ಪೇಜಾವರ ಶ್ರೀ ಅಭಿನವ ಆಂಜನೇಯ: ಪುತ್ತಿಗೆ ಶ್ರೀ

KannadaprabhaNewsNetwork | Published : Mar 18, 2024 1:55 AM

ಸಾರಾಂಶ

ಪೇಜಾವರ ಶ್ರೀಗಳನ್ನು ಭಕ್ತಾಭಿಮಾನಿಗಳು ಸ್ವಾಗತಿಸಿ ಉಡುಪಿಗೆ ಬರಮಾಡಿಕೊಂಡರು. ವಾಹನ ಜಾಥಾದಲ್ಲಿ ಬಂದ ಶ್ರೀಗಳನ್ನು ಮಾಲಾರ್ಪಣೆಯ ಮೂಲಕ ಭಕ್ತರು ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಯಲ್ಲಿ ಬಾಲರಾಮನ ವೈಭವದ ಪ್ರತಿಷ್ಠೆ ನಂತರ ಅಖಂಡ 48 ದಿನಗಳ ಕಾಲ ಮಂಡಲ ಪೂಜೆ ಮುಗಿಸಿ ಬಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿನವ ಆಂಜನೇಯ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.ಇದಕ್ಕೆ ಮೊದಲು ಅಯೋಧ್ಯೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪೇಜಾವರ ಶ್ರೀಗಳನ್ನು ಭಕ್ತಾಭಿಮಾನಿಗಳು ಸ್ವಾಗತಿಸಿ ಉಡುಪಿಗೆ ಬರ ಮಾಡಿಕೊಂಡರು. ಮಂಗಳೂರಿನಿಂದ ಉಡುಪಿಯವರೆಗೆ ವಾಹನಜಾಥಾದಲ್ಲಿ ಬಂದ ಶ್ರೀಗಳನ್ನು ಅಲ್ಲಿಲ್ಲಿ ಮಾಲಾರ್ಪಣೆಯ ಮೂಲಕ ಭಕ್ತರು ಗೌರವಿಸಿದರು. ಉಡುಪಿ ನಗರದ ಜೋಡುಕಟ್ಟೆಗೆ ಬಂದ ಶ್ರೀಗಳನ್ನು ನಂತರ ತೆರೆದ ವಾಹನದಲ್ಲಿ ನೂರಾರು ಬೈಕುಗಳ ಭವ್ಯ ರ್ಯಾಲಿಯಲ್ಲಿ ನಗರದೊಳಗೆ ಬರಮಾಡಿಕೊಳ್ಳಲಾಯಿತು. ರಥಬೀದಿಯ ಹೊರಭಾಗದ ಸಂಸ್ಕೃತ ಕಾಲೇಜಿನಿಂದ ಕೃಷ್ಣಮಠದವರೆಗೆ ಮಂಗಳವಾದ್ಯಘೋಷ, ಚಂಡೆವಾದನ, ವಿಶೇಷ ಮೆರವಣಿಗೆಯಲ್ಲಿ ಶ್ರೀಗಳು ಕರೆ ತರಲಾಯಿತು.ಎರಡು ತಿಂಗಳ ಬಳಿಕ ಉಡುಪಿಗೆ ಬಂದ ಶ್ರೀಗಳು ಮೊದಲು ರಥಬೀದಿಯ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇಗುಲಗಳಿಗೆ ಭೇಟಿ ಪೂಜೆ ಸಲ್ಲಿಸಿದರು. ಬಳಿಕ ಕೃಷ್ಣಮಠಕ್ಕೆ ಬಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನಗೈದರು. ಅವರಿಗೆ ಚಂದ್ರಶಾಲೆಯಲ್ಲಿ ಮಠದ ಸಾಂಪ್ರದಾಯಿಕ ಗಂಧಾದ್ಯುಪಾಚಾರ ಫಲಪುಷ್ಪ, ಮಾಲಿಕೆ ಮಂಗಳಾರತಿ ಅರ್ಪಿಸಲಾಯಿತು.‌ಅಲ್ಲಿಂದ ರಾಜಾಂಗಣಕ್ಕೆ ಕರೆತಂದು ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಸಾರ್ವಜನಿಕವಾಗಿ ಅದ್ದೂರಿಯ ಸನ್ಮಾನ ನಡೆಸಲಾಯಿತು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರನ್ನು ಕೂಡಿಕೊಂಡು ಪುತ್ತಿಗೆ ಶ್ರೀಗಳು ಪೇಜಾವರ ಶ್ರೀಗಳಿಗೆ ಹಾರ, ಶಾಲು, ಫಲ, ಪುಷ್ಪ ಕಿರೀಟ ಧಾರಣೆ ಮಾಡಿ, ಬೃಹತ್ ಕಡಗೋಲು ನೀಡಿ ಪುಷ್ಪಾರ್ಚನೆಗೈದು ರಜತಫಲಕ ಅಭಿನಂದನ ಪತ್ರವಿತ್ತು ಸತ್ಕರಿಸಿದರು.ಸೇತುವೆ ಕಟ್ಟಿದ ಪೇಜಾವರ ಶ್ರೀ: ನಂತರ ಪುತ್ತಿಗೆ ಶ್ರೀಗಳು ಅಭಿನವ ಆಂಜನೇಯ ಬಿರುದು ನೀಡಿ, ಪೇಜಾವರ ಶ್ರೀಗಳು ದಕ್ಷಿಣೋತ್ತರ ಭಾರತಗಳ ಸ್ನೇಹ ಸೇತುವೆ ಕಟ್ಟಿದ ಆಂಜನೇಯರಾಗಿದ್ದಾರೆ ಎಂದು ಕೊಂಡಾಡಿದರು.ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಮಠದ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ವಹಿಸಿದ್ದ ಮಹತ್ವದ ಪಾತ್ರವನ್ನು ಸ್ಮರಿಸಿದ ಅವರು ಆಯೋಧ್ಯೆಯ ಆಂಜನೇಯ ವಿಗ್ರಹ ಉಡುಪಿ ಕೃಷ್ಣಮಠದಲ್ಲಿ ಸ್ಥಾಪನೆಯಾಗಿದೆ. ಆಂಜನೇಯ ದೇವರೇ ಪೇಜಾವರ ಶ್ರೀಗಳ ಮೂಲಕ ರಾಮದೇವರ ಸೇವೆ ಮಾಡಿಸಿದ್ದಾರೆ, ಸ್ವತಃ ಆಂಜನೇಯ ದೇವರೇ ರಾಮನ ಸೇವೆ ಮಾಡಿದಂತಾಗಿದೆ ಎಂದರು.ಪೇಜಾವರ ಶ್ರೀಗಳು ಬಡವರಿಗೆ ಮನೆ ಕಟ್ಟಿಸಿಕೊಟ್ಟು ರಾಮರಾಜ್ಯ ನನಸು ಮಾಡುವ ಸಂಕಲ್ಪಕ್ಕೆ ತಮ್ಮ ಪರ್ಯಾಯ ಕಾಲದಲ್ಲೂ ಕೆಲವು ಬಡವರಿಗೆ ಮನೆ ಕಟ್ಟಿಸಿಕೊಟ್ಟು ಕೈಜೋಡಿಸುವುದಾಗಿ ಘೋಷಿಸಿದರು.ಮಥುರಾ ವಿಮೋಚನೆಯಾಗಬೇಕು: ಅಭಿನಂದನೆ ಸ್ವೀಕರಿಸಿದ ಪೇಜಾವರ ಶ್ರೀಗಳು, ತಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು ಉಡುಪಿ ಹಾಗೂ ಅಯೋಧ್ಯೆಯಲ್ಲಿ ವಿಶೇಷ ಸೇವೆ ಮಾಡಿದ್ದಾರೆ, ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ, ತಮಗೆ ಸಲ್ಲುತ್ತಿರುವ ಈ ಗೌರವ ಇಡೀ ಸಂತ ಸಮುದಾಯಕ್ಕೆ ಅರ್ಪಿಸುತ್ತೇನೆ ಎಂದರು

ಅಯೋಧ್ಯೆ ವಿಮೋಚನೆಗೆ ಉಡುಪಿ ಕೃಷ್ಣನೇ ಮೂಲ ಪ್ರೇರಣೆ, ತಾವು ನಡೆಸಿದ ಎಲ್ಲಾ ಸತ್ಕಾರ್ಯಗಳನ್ನು ಕೃಷ್ಣನಿಗೆ ಅರ್ಪಿಸಿದ್ದೇನೆ. ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ, ಉಡುಪಿ ಮುಖ್ಯಪ್ರಾಣ ದೇವರ ಶಕ್ತಿ ಮಥುರಾ ವಿಚಾರದಲ್ಲೂ ಕೆಲಸ ಮಾಡಲಿ ಆದಷ್ಟು ಬೇಗ ಮಥುರ ಕ್ಷೇತ್ರದ ವಿಮೋಚನೆಯಾಗಲಿ ಎಂದು ಆಶಿಸಿದರು.ಕೆಲಸ ಮಾಡಿ ಪ್ರಚಾರ ಪಡೆಯಲಿ: ರಾಮಮಂದಿರ ಈಗ ಚುನಾವಣಾ ವಿಚಾರವಾಗಿರುವ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು, ಎಲ್ಲಾ ಪಕ್ಷದವರು ರಾಮಮಂದಿರದ ಬಗ್ಗೆ ಕೆಲಸ ಮಾಡಲಿ ಮತ್ತು ಅವರೆಲ್ಲರೂ ರಾಮಮಂದಿರ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳಲಿ ಎಂದರು.ಪೇಜಾವರ ಶ್ರೀಗಳ ಅಭಿನಂದನ ಸಮಿತಿ ವತಿಯಿಂದ ಶಾಸಕ ಯಶ್ಪಾಲ್ ಸುವರ್ಣ ಮತ್ತು ರಘುಪತಿ ಭಟ್ಟರು ಮಾಲಾರ್ಪಣೆಗೈದು ಅಯೋಧ್ಯಾ ರಾಮ ಪ್ರಾಣಪ್ರತಿಷ್ಠಾಪನೆಗೈಯುವ ಸಂದರ್ಭದ ಬೃಹತ್ ಛಾಯಾಚಿತ್ರ ಸ್ಮರಣಿಕೆ ನೀಡಿದರು. ನಂತರ ಅನೇಕ ಸಂಘ ಸಂಸ್ಥೆಗಳ ಸದಸ್ಯರು ನಾಗರಿಕರು ಶ್ರೀಗಳಿಗೆ ಹಾರ ಫಲ ಪುಷ್ಪ ಸಮರ್ಪಿಸಿದರು.ಪರ್ಯಾಯ ಮಠದ ದಿವಾನರಾದ ಪ್ರಸನ್ನಾಚಾರ್ಯರ ಸ್ವಾಗತಿಸಿದರು, ವಿದ್ವಾನ್ ರಾಮನಾಥ ಆಚಾರ್ಯರಿಂದ ಅಭಿನಂದನಾ ನುಡಿಗಳನ್ನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.

Share this article