆಣಸಗೇರಿ, ಕ್ಯಾದಿಗುಪ್ಪಾ, ಕಡೇಕೊಪ್ಪ, ಕೇಸೂರು, ಬಸಾಪುರ ಸೀಮಾ, ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳ ಹಳ್ಳಗಳ ದಂಡೆಯಲ್ಲಿ ಈಚಲ ಗಿಡಗಳು ಕಾಣಸಿಗುತ್ತವೆ. ಈ ಹಣ್ಣುಗಳು ಖರ್ಜೂರ ಮತ್ತು ಉತ್ತತ್ತಿ ತಳಿಯನ್ನು ಹೋಲುವ ಈಚಲ ಗಿಡಗಳು ವಿಶಿಷ್ಟವಾಗಿವೆ.
ಈಚಲ ಮರಗಳು ತೆಂಗಿನ ಮರಗಳಂತೆ ಬಹುಪಯೋಗಿಯಾಗಿವೆ. ಈಚಲ ಮರದ ಗರಿಗಳಿಂದ ಚಾಪೆ ತಯಾರಿಸಲಾಗುತ್ತಿತ್ತು. ಇತ್ತೀಚೆಗೆ ಈಚಲ ಗರಿಗಳು ದೊರೆಯದೆ ಇರುವುದರಿಂದ ಈಚಲ ಚಾಪೆಗಳು ಸಹಿತ ಅಪರೂಪವಾಗಿವೆ. ಚಾಪೆ ಹೆಣೆಯುವ ಒಂದು ವರ್ಗವೇ ಆಯಾ ಗ್ರಾಮಗಳಲ್ಲಿ ಇರುತ್ತಿತ್ತು. ಒಕ್ಕಲುತನದಲ್ಲಿ ಬಳಕೆಯಾಗುವ ತಟ್ಟೆ, ಹೆಡಗಿ, ಜೆಲ್ಲೆಡಗಿ, ಎತ್ತಿನ ಬಂಡಿಗಳಲ್ಲಿ ಬಳಸುತ್ತಿದ್ದ ಬಗಲು ತಟ್ಟಿಗಳನ್ನು ತಯಾರಿಸಲಾಗುತ್ತಿತ್ತು. ರೈತರು ಧಾನ್ಯಗಳನ್ನು ಶೇಖರಿಸಿ ಇಡಲು ಗುಮ್ಮಿಗಳನ್ನು ಈಚಲ ಬರಲಿನಿಂದ ತಯಾರಿಸಲಾಗುತ್ತಿತ್ತು. ಸ್ಥಳೀಯವಾಗಿಯೇ ದೊರೆಯುತ್ತಿದ್ದ ಕಚ್ಚಾ ವಸ್ತುವಿನಿಂದ ನಾನಾ ವಸ್ತುಗಳನ್ನು ತಯಾರಿಸಿ ಬದುಕು ಸಾಗಿಸುತ್ತಿದ್ದ ಅನೇಕ ಕುಟುಂಬಗಳಿದ್ದವು.ಈಚಲ ಗರಿಗಳಿಂದ ಬಾರಿಗೆಯನ್ನೂ ತಯಾರಿಸಲಾಗುತ್ತಿತ್ತು. ಹಿಂದೆ ಬೆಲ್ಲ ಪ್ಯಾಕ್ ಮಾಡಲು ಈಚಲು ಚಾಪೆಯನ್ನು ಬಳಸಲಾಗುತ್ತಿತ್ತು. ಅನೇಕ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಈಚಲು ಗಿಡಗಳೂ ಇತ್ತೀಚೆಗೆ ಕಣ್ಮರೆಯಾಗುತ್ತಿರುವುದು ಗ್ರಾಮೀಣ ಭಾಗದ ಹಿರಿಯರಲ್ಲಿ ಬೇಸರ ಇದೆ.
ಬಡವರ ಖರ್ಜೂರ:ಈಚಲು ಎಂದರೆ ಹೆಚ್ಚು ಪೌಷ್ಟಿಕಾಂಶಗಳಿರುವ ಬಯಲು ಸೀಮೆಯ ಬಡವರು ಸೇವಿಸುವ ಖರ್ಜೂರ. ಏಪ್ರೀಲ್, ಮೇ ಮತ್ತು ಜೂನ್ ಇದರ ಸುಗ್ಗಿ ಕಾಲ. ಈ ಹಿಂದೆ ಗ್ರಾಮೀಣ ಮಕ್ಕಳು ಬೆಳಗ್ಗೆ, ಸಂಜೆಯಾಗುತ್ತಲೇ ಈಚಲು ಮರ ಹುಡುಕಿಕೊಂಡು ಹೋಗಿ ಉದುರಿದ ಹಣ್ಣುಗಳನ್ನು ಆಯ್ದುಕೊಳ್ಳುತ್ತಿದ್ದರು. ಈ ಹಿಂದೆ ಹಲವರು ಈಚಲು ಕಾಯಿಯ ಗೋನೆಗಳನ್ನು ಕೊಯ್ದುಕೊಂಡು ಬಂದು ಹಣ್ಣು ಮಾಡಿ, ಶಾಲೆ ಮತ್ತು ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮಾರುತ್ತಿದ್ದರು. ಇದರಿಂದ ಉಪ ಜೀವನವೂ ನಡೆಯುತ್ತಿತ್ತು. ಖರ್ಜೂರದಂತೆ ಸಿಹಿಯಾಗಿರುವ ಈಚಲು ಹಣ್ಣು ಸವಿಯಲು ಎಲ್ಲ ವಯೋಮಾನದವರು ಇಷ್ಟಪಡುತ್ತಿದ್ದರು. ಆದರೆ ದಿನ ಕಳೆದಂತೆ ಈಚಲು ಮರಗಳು ಅಳಿವಿನ ಹಾದಿ ಹಿಡಿದಿದ್ದು, ಈಚಲು ಹಣ್ಣುಗಳನ್ನು ತಿನ್ನುವವರ ಜೊತೆಗೆ ಮಾರಾಟ ಕಣ್ಮರೆಯಾಗುತ್ತಿದೆ.
ಕಾಲ ಕ್ರಮೇಣ ಈಚಲು ಮರಗಳು ಕಡಿಮೆಯಾಗುತ್ತಿದ್ದು, ಇಂದಿನ ಪೀಳಿಗೆಯವರು ಈಚಲು ಹಣ್ಣು ಸವಿಯುವುದು ಕಡಿಮೆಯಾಗಿದೆ. ನಮ್ಮ ಮಕ್ಕಳಿಗೆ ಪುಸ್ತಕದಲ್ಲಿ ಫೋಟೊದಲ್ಲಿ ತೋರಿಸುವ ಕಾಲ ಬಂದಿದೆ ಎಂದು ದೋಟಿಹಾಳ ಹಾಗೂ ಕೇಸೂರು ಗ್ರಾಮದ ಯುವಕರಾದ ಶಿವರಾಜ ತಟ್ಟಿ, ನಾಗರಾಜ ಮ್ಯಾಗಲಮನಿ, ಮಂಜುನಾಥ ಅಂಗಡಿ, ಶಶಿಧರ ದೋಟಿಹಾಳ, ಅಮರೇಶ ತಾರಿವಾಳ ತಮ್ಮ ಹಳೆಯ ನೆನಪು ಹಂಚಿಕೊಂಡರು.ನೈಸರ್ಗಿಕವಾಗಿ ಬೆಳೆಯುವಂತಹ ಈಚಲು ಮರದ ಹಣ್ಣುಗಳು ಹಲವು ಔಷಧಿಯ ಗುಣ ಹೊಂದಿದ್ದು ಯುವಕರು ಆಧುನಿಕತೆಯ ಪರಿಣಾಮದಿಂದಾಗಿ ಯುವಕರು ಈಚಲು ಹಣ್ಣುಗಳನ್ನು ತಿನ್ನುವುದು ಕಡಿಮೆ ಮಾಡುತ್ತಿದ್ದು, ಬೇಸರ ಸಂಗತಿಯಾಗಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಕೆ.ವೈ. ಕಂದಕೂರು.