ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಅನಾದಿ ಕಾಲದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಮಹಿಳೆ ಸಾಧನೆಗಳನ್ನು ಮಾಡುತ್ತಲೇ ಬಂದಿದ್ದಾಳೆ. ಅವಳಿಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಅವಕಾಶ ಸಿಕ್ಕ ಕಡೆಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸುತ್ತಲೇ ಬಂದಿದ್ದಾಳೆ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಉಮಾ ಅಕ್ಕಿ ಅಭಿಪ್ರಾಯ ಪಟ್ಟರು.
ಬಾಗಲಕೋಟೆಯ ವಿದ್ಯಾಗಿರಿ-ರೂಪಲ್ಯಾಂಡ್‌ನ ಸಿದ್ದಿ ವಿನಾಯಕನ ಗುಡಿಯಲ್ಲಿ ಸ್ನೇಹಿತೆಯರ ಬಳಗದವರು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಮಹಿಳೆಯ ಸಾಮಾಜಿಕ ಸ್ಥಿತಿಗಳು ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದವು. ನಂತರ ಬರಬರುತ್ತ ಈ ಅಸಮಾನತೆಯ ವಿರುದ್ಧ ಕೂಗು ಸಹ ಎದ್ದಿತು. 12 ನೇ ಶತಮಾನದಲ್ಲಿ ಮಹಿಳೆಯರಿಗೆ ನೀಡಿದ ಸ್ಥಾನಮಾನದ ಫಲವಾಗಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾದವು. ಆಗ ಸಾಕಷ್ಟು ಜನ ವಚನಕಾರ್ತಿಯರು ಬೆಳಕಿಗೆ ಬಂದರು ಎಂದರು.ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಲ್ಲಲ್ಲಿ ಕೆಲವು ಹೆಣ್ಣುಮಕ್ಕಳು ರಾಣಿಯರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಬೆಳೆದು ಬಂದರು. ಅವರ ಶಕ್ತಿ, ಸಾಮರ್ಥ್ಯ ನೋಡಿದರೆ ಹೆಣ್ಣು ಯಾವುದಕ್ಕೂ ಕಡಿಮೆ ಇಲ್ಲ ಎನ್ನಿಸುತ್ತದೆ. ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಹೆಣ್ಣು ತನ್ನ ಸಾಧನೆ ತೋರಿಸುತ್ತಲೇ ಬಂದಿದ್ದಾಳೆ ಎಂದು ಹೇಳಿದರು.
ಪ್ರತಿಭಾ ನಾಯ್ಕರ ಮಾತನಾಡಿ, ಇಂದು ಹೆಣ್ಣು - ಗಂಡು ನಡುವಿನ ಭೇದ ಆದಷ್ಟು ಕಡಿಮೆ ಆಗಿದೆ. ಆದರೂ, ಹೆಣ್ಣುಮಕ್ಕಳಲ್ಲಿಯೇ ಆ ಭೇದ ಇನ್ನೂ ಉಳಿದಿರುವುದರಿಂದ ವಿಷಾದವೆನಿಸುತ್ತದೆ. ಮಹಿಳೆಗೆ ಪ್ರೋತ್ಸಾ ನೀಡಿದರೆ ಅವಳು ಅಪ್ರತಿಮ ಸಾಧನೆ ಮಾಡಬಲ್ಲಳು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ಭಾರತಿ ಲೋಹಾರ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೀತಾ ವಾಲಿ, ಪೂರ್ಣಿಮಾ ಮತ್ತು ಪೂಜಾ ಹಂದ್ರಾಳ ಇದ್ದರು. ಸೌಮ್ಯಾ ನಂದವಾಡಗಿ ಸ್ವಾಗತಿಸಿದರು. ಜ್ಯೋತಿ ಕುಮುಟಗಿ ಪ್ರಾರ್ಥಸಿದರು. ಮಹಾದೇವಿ ಶೆಟ್ಟರ ಪರಿಚಯಿಸಿದರು. ವೀಣಾ ಬೇವೂರ ವಂದಿಸಿದರು. ಅನ್ನಪೂರ್ಣ ಬಾಪನಾಳ ನಿರೂಪಿಸಿದರು.