ಬದುಕಿಗೆ ಆಸರೆಯಾದ ಹೈನುಗಾರಿಕೆ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ನೆಲ್ಯಹುದಿಕೇರಿ ಗ್ರಾಮದ‌ ಎಂ.ಜಿ‌. ಕಾಲೋನಿ‌ ನಿವಾಸಿ ಲೀಲಾಮ ಎಂಬಾಕೆ ಕಳೆದ 20 ವರ್ಷಗಳಿಂದ‌ ತನ್ನ ಮನೆಯ‌ಲ್ಲಿ ಸಾಕು ಪ್ರಾಣಿಗಳಾದ ಹಸು, ಮೇಕೆ, ಕೋಳಿಗಳನ್ನು ಸಾಕಿ ಜೀವನ‌ ಸಾಗಿಸುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

ಸುಬ್ರಮಣಿ ಸಿದ್ದಾಪುರಕನ್ನಡಪ್ರಭ ವಾರ್ತೆ ಸಿದ್ದಾಪುರ

ಆಸರೆ ಇಲ್ಲದೆ ಬದುಕಿದ ಜೀವಕ್ಕೆ ಆಸರೆಯಾದ ಸಾಕು ಪ್ರಾಣಿಗಳು. ಸಮಗ್ರ ಪಶು ಸಂಗೋಪನೆಯಲ್ಲಿ ನೆಮ್ಮದಿಯ ಜೀವನ‌ ಸಾಗಿಸುತ್ತಿರುವ ವಿಧವೆ.ನೆಲ್ಯಹುದಿಕೇರಿ ಗ್ರಾಮದ‌ ಎಂ.ಜಿ‌. ಕಾಲೋನಿ‌ ನಿವಾಸಿ ಲೀಲಾಮ ಎಂಬಾಕೆ ಕಳೆದ 20 ವರ್ಷಗಳಿಂದ‌ ತನ್ನ ಮನೆಯ‌ಲ್ಲಿ ಸಾಕು ಪ್ರಾಣಿಗಳಾದ ಹಸು, ಮೇಕೆ, ಕೋಳಿಗಳನ್ನು ಸಾಕಿ ಜೀವನ‌ ಸಾಗಿಸುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

* 25 ಸೆಂಟ್ ಜಾಗದಲ್ಲಿ ಹೈನುಗಾರಿಕೆ

ಎಂ.ಜಿ. ಕಾಲೋನಿಯಲ್ಲಿ ಸಣ್ಣ ಮನೆಯೊಂದಿಗೆ ವಾಸವಿರುವ ಅವರು, 25 ಸೆಂಟ್ ಜಾಗದಲ್ಲಿ‌ ಹಸುಗಳು, ಮೇಕೆ ಹಾಗೂ ಕೋಳಿಗಳನ್ನು ಸಾಕುತ್ತಿದ್ದಾರೆ. ಪ್ರಾರಂಭದಲ್ಲಿ 2 ಹಸುವನ್ನು ಸಾಕಿದ ಈಕೆ ನಂತರ ಏಳು ಹಸುಗಳನ್ನು ಹೊಂದಿದರು. ಪ್ರಸ್ತುತ ಗಬ್ಬದ ಎರಡು ಹಸು ಹಾಗೂ ಒಂದು ಕರುವನ್ನು ಹೊಂದಿದ್ದಾರೆ. ಪ್ರತಿ‌ದಿನ 15-30 ಲೀಟರ್ ಹಸುವಿನ‌ ಹಾಲನ್ನು ಪಡೆಯುತ್ತಿದ್ದು, ಪ್ರತೀ ಲೀಟರ್‌ಗೆ 40 ರು. ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಸ್ಥಳೀಯ ಮನೆಯವರು ಈಕೆಯ ಗ್ರಾಹಕರಾಗಿರುವುದು ಹಾಲನ್ನು ಸುಲಭವಾಗಿ ತಲುಪಿಸಲು ಸಾಧ್ಯವಾಗಿದೆ. ಇದರೊಂದಿಗೆ ವರ್ಷಕ್ಕೆ ಎರಡರಿಂದ ಮೂರು ಲೋಡುಗಳಷ್ಟು ಸೆಗಣಿಗೊಬ್ಬರ ದೊರಕುತ್ತಿದ್ದು, ಒಂದು ಲೋಡಿಗೆ 10 ಸಾವಿರ ರು.ನಂತೆ ಮಾರಾಟ ಮಾಡಲಾಗುತ್ತದೆ.ಅಲ್ಲದೆ ಅವರ ಬಳಿ ಜಮುನಾ ಪ್ಯಾರಿ ಹಾಗೂ ಮಲಬಾರಿ ತಳಿಯ ಮೇಕೆಗಳಿದ್ದು, ಎರಡು ಮೇಕೆಗಳಿಂದ ಶುರುವಾದ ಸಾಕಾಣಿಕೆಯು ಈಗ 13 ಮೇಕೆ ವರೆಗೆ ಬಂದಿದ್ದು, ಉತ್ತಮ ಲಾಭ ದೊರಕುತಿದೆ.* ಮೊಟ್ಟೆ ಮಾರಿ ಸಾಲ ತೀರಿಸಿದ ಮಹಿಳೆಹಸು ಹಾಗೂ ಕುರಿ ಸಾಕಾಣಿಕೆಯಲ್ಲಿ ತೊಡಗಿದ ಲೀಲಾಮ ಕುಕ್ಕುಟೋದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ. ದೇಶೀ ತಳಿ ಎಂದೇ ಖ್ಯಾತಿಯ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಿ ಕೋಳಿಗಳನ್ನು ಸಾಕುತ್ತಿದ್ದು, 70ಕ್ಕೂ ಅಧಿಕ‌‌ ಸಂಖ್ಯೆಯಲ್ಲಿ ಹೇಂಟೆ ಕೋಳಿವೆ. ಪ್ರತಿನಿತ್ಯ 20ರಿಂದ 30 ಮೊಟ್ಟೆಗಳು ದೊರಕುತ್ತಿದೆ. ಅಲ್ಲದೆ ಹುಂಜ ಕೋಳಿ ಸೇರಿದಂತೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ನಾಟಿ ಕೋಳಿ ಮೊಟ್ಟೆಗೆ ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯರು ಈಕೆಯ ಮನೆಗೆ ಆಗಮಿಸಿ ಮೊಟ್ಟೆಗಳನ್ನು ಖರೀದಿಸುತ್ತಾರೆ. ಒಂದು ನಾಟಿ‌ ಕೋಳಿ ಮೊಟ್ಟೆಗೆ 12 ರು. ದೊರೆಯುತ್ತದೆ. ಈಕೆ ನಾಟಿಕೋಳಿಗಳನ್ನು ಖರೀದಿಸದೇ ಮನೆಯಲ್ಲಿ ಲಭ್ಯವಿರುವ ಕೋಳಿ ಮೊಟ್ಟೆಗಳಿಂದಲೇ ಮರಿ ಮಾಡುವ ಮೂಲಕ ಕೋಳಿಗಳನ್ನು ಸಾಕುತ್ತಿದ್ದಾರೆ. ದೇವಸ್ಥಾನಕ್ಕೆ ಕೋಳಿಗಳನ್ನು ಹರಕೆ ಹೊತ್ತುಕೊಂಡವರು, ನಾಟಿ ಕೋಳಿ ಖರೀದಿಸಲು ದಿನ‌‌ ನಿತ್ಯ ಈಕೆಯನ್ನು ಹುಡುಕಿ ಬರುತ್ತಾರೆ. ಅಲ್ಲದೆ ಕಳೆದ ಒಂದು ವರ್ಷಗಳಲ್ಲಿ ಕೋಳಿ ಮೊಟ್ಟೆ ಮಾರಿ ಬಂದ ಹಣದಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಲೀಲಾಮ.* ಹೈನುಗಾರಿಕೆಗೆ ಪ್ರೋತ್ಸಾಹ ನೀಡದ ಗ್ರಾ.ಪಂ:ಯಾರ ಆಸರೆ ಇಲ್ಲದೆ ತನ್ನ ದುಡಿಮೆಯಿಂದಲೇ ಬದುಕುತ್ತಿರುವ ಲೀಲಾಮ‌ ಎಂಬಾಕೆಯು ಕಳೆದ ಹಲವಾರು ವರ್ಷಗಳಿಂದ ಕೊಟ್ಟಿಗೆಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಕದ ತಟ್ಟಿ ಮನವಿ ಪತ್ರ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾ.ಪಂ. ವತಿಯಿಂದ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ವಿವಿಧ ಯೋಜನೆ ಮೂಲಕ ಸಹಾಯ ಧನ ನೀಡಬೇಕಾದ ಸ್ಥಳೀಯ ಪಂಚಾಯಿತಿ ಈಕೆಯ ಮನವಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇಂದಿಗೂ ಲೀಲಾಮ ಕುಸಿಯುವ ಹಂತಕ್ಕೆ ತಲುಪಿರುವ ಕೊಟ್ಟಿಗೆ ಹಾಗೂ ಸಣ್ಣದಾದ ಮೇಕೆ ಗೂಡುಗಳಲ್ಲೇ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಕೋಳಿ ಗೂಡು ಕೂಡ ಸಣ್ಣದಾಗಿರುವ ಹಿನ್ನೆಲೆಯಲ್ಲಿ ಕೋಳಿಗಳು ಕಾಫಿ ಗಿಡ ಹಾಗೂ ಮನೆಯ ಜಗಲಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತಿದೆ.

ಹಸು, ಮೇಕೆ ಹಾಗೂ ಕೋಳಿಗಳಿಂದ ವಾರ್ಷಿಕವಾಗಿ ಉತ್ತಮ ಲಾಭ ಗಳಿಸಿದ್ದೇನೆ. ಆದರೆ ಸಿಕ್ಕ ಲಾಭ ಮಗನ‌ ಚಿಕಿತ್ಸೆಗೆ ವಿನಿಯೋಗಿಸಿದ್ದೇನೆ. ಲಕ್ಷ ರು. ಖರ್ಚು ಮಾಡಿದ್ದರೂ ನನ್ನ ಮಗನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮನೆಯ‌ ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿದೆ. ಕೊಟ್ಟಿಗೆಯೂ ಕೂಡ ಬಿರುಕು ಬಿಟ್ಟಿದೆ. ಸರ್ಕಾರದಿಂದ ಕೊಟ್ಟಿಗೆ ನಿರ್ಮಿಸಲು ಸಹಾಯ ಧನ ನೀಡುತ್ತಿದ್ದು, ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಕೊಟ್ಟಿಗೆ ನಿರ್ಮಾಣಕ್ಕೆ ಅನುದಾನ ನೀಡಿದರೆ ಇನ್ನಷ್ಟು ಹಸು, ಕುರಿಗಳನ್ನು ಸಾಕುತ್ತೇನೆ.

। ಲೀಲಾಮ, ಮಿಶ್ರ ಪಶುಸಂಗೋಪನೆ ಮಾಡುತ್ತಿರುವ ಮಹಿಳೆ.ಸಮಗ್ರ ಹೈನುಗಾರಿಕೆಗೆ ಇಲಾಖೆಯು ಪ್ರೋತ್ಸಾಹ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಶೇ.50 ಸಬ್ಸಿಡಿ ಲಭ್ಯವಿದೆ. ಕನಿಷ್ಟ ಎರಡು ಹಸುಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ 28 ಸಾವಿರ ರು. ಸಹಾಯ ಧನ ಲಭ್ಯವಿದೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ 43 ಸಾವಿರ ರು. ಲಭ್ಯವಿದೆ. ಈ ಎಲ್ಲ ಯೋಜನೆಗಳು ಎನ್‌ಎಂಆರ್ ಯೋಜನೆಯಡಿಯಲ್ಲಿ ದೊರಕಲಿದೆ. ಹೆಚ್ಚಿನ ಮಾಹಿತಿಗೆ ಪಶುಸಂಗೋಪನ ಇಲಾಖೆಯನ್ನು ಸಂಪರ್ಕಿಸಿ.। ಡಾ. ಲಿಂಗರಾಜ್ ದೊಡ್ಡಮನಿ, ಉಪನಿರ್ದೇಶಕರು,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಡಿಕೇರಿ ಕೊಡಗು.

Share this article