ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ತಕ್ಷಣ ಕೈಬಿಡಿ: ಕೆ.ಟಿ.ಶಾಂತಕುಮಾರ್ ಒತ್ತಾಯ

KannadaprabhaNewsNetwork | Published : Mar 5, 2024 1:32 AM

ಸಾರಾಂಶ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕುಗಳ ಕೆರೆಗಳನ್ನು ತುಂಬಿಸಲು ಹೇಮಾವತಿ ನೀರು ತೆಗೆದುಕೊಂಡು ಹೋಗುವ ೯೮೬ ಕೋಟಿ ವೆಚ್ಚದ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ತುಮಕೂರು ಜಿಲ್ಲೆಯ ರೈತರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಶಾಂತಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ರಾಮನಗರ ಜಿಲ್ಲೆಯ ಮಾಗಡಿ ತಾಲೂಕುಗಳ ಕೆರೆಗಳನ್ನು ತುಂಬಿಸಲು ಹೇಮಾವತಿ ನೀರು ತೆಗೆದುಕೊಂಡು ಹೋಗುವ ೯೮೬ ಕೋಟಿ ವೆಚ್ಚದ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ತುಮಕೂರು ಜಿಲ್ಲೆಯ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ರೈತರಿಗೆ ಮಾಡಿದ ಮಹಾ ಮೋಸವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಮಂಜೂರಾತಿ ನೀಡಿರುವುದರಿಂದ ರಾಮನಗರ ಜಿಲ್ಲೆಗೆ ನಮ್ಮ ತುಮಕೂರಿನಿಂದ ನೀರು ಹರಿಸುವ ಹೇಮಾವತಿ ನಾಲೆಗೆ ಲಿಂಕ್ ಮಾಡಲಾಗಿದ್ದು, ಇದರಿಂದ ತುಮಕೂರು ಜಿಲ್ಲೆಗೆ ನೀರಿನ ಕೊರತೆ ಕಾಡಲಿದೆ. ಈಗಾಗಲೇ ತುಮಕೂರು ಜಿಲ್ಲೆಯ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ಜಿಲ್ಲೆಯ ಹಲವು ಕೆರೆಗಳು ನೀರು ತುಂಬಿಸಲಾಗದೆ ಕೃಷಿಗೆ ಹಿನ್ನಡೆಯಾಗಿದೆ. ಜಿಲ್ಲೆಯಾದ್ಯಂತ ಬೇಸಿಗೆ ಮುನ್ನವೇ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಎದುರಾಗಿದೆ. ತುಮಕೂರು ಜಿಲ್ಲೆಯ ಇದೇ ಕಾಂಗ್ರೆಸ್ ನಾಯಕರು ಅವೈಜ್ಞಾನಿಕ ಲಿಂಕ್ ಕೆನಾಲ್ ಮಂಜೂರಾಗಿದೆ ಎಂದು ಹಿಂದೆ ಇದ್ದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಅಂದಿನ ಸರ್ಕಾರ ಮಂಜೂರಾಗಿದ್ದ ಲಿಂಕ್ ಕೆನಾಲ್ ರದ್ದುಪಡಿಸಿ ಅದೇ ಹಣವನ್ನು ಹೇಮಾವತಿ ಕೆನಾಲ್ ಆಧುನೀಕರಣಕ್ಕೆ ಉಪಯೋಗಿಸಲು ಆದೇಶ ಮಾಡಿತ್ತು. ಆದರೆ ಅದೇ ಕಾಂಗ್ರೆಸ್ ಸರ್ಕಾರ ಮತ್ತೆ ಯೋಜನೆಯನ್ನು ಜಾರಿ ಮಾಡಿ ತುಮಕೂರು ಭಾಗದ ರೈತರಿಗೆ ಮೋಸ ಮಾಡುತ್ತಿದೆ ಎಂದಿದ್ದಾರೆ.

ಹೇಮಾವತಿ ಚಾನಲ್ ಆಧುನೀಕರಣಗೊಳಿಸಿದರೆ ಸರಾಗವಾಗಿ ನೀರು ಹರಿದು ಎಲ್ಲಾ ಕೆರೆಗಳು ಸಮರ್ಪವಾಗಿ ತುಂಬಿ ಕುಣಿಗಲ್ ಕೆರೆಯೂ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲ ಕೆರೆಗಳೂ ತುಂಬುವ ಅವಕಾಶಗಳಿವೆ. ತುಮಕೂರು ಜಿಲ್ಲೆಯ ಜನರನ್ನು ಹಾಗು ರೈತರನ್ನು ಉಳಿಸಲು ರಾಮನಗರ ಜಿಲ್ಲೆಗೆ ನೀರು ಕೊಂಡೊಯ್ಯುವ ಲಿಂಕ್ ಕೆನಾಲ್ ಯೋಜನೆಯನ್ನು ಈ ಕೂಡಲೇ ಕೈಬಿಡಬೇಕು. ಈ ಹಿಂದೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯ ಮೂಲಕ ರಾಮನಗರ ಜಿಲ್ಲೆಗೆ ನೀರು ಪೂರೈಸಲು ಹೋರಾಟ ನಡೆಸಿದ್ದು, ಅದರ ಮೂಲಕವೇ ರಾಮನಗರಕ್ಕೆ ನೀರು ಪೂರೈಸುವಂತೆ ಯೋಜನೆ ರೂಪಿಸಲಿ. ಅದು ಬಿಟ್ಟು ನಮ್ಮ ಜಿಲ್ಲೆಯ ನೀರನ್ನು ಅವರು ಬಳಸಿಕೊಳ್ಳುವುದು ಬೇಡ. ಈ ಬಗ್ಗೆ ಜಿಲ್ಲೆಯ ಯಾವ ಜನಪ್ರ ತಿನಿಧಿಗಳೂ ಚಕಾರವೆತ್ತದೆ ಮೌನವಾಗಿದ್ದು ಒಪ್ಪಿಗೆ ಸೂಚಿಸಿರುವುದು ಯಾವ ನ್ಯಾಯ. ಕೂಡಲೆ ಈ ಯೋಜನೆಯನ್ನು ಬಿಡಬೇಕೆಂದು ಕೆ.ಟಿ. ಶಾಂತಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

Share this article