ಕಪಾಟಿನ ಒಳಗೆ ಇಟ್ಟಂತಹ ಪುಸ್ತಕ ನುಸಿ ಹತ್ತುತ್ತಿದೆ
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗವಿಮಠದ ಶ್ರೀ ಕಳವಳಕನ್ನಡಪ್ರಭ ವಾರ್ತೆ ಕೊಪ್ಪಳ
ಪುಸ್ತಕದಿಂದ ಜ್ಞಾನದ ಸಂಪತ್ತು ಸಾಧ್ಯ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಶ್ರೀ ಅಡಿವಿಬಸಯ್ಯ ತೋಟದ ಶಿಕ್ಷಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀ ಕನ್ನಡಾಂಬೆ ಯುವಕರ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ಡಾ. ಷಣ್ಮುಖಯ್ಯ ತೋಟದ ಅವರ ಸಾಧನ ಸಂಪನ್ನ ಅಭಿನಂದನಾ ಗ್ರಂಥ ಹಾಗೂ ಅಮೃತ ಘಳಿಗೆ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು, ಸತತ ಪ್ರಯತ್ನದಿಂದ ಮನುಷ್ಯನ ಜೀವನದಲ್ಲಿ ಹೊಸತನ ಸಾಧ್ಯ. ಸತತ ಪ್ರಯತ್ನ ಹಾಗೂ ಹೊಸತನಕ್ಕೆ ಓದುವುದು ಬಹಳ ಮುಖ್ಯ. ಆದರೆ ಸದ್ಯದ ಕಾಲಘಟ್ಟದಲ್ಲಿ ಮೊಬೈಲ್ ಹಾವಳಿಯಿಂದ ಓದುವುದು ಕಡಿಮೆ ಆಗಿದೆ. ಮೊಬೈಲ್ ಹಾವಳಿಯಿಂದ ಪುಸ್ತಕ ತಾನು ಸಾಯುತ್ತಿದೆ ಎನ್ನುತ್ತಿದೆ. ಕಪಾಟಿನ ಒಳಗೆ ಇಟ್ಟಂತಹ ಪುಸ್ತಕ ನುಸಿ ಹತ್ತುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
₹ಎರಡು ಇದ್ದರೆ ₹ಒಂದು ಆಹಾರಕ್ಕಾಗಿ ಇನ್ನೊಂದು ರೂಪಾಯಿ ಪುಸ್ತಕಕ್ಕಾಗಿ ಖರ್ಚು ಮಾಡಬೇಕು. ಆಹಾರಕ್ಕಾಗಿ ಖರ್ಚು ಮಾಡಿದ ದುಡ್ಡು ನಿಮ್ಮನ್ನು ಬದುಕಿಸಿದರೆ, ಪುಸ್ತಕ ತೆಗೆದುಕೊಂಡದ್ದು ನಿಮ್ಮನ್ನು ಹೇಗೆ ಬದುಕಬೇಕೆಂಬುವುದನ್ನು ಕಲಿಸುತ್ತದೆ ಎಂದರು.ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯ. ಡಾ. ಷಣ್ಮುಖಯ್ಯ ತೋಟದ ಅವರು ಮೈನಹಳ್ಳಿ ಎಂಬ ಚಿಕ್ಕ ಗ್ರಾಮದಿಂದ ಹೋಗಿ ಬೆಂಗಳೂರಿನಲ್ಲಿ ಶಿಕ್ಷಣ, ಸಾಹಿತ್ಯ, ಕಲಾ ರಂಗದಲ್ಲಿ ಸೇವೆ ಸಲ್ಲಿಸಿ ದೊಡ್ಡ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು.
ಮೈನಹಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಂಥದ ಸಂಪಾದಕ ಡಾ. ಎಂ. ಜಯಪ್ಪ ವಹಿಸಿದ್ದರು. ಪ್ರಾಂಶುಪಾಲ ಎ.ಎಂ. ಆರ್ ಕೊಟ್ರಯ್ಯ, ಡಾ. ಬಿ.ಆರ್. ಶ್ರೀಕಂಠ, ಮಹಾಂತೇಶ ಮಲ್ಲನಗೌಡ್ರು, ಉಪನ್ಯಾಸಕರಾದ ಡಾ. ಭಾಗ್ಯ ಜ್ಯೋತಿ, ಮಂಜುನಾಥ ಚಿತ್ರಗಾರ, ವಿ.ಎಸ್. ಭೂಸನೂರಮಠ, ಎಲ್.ಎಫ್. ಪಾಟೀಲ್, ಮಹಾಂತೇಶ ಪಾಟೀಲ್, ಜಿ.ಎಸ್. ಗೋನಾಳ, ಎಂ. ಸಾದಿಕ್ಅಲಿ, ಡಾ. ಬಿ.ಎನ್. ಹೊರಪೇಟೆ, ಉದಯ ಎಸ್. ತೋಟದ, ಜಗದೀಶ ಭಿಕ್ಷಾವತಿಮಠ ಇತರರಿದ್ದರು. ಡಾ. ಷಣ್ಮುಖಯ್ಯ ತೋಟದ ತಮ್ಮ ತಾಯಿಯ ಸವಿ ನೆನಪುಗಾಗಿ ಶ್ರೀಮತಿ ಗಂಗಮ್ಮ ಅಡಿವಿಬಸಯ್ಯ ಸ್ಮಾರಕ ಪ್ರಶಸ್ತಿಯನ್ನು ಅನೇಕ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ನೀಡಿ ಗೌರವಿಸಿದರು. ಜನಪದ ಕಲಾವಿದ ಗುರುರಾಜ ಹೊಸಕೋಟೆ, ರಂಗಭೂಮಿ ಕಲಾವಿದೆ ಮಾಲತಿ ಮೈಸೂರು ಇತರರಿದ್ದರು.