- ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರಿಗೆ ಮೊದಲು ಒಳಮೀಸಲಾತಿ ನೀಡಲಿ: ಆಲೂರು ನಿಂಗರಾಜ
- ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮಾದಿಗ ಜಾಗೃತಿ ಸಮಿತಿ ಪದಾಧಿಕಾರಿಗಳು, ಮುಖಂಡರು, ಸಮಾಜ ಬಾಂಧವರ ಹಕ್ಕೊತ್ತಾಯ ಅರ್ಪಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧರಿಸಿ ಒಳಮೀಸಲಾತಿ ಕಲ್ಪಿಸುವ ಬದಲಿಗೆ ಇದೀಗ ಮತ್ತೊಂದು ಆಯೋಗ ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇದು ಖಂಡನೀಯವಾಗಿದ್ದು, ತಕ್ಷಣವೇ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಮಾದಿಗ ಜಾಗೃತಿ ಸಮಿತಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮಾದಿಕ ಜಾಗೃತಿ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು, ಸಮಾಜ ಬಾಂಧವರು ಮನವಿ ಅರ್ಪಿಸಿದರು.ಮಾದಿಗ ಮಹಾಸಭಾ ರಾಜ್ಯ ಉಪಾಧ್ಯಕ್ಷ, ಸಮಾಜದ ಹಿರಿಯ ಮುಖಂಡ ಆಲೂರು ನಿಂಗರಾಜ ಈ ಸಂದರ್ಭ ಮಾತನಾಡಿ, ಮಾದಿಗ ಸಮುದಾಯ 3 ದಶಕಗಳಿಂದಲೂ ಒಳಮೀಸಲಾತಿಗಾಗಿ ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಹೋರಾಟಗಳ ಫಲವಾಗಿ 2000ರಿಂದ 2004ರ ಅವಧಿಯಲ್ಲಿದ್ದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಮ್ಮ ಕೂಗಿಗೆ ಸ್ಪಂದಿಸಿ, ನಿಖರ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿತ್ತು ಎಂದರು.
ನ್ಯಾ.ಸದಾಶಿವ ಆಯೋಗವು ನೂರಾರು ಕೋಟಿ ರು.ಗಳನ್ನು ವೆಚ್ಚ ಮಾಡಿ, ನಿಖರವಾದ ವರದಿ ತಯಾರಿಸಿತ್ತು. ಅನಂತರ ಡಿ.ವಿ.ಸದಾನಂದ ಗೌಡ ನೇತೃತ್ವದ ಬಿಜೆಪಿ ಸರ್ಕಾರವು ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಹಲವಾರು ಸಮಸ್ಯೆಗಳ ನೆಪವೊಡ್ಡಿದ್ದರಿಂದ ವರದಿ ಮೂಲೆಗುಂಪಾಯಿತು. ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಮಾದಿಗ ಸಮುದಾಯದ ನ್ಯಾಯಕ್ಕೋಸ್ಕರ ಮಾಧುಸ್ವಾಮಿ ನೇತೃತ್ವದ ಸಮಿತಿ ರಚಿಸಿತು. ಮಾಧುಸ್ವಾಮಿ ನೇತೃತ್ವದ ಸಮಿತಿ ನ್ಯಾ.ಸದಾಶಿವ ಆಯೋಗದ ವರದಿಯ ಎಲ್ಲ ದತ್ತಾಂಶಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರ ಪರಿಣಾಮ ಬಸವರಾಜ ಬೊಮ್ಮಾಯಿ ಸರ್ಕಾರ ಶೇ.2ರಷ್ಟು ಮೀಸಲಾತಿ ಹೆಚ್ಚಿಸಿತ್ತು. ಮಾದಿಗ ಸಮುದಾಯಕ್ಕೆ ಶೇ.6, ಛಲವಾದಿ ಸಮಾಜಕ್ಕೆ ಶೇ.5.5., ಕೊಲಂಭೋ ಜಾತಿಗಳಿಗೆ ಶೇ.4 ಹಾಗೂ ಇತರೆ ಸಣ್ಣಪುಟ್ಟ ಜಾತಿಗಳಿಗೆ, ಸಮುದಾಯಗಳಿಗೆ ಶೇ.1.5ರಂತೆ ನ್ಯಾಯ ಸಮ್ಮತವಾಗಿ ಮೀಸಲಾತಿ ಹಂಚಿಕೆ ಮಾಡಿತ್ತು ಎಂದು ಅವರು ವಿವರಿಸಿದರು.ಸಮಾಜದ ಮುಖಂಡ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ ಮಾತನಾಡಿ, ಸಮಾಜವಾದಿ ಹಿನ್ನೆಲೆಯಿಂದ ಬಂದ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತೇವೆಂದೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸನ್ನು ನಂಬಿ, ಮಾದಿಗ ಸಮುದಾಯ ಕಳೆದ ಚುನಾವಣೆಗಳಲ್ಲಿ ನಿಮ್ಮನ್ನು, ನಿಮ್ಮ ಪಕ್ಷವನ್ನೇ ನಂಬಿ, ಗೆಲ್ಲಿಸಿದೆ. ಆದರೆ, ನೀವು, ನಿಮ್ಮ ಸರ್ಕಾರವು ನಮ್ಮ ಬೇಡಿಕೆಗಳನ್ನು ಲಘುವಾಗಿ ಪರಿಗಣಿಸುತ್ತಿದ್ದೀರಿ. ಇದು ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಈಗಲೂ ಸಹ ಮೂರು ಕ್ಷೇತ್ರಗಳ ಉಪ ಚುನಾವಣೆ ವೇಳೆ 3 ತಿಂಗಳ ಸಮಯದಲ್ಲಿ ಹೊಸದಾಗಿ ಆಯೋಗ ರಚಿಸಿ, ಒಳಮೀಸಲಾತಿ ಜಾರಿ ಮಾಡುತ್ತೇವೆಂಬ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಸಮಾಜದ ಮುಖಂಡರಾದ ಎಚ್.ಸಿ.ಗುಡ್ಡಪ್ಪ, ಕೆಟಿಜೆ ನಗರ ಎಂ.ರವಿ, ಹೆಗ್ಗೆರೆ ರಂಗಪ್ಪ, ಜಯಪ್ರಕಾಶ, ಎಂ.ಚಂದ್ರಪ್ಪ, ಜಿ.ಎಸ್. ನಾಗೇಂದ್ರಪ್ಪ, ಆವರೆಗೆರೆ ಚಂದ್ರು, ಆವರಗೆರೆ ನಾಗರಾಜ ಇತರರು ಇದ್ದರು.- - -
ಬಾಕ್ಸ್ * ಕಿವಿ ಮೇಲೆ ಹೂವಿಡುವ ಸಿಎಂ ಸಿದ್ದರಾಮಯ್ಯನಮ್ಮ ಜನ ಇನ್ನೂ ಯಾವ ಕಾಲದಲಿದ್ದಾರೋ ಅರ್ಥವಾಗುತ್ತಿಲ್ಲ. 3 ದಶಕದಿಂದ ಹಲವಾರು ಆಯೋಗ, ಸಮಿತಿಗಳು ರಚನೆಯಾಗಿದ್ದಾಗಿದೆ. ನೂರಾರು ಕೋಟಿ ರು. ಖರ್ಚಾಗಿದ್ದುದು ಇದೆ. ಹತ್ತಾರು ಜನ ಒಳ ಮೀಸಲಾತಿಗಾಗಿ ಪ್ರಾಣ ಕಳೆದುಕೊಂಡಿದ್ದು ಆಗಿದೆ. ಶಿಕ್ಷಣ, ಸರ್ಕಾರಿ ನೌಕರ, ಸಾಮಾಜಿಕ ನ್ಯಾಯದಿಂದ ಮಾದಿಗರು ವಂಚಿತರಾಗಿದ್ದೇವೆ. ಈಗ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ವಿಚಾರಕ್ಕೆ ಮತ್ತೊಂದು ಆಯೋಗ ರಚಿಸಿ, ನಿಮಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುತ್ತೇವೆಂದು ನಮ್ಮ ಜನರ ಕಿವಿ ಮೇಲೆ ಹೂವುಗಳನ್ನು ಇಡುತ್ತಿದ್ದಾರೆ. ಸಿಎಂ ಹೇಳಿಕೆ ಹಿಂದಿನ ಮರ್ಮವನ್ನೇ ಅರಿಯಲಾಗದ ನಮ್ಮ ಜನರು ಅದೇನು ಸನ್ಮಾನ ಮಾಡಿದ್ದೇ ಮಾಡಿದ್ದು. ಇದು ದುರಂತ ಎಂದು ಆಲೂರು ನಿಂಗರಾಜ ಅಸಮಾಧಾನ ವ್ಯಕ್ತಪಡಿಸಿದರು.- - - -29ಕೆಡಿವಿಜಿ1:
ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಜಾಗೃತಿ ಸಮಿತಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.