ಮತಕ್ಕಾಗಿ ಕಾಂಗ್ರೆಸ್‌ನಿಂದ ಭಯೋತ್ಪಾದನೆಗೆ ಕುಮ್ಮಕ್ಕು

KannadaprabhaNewsNetwork | Published : Mar 7, 2024 1:53 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಈ ಸರ್ಕಾರದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಓಟ್ ಬ್ಯಾಂಕ್‌ಗಾಗಿ ಅಲ್ಪ ಸಂಖ್ಯಾತರನ್ನು ಓಲೈಸಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಈ ಸರ್ಕಾರದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಈ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಸ್. ಬಾಲರಾಜು ಮತ್ತು ಹಿಂದೂ ಜಾಗರಣೆ ವೇದಿಕೆಯ ಪ್ರಾಂತೀಯ ಸಂಚಾಲಕ ಮಹೇಶ್, ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಬಂದಾಗಿನಿಂದ ಅನೇಕ ಭಯೋತ್ಪಾದನಾ ದುಷ್ಕೃತ್ಯಗಳು ನಡೆಯುತ್ತಿವೆ. ಅದನ್ನು ತಡೆಯುವಲ್ಲಿ ಸರ್ಕಾರವು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭಯೋತ್ಪಾದನೆ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತೃಷ್ಟಿಕರಣ ರಾಜಕಾರಣದಿಂದಾಗಿ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗುತ್ತಿದೆ. ವಿಧಾನಸೌಧದಲ್ಲಿಯೇ ಪಾಕಿಸ್ತಾನ ಜಿಂದ್‌ಬಾದ್ ಘೋಷಣೆ ಕೂಗಿದ ವ್ಯಕ್ತಿಯ ರಕ್ಷಣೆಗೆ ಸರ್ಕಾರ ನಿಂತಿದೆ. ಎಫ್‌ಎಸ್‌ಎಲ್‌ ವರದಿ ಬಂದರು ಸಹ ಅದನ್ನು ಬಿಡುಗಡೆ ಮಾಡದೆ ವಿಳಂಬ ಮಾಡುವ ಮೂಲಕ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಜೊತೆಗೆ ಭಯೋತ್ಪಾದನೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದರು.

ಸಿಎಂ ಸೇರಿದಂತೆ ಸಚಿವ ಸಂಪುಟದ ಹಲವು ಸದಸ್ಯರು ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರ ಪರವಾಗಿ ಹೇಳಿಕೆ ನೀಡುವ ಮೂಲಕ ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು. ಇಸ್ಲಾಮಿಕ್ ಭಯೋತ್ಪಾದನೆಯು ರಾಜ್ಯದಲ್ಲಿ ಬೇರೂರುತ್ತಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುವವರ ವಿರುದ್ದ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೆ ಅವರ ಪರವಾಗಿ ಅವರ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವನ್ನು ಪುಷ್ಠೀಕರಿಸುತ್ತದೆ. ಭಯೋತ್ಪಾದನೆ, ಮತಾಂತರ, ಗೋಹತ್ಯೆ ಸೇರಿದಂತೆ ಹಿಂದೂಗಳ ಮೇಲೆ ನಿರಂತರವಾಗಿ ಪೊಲೀಸ್ ಇಲಾಖೆಯ ಮೂಲಕ ಭಯದ ವಾತಾವರಣದಲ್ಲಿರುವಂತೆ ಮಾಡಿದೆ.ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ವಿಫಲವಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭಯೋತ್ಪಾದನೆ ಹೇಳಿಕೆ ನೀಡಿ ಅದಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಅವರ ಹೇಳಿಕೆಯನ್ನು ಸಮರ್ಥನೆಗೊಳಿಸುವ ನಿಟ್ಟಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿರುವವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಹೊನ್ನಹಳ್ಳಿ ಪಿ. ವೃಷಬೇಂದ್ರಪ್ಪ , ಜಯಸುಂದರ, ನೂರೊಂದು ಶೆಟ್ಟಿ, ಸೂರ್ಯಕುಮಾರ್, ಶಾಂತಮೂರ್ತಿ, ಪುಟ್ಟಣ್ಣ, ಜೆ.ಪಿ.ದೊರೆಸ್ವಾಮಿ, ಮಹೇಶ್, ವಿರಾಟ್ ಶಿವು, ಶಿವರಾಜ್, ಸುಂದರ್‌ರಾಜ್, ಚಿಕ್ಕರಾಜು, ಮಹೇಂದ್ರಕುಮಾರ್, ಹೇಮಂತಕುಮಾರ್, ಚಂದ್ರಶೇಖರ್, ಮೇಗನಾಯಕ, ಆನಂದ ಭಗೀರಥ, ನಂದೀಶ್, ಪಿ. ರಂಗಸ್ವಾಮಿ, ಮಂಜುನಾಥ್, ನಾಗು ರಮೇಶ್, ಸರಸ್ವತಮ್ಮ, ಶಿವರುದ್ರಸ್ವಾಮಿ, ಸಂತೋಷ್ ಇತರರು ಭಾಗವಹಿಸಿದ್ದರು.

Share this article