ಮೂಢನಂಬಿಕೆ ತೊರೆದು ಪ್ರಗತಿಯತ್ತ ದಾಪುಗಾಲಿಡಿ: ಅನ್ನದಾನೇಶ್ವರನಾಥ ಸ್ವಾಮೀಜಿ

KannadaprabhaNewsNetwork | Published : Apr 14, 2025 1:19 AM

ಸಾರಾಂಶ

ಧರ್ಮಗಳ ನಡುವೆ ಕಂದಕ ಧರ್ಮ ಸೃಷ್ಟಿಸುವುದಿಲ್ಲ. ಯಾವ ಮತ ಧರ್ಮವೂ ದ್ವೇಷದ ಸಿದ್ಧಾಂತ ಪ್ರತಿಪಾದಿಸಿಲ್ಲ. ವ್ಯಕ್ತಿಗಳ ನಡುವಿನ ದ್ವೇಷಗಳನ್ನೇ ಧರ್ಮದ ನಡುವಿನ ದ್ವೇಷಗಳೆಂದು ಬಿಂಬಿಸಲಾಗುತ್ತಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಧರ್ಮಗಳ ನಡುವೆ ಕಂದಕ ಧರ್ಮ ಸೃಷ್ಟಿಸುವುದಿಲ್ಲ. ಯಾವ ಮತ ಧರ್ಮವೂ ದ್ವೇಷದ ಸಿದ್ಧಾಂತ ಪ್ರತಿಪಾದಿಸಿಲ್ಲ. ವ್ಯಕ್ತಿಗಳ ನಡುವಿನ ದ್ವೇಷಗಳನ್ನೇ ಧರ್ಮದ ನಡುವಿನ ದ್ವೇಷಗಳೆಂದು ಬಿಂಬಿಸಲಾಗುತ್ತಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಗುರುಭವನದಲ್ಲಿ ಪಿರಮಿಡ್ ಸ್ಪಿರಿಚ್ಯುಲ್ ಸೊಸೈಟಿಸ್ ಮೂವ್ ಮೆಂಟ್ ಹಾಗೂ ರಾಮನಗರ ಪಿರಮಿಡ್ ಧ್ಯಾನ ಮಂದಿರದ ವತಿಯಿಂದ ಭಾನುವಾರ ನಡೆದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ಯುವ ಜನಾಂಗ ತಿಳಿದುಕೊಳ್ಳಬೇಕಾಗಿದೆ. ಬೆಂಗಳೂರಿನ ಬೆಳವಣಿಗೆ ಅಮೆರಿಕಾ ದೇಶಕ್ಕೂ ಭಯ ಹುಟ್ಟಿಸಿದೆ. 21ನೇ ಶತಮಾನ ಭಾರತೀಯರದಾಗಿದ್ದು, ಎಲ್ಲ ಮತ ಧರ್ಮದ ಯುವಕರು ಮೂಢನಂಬಿಕೆಗಳಿಂದ ಹೊರ ಬಂದು ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ತಿಳಿಸಿದರು.

ಹರಿಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚರಣೆಗೆ ಅವಕಾಶವಿದ್ದು, ಅನಿಷ್ಠ ಪಿಡುಗುಗಳನ್ನು ಸಾಮಾಜಿಕವಾಗಿ ಜನರ ಆಂದೋಲನದ ಮೂಲಕ ದೂರವಿಡಲು ಪ್ರಯತ್ನಿಸಬೇಕು.

ನಂಬಿಕೆ, ಮೂಢನಂಬಿಕೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ದೇಶದಲ್ಲಿ ಬದಲಾವಣೆ ಆಗಿದ್ದರೂ, ಕಾನೂನು ಇದ್ದರೂ ಅಸ್ಪೃಶ್ಯತೆಯಂತಹ ಆಚರಣೆಗಳನ್ನು ಪೂರ್ಣವಾಗಿ ತೊಡೆದು ಹಾಕಲು ನಮಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಪಿಡುಗುಗಳು ಇರುವವರೆಗೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಾರದು. ಇದು ವೆಜ್ಞಾನಿಕ ಕ್ರಾಂತಿಯ ಯುಗ. ಧರ್ಮ ಜಾತಿಗಳ ನಡುವೆ ಉಂಟಾಗಿರುವ ಕಂದಕಗಳನ್ನು ಮುಚ್ಚಿ ಸರ್ವ ಧರ್ಮ ಸಮನ್ವತೆಯಲ್ಲಿ ನಾವು ಮಂದುವರಿಯಬೇಕಾಗಿದೆ. ಇದಕ್ಕೆ ಇಂತಹ ಸರ್ವ ಧರ್ಮ ಸಮ್ಮೇಳನ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.

ಇನ್ನೊಂದು ಧರ್ಮಕ್ಕೆ ತೊಂದರೆ ಕೊಡಬಾರದು:

ಪರಮಾನಂದವಾಡಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಮಾನವನನ್ನು ಸನ್ಮಾರ್ಗದಲ್ಲಿ ನಡೆಸಿ ನಮ್ಮನ್ನು ನಾವು ಅರಿತುಕೊಳ್ಳಲು ನೆರವಾಗುವುದೇ ಧರ್ಮ. ಸರ್ವಜನರೂ ಒಂದಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ, ಎಲ್ಲರ ಏಳಿಗೆಗೆ ಶ್ರಮಿಸಿದರೆ ಅದು ವಿಶ್ವಧರ್ಮವಾಗುತ್ತದೆ. ಸರ್ವ ಧರ್ಮದ ಸದ್ಗುಣಗಳ ಸಾರ ಸೇರಿ ಸರ್ವಧರ್ಮ ಸಮ್ಮಿಲನವಾಗುತ್ತದೆ. ವಿಶ್ವದಲ್ಲಿ ಅನೇಕ ಧರ್ಮಗಳಿದ್ದು ಅವುಗಳ ಆಚರಣೆ, ಕ್ರಿಯೆ, ಸ್ವರೂಪಗಳಲ್ಲಿ ವ್ಯತ್ಯಾಸಗಳು, ಆಂತರಿಕ ಬೇಧಗಳಿದ್ದರೂ ಅಂತಿಮ ಲಕ್ಷ್ಯ ಮಾತ್ರ ಒಂದೇ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಅಂತಿಮ ಧ್ಯೇಯ. ಯಾವ ಧರ್ಮವು ಇನ್ನೊಂದು ಧರ್ಮಕ್ಕೆ ತೊಂದರೆ ಕೊಡುತ್ತದೆಯೋ, ಅದು ಧರ್ಮವಲ್ಲ ಎಂದು ಹೇಳಿದರು.

ಜಮಾಯತ್ ಸದ್ಭಾವನಾ ಮಂಚ್ ಸದಸ್ಯ ಮೊಹಮ್ಮದ್ ಜಾಫರ್ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ನೆರವಾಗಿ, ಅವರಿಗೆ ಆಶ್ರಯ, ಅನ್ನ, ಉದ್ಯೋಗ ಒದಗಿಸುವುದೇ ಶ್ರೇಷ್ಠ ಧರ್ಮ. ಮಾನವ ಒಂದೋ ವಿಜ್ಞಾನಿಯಾಗಬೇಕು. ಇಲ್ಲವೇ ತತ್ವಜ್ಞಾನಿಯಾಗಬೇಕು. ಆಗ ಮಾತ್ರ ಸರ್ವವನ್ನೂ ಒಪ್ಪಿ ಆಚರಿಸಲು ಸಾಧ್ಯವಾಗುತ್ತದೆ. ಆದರೆ ನಾವಿಂದು ಅಜ್ಞಾನಿಗಳಾಗುತ್ತಾ ವಿನಾಶ ಸೃಷ್ಟಿಸುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಬಿಕ್ಕು ದಮ್ಮಾ ತಿಸ್ಸಾ ಮಾತನಾಡಿ, ಧರ್ಮ ಮಾರ್ಗದಿಂದ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ. ಧರ್ಮ ಇರುವುದು ಮನುಷ್ಯನ ಸುಖಕ್ಕಾಗಿ. ಅವರಿಗೆ ಜೀವನದಲ್ಲಿ ಸನ್ಮಾರ್ಗವನ್ನು ತೋರುವುದಕ್ಕಾಗಿ. ಎಲ್ಲ ಧರ್ಮದ ಸಾರವನ್ನು ತಿಳಿದುಕೊಳ್ಳಬೇಕು. ಇಂದು ಜ್ಞಾನವನ್ನು ನೀಡುವ ವಿವಿಧ ಮೂಲಗಳಿವೆ. ಆದರೆ ಅದನ್ನು ಸ್ವೀಕರಿಸುವ ಮನಸ್ಸುಳ್ಳ ಜನರು ಕಡಿಮೆಯಾಗುತ್ತಿದ್ದಾರೆ ಎಂದು ತಿಳಿಸಿದರು.

ರಾಮನಗರ ಪಿರಮಿಡ್ ಧ್ಯಾನ ಮಂದಿರದ ಸಂಸ್ಥಾಪಕ ಎನ್. ಕೃಷ್ಣಪ್ಪ ಮಾತನಾಡಿ, ಧರ್ಮ ಜನರನ್ನು ಒಗ್ಗೂಡಿಸುವ ದಿವ್ಯ ಶಕ್ತಿಯನ್ನು ಹೊಂದಿದೆ. ಧರ್ಮ ಸಂರಕ್ಷಣೆ ಎಂದರೆ ಸಮಾಜದ ಸಂರಕ್ಷಣೆ. ನಮ್ಮ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು ಧರ್ಮ ಎನ್ನುತ್ತೇವೆ. ರಾಮನಗರದಲ್ಲಿ ಪಿರಮಿಡ್ ಧ್ಯಾನ ಮಂದಿರ ಸ್ಥಾಪಿಸಲಾಗಿದೆ. ಇಲ್ಲಿ ಎಲ್ಲರಿಗೂ ಉಚಿತವಾಗಿ ಧ್ಯಾನ ಹೇಳಿಕೊಡಲಾಗುತ್ತಿದೆ. ಒತ್ತಡ ರಹಿತ ಜೀವನ ನಡೆಸಲು ಧ್ಯಾನ ಸಹಕಾರಿಯಾಗಿದೆ ಎಂದು ತಿಳಿಸಿದರು.

ಬ್ರಹ್ಮರ್ಷಿ ಪ್ರೇಮನಾಥ್ ಮಾತನಾಡಿ, ಎಲ್ಲರೂ ಧರ್ಮದ ದಾರಿಯಲ್ಲಿ ನಡೆದರೆ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ. ಮನುಷ್ಯನು ಪರೋಪಕಾರದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಕೈಲಾದಷ್ಟು ಸಹಾಯವನ್ನು ಅಸಹಾಯಕರಿಗೆ ಮಾಡಬೇಕು ಎಂದು ಹೇಳಿದರು.

ಸಮ್ಮೇಳನದಲ್ಲಿ ಬೆಂಗಳೂರಿನ ಗೋವಿಂದರಾಜು, ಖಾಜಾ ನೂರುಲ್ಲುಷಾ ಅಶ್ರಫ್ ಉಪಸ್ಥಿತರಿದ್ದರು. ಸೌಭಾಗ್ಯಮ್ಮ, ಗಂಗನರಸಿಂಹಯ್ಯ ಪ್ರಾರ್ಥಿಸಿದರು. ಶಿಕ್ಷಕ ಈರಾನಾಯಕ್ ನಿರೂಪಿಸಿದರು. ಸುರೇಶ್ ಕುಮಾರ್ ವಂದಿಸಿದರು.

Share this article