ಅತ್ತಿಗೆ ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಜಾತ್ರೆ

KannadaprabhaNewsNetwork | Published : Dec 16, 2024 12:47 AM

ಸಾರಾಂಶ

ಹಿರಿಯೂರು: ತಾಲೂಕಿನ ಐಮಂಗಲ ಹೋಬಳಿಯ ಸಿ.ಎನ್.ಮಾಳಿಗೆ ಗ್ರಾಮದ ಶ್ರೀ ಅಹೋಬಲ ನರಸಿಂಹ ಸ್ವಾಮಿಯ ಕಾರ್ತಿಕ ಜಾತ್ರಾ ಮಹೋತ್ಸವ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಅತ್ತಿಗೆ ನಾದಿನಿಯರ ಡಿಚ್ಚಿ ಹಬ್ಬ ಕಾರ್ಯಕ್ರಮ ಈ ಜಾತ್ರೆಯ ವಿಶೇಷತೆಯಾಗಿದೆ.

ಹಿರಿಯೂರು: ತಾಲೂಕಿನ ಐಮಂಗಲ ಹೋಬಳಿಯ ಸಿ.ಎನ್.ಮಾಳಿಗೆ ಗ್ರಾಮದ ಶ್ರೀ ಅಹೋಬಲ ನರಸಿಂಹ ಸ್ವಾಮಿಯ ಕಾರ್ತಿಕ ಜಾತ್ರಾ ಮಹೋತ್ಸವ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಅತ್ತಿಗೆ ನಾದಿನಿಯರ ಡಿಚ್ಚಿ ಹಬ್ಬ ಕಾರ್ಯಕ್ರಮ ಈ ಜಾತ್ರೆಯ ವಿಶೇಷತೆಯಾಗಿದೆ.

ಈ ಜಾತ್ರೆಯು ಅತ್ತಿಗೆ ನಾದಿನಿಯರ ಬಾಂಧವ್ಯ ಬೆಸೆಯುವ ಹಬ್ಬವಾಗಿದ್ದು, ಹಬ್ಬದಲ್ಲಿ ಅತ್ತಿಗೆ ನಾದಿನಿಯರು ಮುಂದಲೆ ಹಿಡಿದು ಡಿಚ್ಚಿ ಹೊಡೆಯುವುದು ಈ ಗ್ರಾಮದ ಒಂದು ಪುರಾತನ ಸಂಪ್ರದಾಯವಾಗಿದೆ.

ಒಂದು ಬದಿ ಅತ್ತಿಗೆಯರು, ಇನ್ನೊಂದು ಬದಿ ನಾದಿನಿಯರು ಎದುರು ಬದುರು ನಿಂತು ಓಡೋಡಿ ಬರುತ್ತಾ ತಮ್ಮ ಮುಂದಲೆಯಿಂದ ಡಿಚ್ಚಿ ಹೊಡೆಯುವುದು ಸಂಪ್ರದಾಯವಾಗಿದ್ದು, ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದ್ದು, ಈಗಲೂ ಮುಂದುವರೆದಿದೆ.

ನಮ್ಮ ಪೂರ್ವಿಕರು ಅತ್ತಿಗೆ ನಾದಿನಿಯರ ಮಧ್ಯ ಮನಸ್ಥಾಪ ಬರದೆ, ಪರಸ್ಪರ ಚೆನ್ನಾಗಿ ಇರಲೆಂಬ ಉದ್ದೇಶದಿಂದ ಮುಂದಲೆಯಿಂದ ಒಬ್ಬರಿಗೊಬ್ಬರು ಡಿಚ್ಚಿ ಹೊಡೆಸುತ್ತಾರೆ. ಇದರಿಂದ ಸಂಬಂಧಗಳು ಉತ್ತಮವಾಗಿರುವುದಲ್ಲದೇ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ ಎಂಬ ನಂಬಿಕೆಯಿದ್ದು ಈ ಆಚರಣೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ವಿವಾಹವಾಗಿ ರಾಜ್ಯದ ಬೇರೆ ಬೇರೆ ಕಡೆ ನೆಲೆಸಿದ್ದರೂ, ಸಹ ಗ್ರಾಮದ ಹೆಣ್ಣು ಮಕ್ಕಳು ಈ ಜಾತ್ರೆಯ ಸಂದರ್ಭದಲ್ಲಿ ಗ್ರಾಮಕ್ಕೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಡಿಚ್ಚಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಾರೆ. ಇಲ್ಲವಾದರೆ ಮನೆಯಲ್ಲಿ ಅಶಾಂತಿ, ತೊಂದರೆಯಾಗುತ್ತದೆ ಎಂಬ ಪ್ರತೀತಿ ಇದೆ ಎಂದು ಗ್ರಾಮಸ್ಥರಾದ ವಿ.ಸಿ.ರುದ್ರಪ್ಪ, ಟಿ.ಎನ್.ವೀರೇಶ್, ಹರ್ತಿವೀರನಾಯಕ, ತಿಪ್ಪೇಸ್ವಾಮಿ, ಟಿ.ನರಸಿಂಹಮೂರ್ತಿ, ಎಸ್.ಲೋಕೇಶ್ ಮಾಹಿತಿ ಹಂಚಿಕೊಂಡರು.

ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ:

ಶ್ರೀ ಅಹೋಬಲ ನರಸಿಂಹ ಸ್ವಾಮಿ ಹಾಗೂ ಶ್ರೀ ವೀರಗಾರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಮೂರು ದಿನಗಳ ಕಾಲ ನಡೆಸಲಾಯಿತು. ಶುಕ್ರವಾರ ಕುಂಟ ಹಳ್ಳದಲ್ಲಿ ಗಂಗೆ ತಂದು ಊರ ಮುಂದಿನ ಹೆಬ್ಬಾಗಿಲಿನಲ್ಲಿ ಗಂಗಾ ಪೂಜೆ ನೆರವೇರಿಸಿ ಸಂಜೆ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಶನಿವಾರ ಗುಡಿಕಟ್ಟಿನ ಅಣ್ಣತಮ್ಮಂದಿರಿಂದ ಅನ್ನಸಂತರ್ಪಣಾ ಕಾರ್ಯಕ್ರಮ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಭಾನುವಾರ ಮಣೇವು, ಟಗರಿನ ಕಾಳಗ, ಅತ್ತಿಗೆ ನಾದಿನಿಯರ ಡಿಚ್ಚಿ ಕಾರ್ಯಕ್ರಮದೊಂದಿಗೆ ಮೂರು ದಿನಗಳ ಕಾರ್ತಿಕ ಪೂಜಾ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.

ಜಾತ್ರೆಯ ಅಂಗವಾಗಿ ಶ್ರೀ ವೀರಗಾರಸ್ವಾಮಿ ಹಾಗೂ ಶ್ರೀ ಅಹೋಬಲ ನರಸಿಂಹಸ್ವಾಮಿಯನ್ನು ವಿವಿಧ ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂಭಾಗಕ್ಕೆ ಹಸಿರು ಚಪ್ಪರ ಹಾಕಿ ಶೃಂಗರಿಸಲಾಗಿತ್ತು, ಮಂಗಳವಾದ್ಯಗಳು ಮೊಳಗಿದವು. ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನ ಡಿಚ್ಚಿ ಹಬ್ಬದಲ್ಲಿ ಪಾಲ್ಗೊoಡು ಸಂಭ್ರಮಿಸಿದರು.

Share this article